ETV Bharat / state

ವರ್ಕ್ ಫ್ರಮ್ ಹೋಮ್​ ಸೋಗಿನಲ್ಲಿ ಕೋಟ್ಯಂತರ ರೂ. ವಂಚನೆ: 11 ಮಂದಿ ಬಂಧನ, 2,143 ಪ್ರಕರಣ ಬಯಲು

author img

By ETV Bharat Karnataka Team

Published : Jan 30, 2024, 4:12 PM IST

Updated : Jan 31, 2024, 6:15 PM IST

ವಂಚನೆಗೊಳಗಾದ ಭವ್ಯಾ ಎನ್ನುವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ಭೇದಿಸಿದ ಬೆಂಗಳೂರು ಸೈಬರ್​ ಕ್ರೈಂ ಪೊಲೀಸರು ರಾಜ್ಯ ಸೇರಿದಂತೆ ಅಂತಾರಾಜ್ಯದ 11 ಆರೋಪಿಗಳನ್ನು ಬಂಧಿಸಿದ್ದಾರೆ.

Cyber Crime
ಸೈಬರ್​ ಕ್ರೈಂ

ಪ್ರಕರಣದ ಬಗ್ಗೆ ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್ ಮಾಹಿತಿ

ಬೆಂಗಳೂರು: ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡಬಹುದು ಎನ್ನುವ ಆಮಿಷವೊಡ್ಡಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಬಯಲಿಗೆಳಿದಿರುವ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು 11 ಮಂದಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

ವಿದ್ಯಾರಣ್ಯಪುರ ನಿವಾಸಿ ಭವ್ಯಾ ಎಂಬುವರಿಗೆ ಟ್ರೇಡ್ ಸ್ಟೇಷನ್ ಕಂಪೆನಿ ಹೆಸರಿನಲ್ಲಿ ಸಂಪರ್ಕಿಸಿದ್ದ ಆರೋಪಿಗಳು ಹಣ ಹೂಡಿಕೆ ಮಾಡಿದರೆ ಮನೆಯಲ್ಲಿ ಕುಳಿತು ಹೆಚ್ಚುವರಿ ಹಣ ಸಂಪಾದಿಸಬಹುದು ಎಂಬ ಪೊಳ್ಳು ಭರವಸೆಯನ್ನು ನೀಡಿದ್ದರು. ಇದನ್ನು ನಂಬಿ ಅವರು ಹೂಡಿಕೆಯನ್ನೂ ಮಾಡಿದ್ದರು. ಆದರೆ ಆರೋಪಿಗಳು ಭವ್ಯಾ ಅವರಿಗೆ ಹಂತ-ಹಂತವಾಗಿ 18.75 ಲಕ್ಷ ರೂಪಾಯಿ ವಂಚಿಸಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಅಮಿರ್ ಸುಹಾಲಿ, ಇನಾಯತ್ ಖಾನ್, ನಯಾಜ್ ಅಹಮದ್, ಆದಿಲ್ ಆಗಾ, ಸಯ್ಯದ್ ಅಬ್ಬಾಸ್ ಆಲಿಖಾನ್ ಹಾಗೂ ಮಿಥುಲ್ ಮನೀಶ್ ಷಾ ಸೇರಿದಂತೆ ರಾಜ್ಯ ಹಾಗೂ ಅಂತಾರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ನಗರ ಆಯುಕ್ತ ಬಿ. ದಯಾನಂದ್, "ಮುಗ್ಧ ಜನರನ್ನು ಗುರಿಯಾಗಿಸಿ ಅವರ ವಾಟ್ಸ್ಯಾಪ್ ನಂಬರ್​ಗಳಿಗೆ 'ಮನೆಯಲ್ಲಿ‌ ಕುಳಿತು ದಿನಕ್ಕೆ ಸಾವಿರಾರು ರೂ. ಸಂಪಾದಿಸಬಹುದು' ಎನ್ನುವ ಸಂದೇಶದ ಮೂಲಕ ಆಮಿಷವೊಡ್ಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಬಳಿಕ ಟೆಲಿಗ್ರಾಮ್ ವಿಐಪಿ ವಿಎನ್ 6 ಗ್ರೂಪ್ ಮೂಲಕ ಇಂತಿಷ್ಟು ಟಾಸ್ಕ್​ಗಳಿಗೆ‌ ಇಂತಿಷ್ಟು ಕಮಿಷನ್ ಎಂದು‌ ನಿಗದಿಪಡಿಸಿದ್ದರು. ಆರಂಭದಲ್ಲಿ ಕಮಿಷನ್ ನೀಡಿದ್ದ ಆರೋಪಿಗಳು ಬಳಿಕ ದೂರುದಾರರಿಂದ ಹಂತ-ಹಂತವಾಗಿ 18.75 ಲಕ್ಷ ರೂಪಾಯಿ ವಂಚಿಸಿದ್ದರು." ಎಂದು ತಿಳಿಸಿದರು.

"ವಂಚನೆ ಪ್ರಕರಣ ದಾಖಲಿಸಿಕೊಂಡ ಇನ್​ಸ್ಪೆಕ್ಟರ್ ಹಜರೇಶ್ ಕಿಲೆದಾರ್ ನೇತೃತ್ವದ ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸಿ ಸ್ಥಳೀಯರಿಬ್ಬರು ಸೇರಿದಂತೆ‌ ತೆಲಂಗಾಣ ಹಾಗೂ ಮಹಾರಾಷ್ಟ್ರ ಮೂಲದ 11 ಮಂದಿ ಆರೋಪಿಗಳನ್ನು ಬಂಧಿಸಿ ಅವರ ಬ್ಯಾಂಕ್ ಅಕೌಂಟ್​ನಲ್ಲಿದ್ದ 62 ಲಕ್ಷ ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಿವಿಧ‌ ಕಂಪೆನಿಯ 11 ಮೊಬೈಲ್ ಫೋನ್​ಗಳು, 2 ಲ್ಯಾಪ್​ಟಾಪ್, 15 ಸಿಮ್ ಕಾರ್ಡ್ ಹಾಗೂ 3 ಬ್ಯಾಂಕ್ ಚೆಕ್ ಬುಕ್ ಸೇರಿ ಇನ್ನಿತರ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಮಾಹಿತಿ ನೀಡಿದರು.

"ಆರೋಪಿಗಳನ್ನು ಬಂಧಿಸಿ ಕೂಲಂಕಶವಾಗಿ ತನಿಖೆ ನಡೆಸಿದಾಗ ದೇಶದ 28 ರಾಜ್ಯಗಳಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಎನ್​ಸಿಆರ್​ಪಿ ಪೋರ್ಟಲ್​ನಲ್ಲಿ ಒಟ್ಟು 2,143 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 265 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬೆಂಗಳೂರು ನಗರದ 14 ಪೊಲೀಸ್​ ಠಾಣೆಗಳಲ್ಲಿ 135 ಕೇಸ್​ಗಳು ದಾಖಲಾಗಿವೆ. ಒಟ್ಟು 2,143 ಪ್ರಕರಣಗಳಲ್ಲಿ ಆರೋಪಿಗಳು 158 ಕೋಟಿ ರೂಪಾಯಿ ವಂಚಿಸಿದ್ದು, ಈ‌ ಹಣವನ್ನು ವರ್ಗಾಯಿಸಿಕೊಂಡಿದ್ದ 30 ಬ್ಯಾಂಕ್ ಅಕೌಂಟ್ ಖಾತೆಗಳನ್ನು ಪ್ರೀಜ್ ಮಾಡಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಮೆಕ್ಯಾನಿಕಲ್ ಇಂಜಿನಿಯರ್ ಬಂಧನ

Last Updated : Jan 31, 2024, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.