ETV Bharat / state

ಬೆಂಗಳೂರು ಶಿಕ್ಷಕರ ಕ್ಷೇತ್ರದ ಜಿದ್ದಾಜಿದ್ದಿನ ಉಪಚುನಾವಣೆ; ಕೈ ಅಭ್ಯರ್ಥಿ ಪುಟ್ಟಣ್ಣ ಜಯಭೇರಿ, ದೋಸ್ತಿಗೆ ಮುಖಭಂಗ

author img

By ETV Bharat Karnataka Team

Published : Feb 20, 2024, 9:04 PM IST

Updated : Feb 20, 2024, 9:58 PM IST

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎ ಪಿ ರಂಗನಾಥ್ ಪರಾಭವಗೊಂಡಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಜಿದ್ದಾಜಿದ್ದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ ಪಿ ರಂಗನಾಥ್ ಪರಾಭವಗೊಂಡಿದ್ದು, ಎರಡೂ ಪಕ್ಷಗಳ ದೋಸ್ತಿಗೆ ಮುಖಭಂಗವಾಗಿದೆ.

ಮೊನ್ನೆ ಫೆ. 19 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಜರುಗಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆಗಿಳಿದಿದ್ದ ವಿಧಾನಪರಿಷತ್ತಿನ ಮಾಜಿ ಉಪ ಸಭಾಪತಿ ಪುಟ್ಟಣ್ಣ 1507 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ ಪಿ ರಂಗನಾಥ್ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ

ಮತ ಎಣಿಕೆಯ ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮುನ್ನಡೆ ಸಾಧಿಸಿಕೊಂಡೇ ಬಂದರು. ಚುನಾವಣೆಯಲ್ಲಿ ಪುಟ್ಟಣ್ಣಗೆ 8260 ಮತಗಳು, ಜೆಡಿಎಸ್ ಅಭ್ಯರ್ಥಿ ಎ ಪಿ ರಂಗನಾಥ್​ಗೆ 6753 ಮತಗಳು ಲಭಿಸಿವೆ. 1239 ಶಿಕ್ಷಕರ ಮತಗಳು ತಿರಸ್ಕೃತಗೊಂಡಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 19152 ಮತದಾರರ ಪೈಕಿ 16544 ಮತಗಳು ಚಲಾವಣೆಯಾಗಿದ್ದವು. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾವಣೆ ಮಾಡಿದ್ದರು. 10040 ಶಿಕ್ಷಕಿಯರು ಮತ್ತು 6504 ಶಿಕ್ಷಕರುಗಳು ಈ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದರು.

ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನವಿ ಮೇರೆಗೆ ಬಿಜೆಪಿಯು ತನ್ನ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪುಟ್ಟಣ್ಣ ಈ ಹಿಂದೆ ಜಯಗಳಿಸಿದ್ದರು. ನಂತರ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುಟ್ಟಣ್ಣ ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನ ರಾಜಾಜಿನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ವಿರುದ್ಧ ಸೋಲನುಭವಿಸಿದ್ದರು. ಈಗ ಮತ್ತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಪುಟ್ಟಣ್ಣ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಎರಡೂ ಪಕ್ಷಗಳ ದೋಸ್ತಿ ಅಭ್ಯರ್ಥಿಯಾಗಿ ಜೆಡಿಎಸ್​ನ ಯುವ ಮುಖಂಡರಾದ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಅವರನ್ನು ಕಣಕ್ಕಿಳಿಸಲಾಗಿತ್ತು. ರಾಜಕಾರಣದಲ್ಲಿ ಜೆಡಿಎಸ್ ಗರಡಿಯಲ್ಲೇ ಪಳಗಿದ ಪುಟ್ಟಣ್ಣ ಅವರನ್ನು ಜೆಡಿಎಸ್ ಅಭ್ಯರ್ಥಿ ಎ ಪಿ ರಂಗನಾಥ್ ಉಪ ಚುನಾವಣೆಯಲ್ಲಿ ಮಣಿಸಲು ವಿಫಲವಾಗಿದ್ದಾರೆ. ಲೋಕಸಭೆ ಚುನಾವಣೆ ಸನಿಹದಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್​ಗೆ ಹುಮ್ಮಸ್ಸು ನೀಡಿದರೆ, ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಪಕ್ಷಕ್ಕೆ ಕಳವಳ ಉಂಟುಮಾಡಿದೆ.

ಬಿಜೆಪಿ - ಜೆಡಿಎಸ್ ಮೈತ್ರಿಗೆ ಮನ್ನಣೆಯಿಲ್ಲ-ಸಿಎಂ ಸಿದ್ದು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ. ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರರು ಕಪಾಳಮೋಕ್ಷ ಮಾಡಿದ್ದಾನೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮೈತ್ರಿಯಾಗಿದೆಯೇ ವಿನಃ ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ಈ ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.

ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರಿಗೆ ಅಭಿನಂದನೆ ತಿಳಿಸಿರುವ ಸಿಎಂ, ಇದು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ. ಇದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಡುವಿನ ಮೈತ್ರಿಯೇ ಹೊರತು ಎರಡೂ ಪಕ್ಷಗಳ ಮತದಾರರ ನಡುವಿನ ಮೈತ್ರಿಯಲ್ಲ ಎಂಬುದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕುಟುಂಬದ ಹಿತಕ್ಕಾಗಿ‌ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಜೆಡಿಎಸ್ ಪಕ್ಷವನ್ನು ಹಾಗೂ ಸದಾಕಾಲ ಕುಟುಂಬ ರಾಜಕಾರಣದ ವಿರುದ್ಧ ಟೀಕೆ ಮಾಡಿ, ಒಂದು ಕುಟುಂಬವೇ ರಾಜಕೀಯ ಪಕ್ಷದಂತಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯನ್ನು ಮತದಾರರು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದನ್ನೂ ಓದಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ನಲ್ಲಿ 21ಕ್ಕೂ ಹೆಚ್ಚು ಆಕಾಂಕ್ಷಿಗಳು; ಮತದಾರರ ಸಂಖ್ಯೆ ಎಷ್ಟು?

Last Updated : Feb 20, 2024, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.