ETV Bharat / state

ಅತ್ಯಾಚಾರ ಆರೋಪ ಪ್ರಕರಣ: ದೇವರಾಜೇಗೌಡ ನ್ಯಾಯಾಂಗ ಬಂಧನ ಜೂನ್ 7ರ ವರೆಗೆ ವಿಸ್ತರಣೆ - Devarajegowda Judicial Custody

author img

By ETV Bharat Karnataka Team

Published : May 25, 2024, 7:09 AM IST

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನ್ಯಾಯಾಂಗ ಬಂಧನ ಅವಧಿಯು ಮತ್ತೆ 14 ದಿನಗಳವರೆಗೆ ವಿಸ್ತರಣೆ ಆಗಿದೆ.

devarajegowda
ದೇವರಾಜೇಗೌಡ (ETV Bharat)

ಹಾಸನ: ಮಹಿಳೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ (ಜೂನ್ 7ರ ವರೆಗೆ) ವಿಸ್ತರಿಸಿ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಂಗ ಬಂಧನವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಅವರನ್ನು ಕೋರ್ಟ್​ಗೆ ಹಾಜರುಪಡಿಸಿದ್ದರು.

ದೇವರಾಜೇಗೌಡ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಹೊಳೆನರಸೀಪುರ ಪೊಲೀಸ್​​ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೇ 11ರಂದು ದೇವರಾಜೇಗೌಡರನ್ನು ಬಂಧಿಸಿದ್ದಾರೆ. ಆರಂಭದಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಎಂಎಫ್​​​​ಸಿ ಕೋರ್ಟ್ ಆದೇಶಿಸಿತ್ತು.

ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನ ತಮ್ಮ ಕಸ್ಟಡಿಗೆ ಅನುಮತಿ ಪಡೆದಿದ್ದರು. ಅದರಂತೆ ವಿಚಾರಣೆ ಮುಕ್ತಾಯ ಹಿನ್ನೆಲೆಯಲ್ಲಿ ಕೋರ್ಟ್​ಗೆ ಹಾಜರುಪಡಿಸಿ ಬಳಿಕ ಮೇ 24ರ ವರೆಗೂ ಜೆಎಂಎಫ್​ಸಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಒಂದು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು. ಶುಕ್ರವಾರಕ್ಕೆ ಈ ನ್ಯಾಯಾಂಗ ಬಂಧನ ಅವಧಿ ಮುಗಿದಿತ್ತು.

ಇದೀಗ ಮತ್ತೆ 14 ದಿನಗಳ ವಿಸ್ತರಣೆ ಹಿನ್ನೆಲೆಯಲ್ಲಿ ಜೂನ್ 7ರ ವರೆಗೆ ದೇವರಾಜೇಗೌಡ ನ್ಯಾಯಾಂಗ ಬಂಧನದಲ್ಲಿರಬೇಕಾಗಿದೆ. ಈ ನಡುವೆ ಮೇ 28 ರಂದು ದೇವರಾಜೇಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೆನ್​ಡ್ರೈವ್​​ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್: ನನಗೆ 100 ಕೋಟಿ ಆಫರ್​ ಕೊಟ್ಟಿದ್ದರು; ವಕೀಲ ದೇವರಾಜೇಗೌಡ ಆರೋಪ - Pen drive case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.