ETV Bharat / state

ರಾಮನಗರದ ವಕೀಲರ ಪ್ರತಿಭಟನೆ: ರಾಜಕೀಯ ಬಿಟ್ಟು ಚರ್ಚೆ ಮಾಡಿದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ - ಡಿಕೆಶಿ

author img

By ETV Bharat Karnataka Team

Published : Feb 20, 2024, 3:31 PM IST

ಡಿಸಿಎಂ ಡಿ.ಕೆ ಶಿವಕುಮಾರ್​
ಡಿಸಿಎಂ ಡಿ.ಕೆ ಶಿವಕುಮಾರ್​

​40 ವಕೀಲರ ಮೇಲೆ ರಾಮನಗರದ ಐಜೂರು ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿರುವುದನ್ನು ಖಂಡಿಸಿ‌ ಪ್ರತಿಭಟಿಸುತ್ತಿರುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು : ರಾಮನಗರದಲ್ಲಿ ಬಿಜೆಪಿಯವರು ವಕೀಲರನ್ನು ತಪ್ಪು ದಾರಿಗೆಳೆದು ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ರಾಜಕಾರಣ ಬಿಟ್ಟು ನಮ್ಮ ಬಳಿ ಬಂದು ಚರ್ಚೆ ಮಾಡಿದರೆ, ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಮನಗರದ 40 ವಕೀಲರ ಮೇಲಿನ ಪ್ರಕರಣ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಮನಗರದಲ್ಲಿ ರಾಜಕಾರಣ ನಡೆಯುತ್ತಿದೆ. ಬಿಜೆಪಿಯವರು ವಕೀಲರನ್ನು ದಾರಿ ತಪ್ಪಿಸಿದ್ದಾರೆ. ರಾಜಕಾರಣ ಮಾಡುವವರನ್ನು ನಾನು ಬೇಡ ಎನ್ನುವುದಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಲು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಸದನದಲ್ಲಿ ಸಮಯ ಕೇಳಿದ್ದಾರಂತೆ. ಅದಕ್ಕೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಕಾನೂನು ಬದ್ಧವಾಗಿ ಅಧಿಕಾರಿಗಳು ಎಲ್ಲರಿಗೂ ರಕ್ಷಣೆ, ಗೌರವ ನೀಡಬೇಕು. ನಮ್ಮ ಬಳಿ ಬಂದು ಕುಳಿತು ಮಾತನಾಡಿದರೆ ಚರ್ಚೆಗೆ ಸಿದ್ಧ. ರಾಜಕಾರಣವನ್ನೇ ಮಾಡುತ್ತೀವಿ ಎಂದರೆ ರಾಜಕಾರಣ ಮಾಡಿಕೊಳ್ಳಲಿ, ನಮ್ಮ ಅಭ್ಯಂತರವೇನೂ ಇಲ್ಲ ಎಂದರು.

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿಂದಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ನನಗೆ ಮಧ್ಯಪ್ರವೇಶಿಸುವ ಇಚ್ಛೆಯೂ ಇಲ್ಲ. ಅವರು ಬಂದು ತಮ್ಮ ನೋವನ್ನು ಹೇಳಿಕೊಂಡರೆ, ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇನೆ. ನಮಗೆ ವಕೀಲರು, ಅಧಿಕಾರಿಗಳು, ಸಾರ್ವಜನಿಕರ ಬಗ್ಗೆ ಸಮಾನ ಗೌರವವಿದೆ ಎಂದು ಡಿಕೆಶಿ ಹೇಳಿದರು.

ಕೇರಳದಲ್ಲಿ ಆನೆ ತುಳಿತದಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದರು.

ವಕೀಲರ ಪ್ರತಿಭಟನೆ ಹಿನ್ನೆಲೆ ಬಿಗಿ ಭದ್ರತೆ : ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಅಗರ್ವಾಲ್, ಬೆಂಗಳೂರು ಪರಿಷತ್ ಅಧ್ಯಕ್ಷ ವಿಶಾಲ್ ರಘು ನೇತೃತ್ವದಲ್ಲಿ ವಕೀಲರ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಾವಿರಾರು ವಕೀಲರು ಭಾಗಿಯಾಗಿಯಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಕಲ್ಪಿಸಲಾಗಿದೆ. 900ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಭದ್ರತಾ ಕಾರ್ಯಕ್ಕೆ ಒಬ್ಬ ಎಸ್ಪಿ, ಇಬ್ಬರು ಎಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಮೂರು ಮಂದಿ ಡಿವೈಎಸ್ಪಿ, 13 ಮಂದಿ ಸಿಪಿಐ, 45 ಪಿಎಸ್ಐ, 60 ಎಎಸ್ಐ, 700 ಮಂದಿ ಪೊಲೀಸ್ ಕಾನ್ಸ್​​ಟೇಬಲ್​ರನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ಕೆಎಸ್ಆರ್​ಪಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಚಲನ ವಲನಗಳ ಕಣ್ಗಾವಲಿನ ಉದ್ದೇಶಕ್ಕೆ 40 ಹ್ಯಾಂಡಿಕ್ಯಾಮ್, 2 ಡ್ರೋನ್​, 100 ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇಂದು ಕೂಡ ವಕೀಲರ ಪ್ರತಿಭಟನೆ ಮುಂದುವರೆದಿದೆ. ಪಿಎಸ್ಐ ಅಮಾನತು ಮಾಡುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.