ETV Bharat / state

SSLC ಟಾಪರ್ ಅಂಕಿತಾಗೆ 5 ಲಕ್ಷ, 3ನೇ ಸ್ಥಾನ ಪಡೆದ ನವನೀತ್​ಗೆ 2 ಲಕ್ಷ ರೂ. ಉಡುಗೊರೆ ನೀಡಿದ ಡಿಸಿಎಂ - SSLC TOPPERS RECIVED BUMPER GIFT

author img

By ETV Bharat Karnataka Team

Published : May 14, 2024, 3:34 PM IST

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಮುಧೋಳದ ಅಂಕಿತಾಗೆ ಹಾಗೂ 3ನೇ ಸ್ಥಾನ ಪಡೆದ ಮಂಡ್ಯದ ನವನೀತ್​ಗೆ ಪ್ರೋತ್ಸಾಹ ಧನ ಘೋಷಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

DCM DK Shivakumar Announced Bumper Gift for SSLC toppers
ಎಸ್​ಎಸ್​ಎಲ್​ಸಿ ಟಾಪರ್​ಗಳಿಗೆ ಪ್ರೋತ್ಸಾಹ ಧನ ಘೋಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳದ ಅಂಕಿತಾಗೆ 5 ಲಕ್ಷ ರೂ. ನೀಡಿ ಹಾಗೂ 3ನೇ ಸ್ಥಾನ ಪಡೆದ ಮಂಡ್ಯದ ನವನೀತ್​ಗೆ 2 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

DCM DK Shivakumar Announced Bumper Gift for SSLC toppers
ಮುಧೋಳದ ಅಂಕಿತಾಗೆ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಡಿಸಿಎಂ ಅವರ ಆಹ್ವಾನದ ಮೇರೆಗೆ ಅಂಕಿತಾ, ಆಕೆಯ ಪೋಷಕರು ಮತ್ತು ಶಾಲೆಯವರು, ನವನೀತ್ ಅವರ ಕುಟುಂಬದವರು ಸದಾಶಿವನಗರ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ 3ನೇ ರಾಂಕ್ ಗಳಿಸಿರುವ ಮಂಡ್ಯದ ನವನೀತ್ ಕೂಡ ಆಗಮಿಸಿದ್ದರು. ಡಿ.ಕೆ.ಶಿವಕುಮಾರ್ ಅವರು ಇಬ್ಬರೂ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಂಕಿತಾ ಅವರಿಗೆ 5 ಲಕ್ಷ ರೂ. ಚೆಕ್ ನೀಡಿದರು. ನವನೀತ್​ಗೆ 2 ಲಕ್ಷ ರೂ. ಉಡುಗೊರೆ ಪ್ರಕಟಿಸಿ ಚೆಕ್ ನೀಡುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಮೊನ್ನೆ 10ನೇ ತರಗತಿ ಫಲಿತಾಂಶ ನೋಡಿದಾಗ, ಬಾಗಲಕೋಟೆಯ ಬಸವರಾಜು ಅವರ ಪುತ್ರಿ ಅಂಕಿತಾ 625ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಯಿತು, ಬಹಳ ಹೆಮ್ಮೆ ಎನಿಸಿತು. ನಮ್ಮ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರು ಬಹಳ ಸಮರ್ಥರಿದ್ದಾರೆ. ಅಂಕಿತಾ ಜತೆ ನಾನು ದೂರವಾಣಿ ಕರೆ ಮೂಲಕ ಮಾತನಾಡಿ ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಅವರು ಇಂದು ಆಗಮಿಸಿದ್ದಾರೆ. ಸರ್ಕಾರದ ಪರವಾಗಿ ನಾನು ಈ ಹೆಣ್ಣುಮಗಳು ಹಾಗೂ ಆಕೆಯ ಪೋಷಕರನ್ನು ಅಭಿನಂದಿಸುತ್ತೇನೆ ಎಂದರು.

ಇವರ ಮುಂದಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಹಣ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇನ್ನು ಮಂಡ್ಯದ ನವನೀತ್ ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಮೂರನೇ ಸ್ಥಾನ ಪಡೆದಿದ್ದು, ಈತನಿಗೆ 2 ಲಕ್ಷ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

DCM DK Shivakumar Announced Bumper Gift for SSLC toppers
ಮಂಡ್ಯದ ನವನೀತ್​ಗೆ 2 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)

ನನ್ನ ಆಸಕ್ತಿ ರಾಜಕಾರಣವಾದರೂ ನನ್ನ ಆಯ್ಕೆ ಶಿಕ್ಷಣ ಕ್ಷೇತ್ರ ಎಂದು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಗ್ರಾಮೀಣ ಭಾಗದ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ವಿಶ್ವ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾಡುವುದು ನನ್ನ ಗುರಿ ಎಂದರು.

ಸರ್ಕಾರದ ಹಣ ಬಳಸದೇ, ಸಿಎಸ್ಆರ್ ನಿಧಿ ಮೂಲಕ ಈ ಶಾಲೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇವುಗಳ ನಿರ್ಮಾಣದ ಸಭೆ ಕರೆಯುತ್ತೇನೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಶಾಲೆಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಟಾಪರ್ ಅಂಕಿತಾಗೆ ಕರೆ ಮಾಡಿ ಶುಭಹಾರೈಸಿದ ಸಚಿವ ಮಧು ಬಂಗಾರಪ್ಪ - Madhu Bangarappa Called Sslc Topper

ETV Bharat Logo

Copyright © 2024 Ushodaya Enterprises Pvt. Ltd., All Rights Reserved.