ETV Bharat / state

ಕಾಂಗ್ರೆಸ್ ಸರ್ಕಾರ ಅವರದ್ದೇ ಭಾರದಿಂದ ಕುಸಿದು ಬೀಳಲಿದೆ: ವಿ.ಸುನೀಲ್ ಕುಮಾರ್ - SunilKumar attack on Congress

author img

By ETV Bharat Karnataka Team

Published : May 11, 2024, 5:39 PM IST

ಕಾಂಗ್ರೆಸ್​ನಲ್ಲಿ ನಾಲ್ಕು ಮಂದಿ ನಾಯಕತ್ವಕ್ಕೆ ತೆರೆಮರೆ ಪೈಪೋಟಿ ನಡೆಯುತ್ತಿದ್ದು, ಅವರದೇ ಭಾರದಿಂದ ಸರ್ಕಾರ ಕುಸಿಯಲಿದೆ ಎಂದರು.

congress-government-will-demolish-with-their-own-party-leaders
congress-government-will-demolish-with-their-own-party-leaders (ವಿ.ಸುನೀಲ್ ಕುಮಾರ್ ಸುದ್ದಿಗೋಷ್ಠಿ)

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅವರದೇ ಭಾರದಿಂದ ಕುಸಿದು ಬೀಳಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಚುನಾವಣಾ ಅವಲೋಕನ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವಕ್ಕಾಗಿ 4 ರೀತಿಯ ಪೈಪೋಟಿ ಕಾಂಗ್ರೆಸ್ ಪಕ್ಷದಲ್ಲಿದೆ. ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾಡಿದ ಭಾಷಣ ಇದಕ್ಕೆ ಜ್ವಲಂತ ಉದಾಹರಣೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ತಮ್ಮ ಕುರ್ಚಿ ಮೇಲೆ ಅಪಾಯ ಇದೆ. ಒಕ್ಕಲಿಗರು ಸಿಎಂ ಆಗುವುದಾಗಿ ಡಿ.ಕೆ.ಶಿವಕುಮಾರ್ ಅವರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಗುಪ್ತಗಾಮಿನಿ ರೂಪದಲ್ಲಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಈ ಚುನಾವಣೆಯನ್ನೂ ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಜೆಡಿಎಸ್​ ಜೊತೆಗಿನ ಸಂಬಂಧ ಕುರಿತು ಸುದೀರ್ಘವಾದ ಸಭೆ ನಡೆಸಲಾಗಿದೆ. ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಕೊರತೆ ಆಗಿಲ್ಲ. ಜೆಡಿಎಸ್ ಸ್ಪರ್ಧಿಸಿದ 3 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಮ್ಮ ಕಾರ್ಯಕರ್ತರು ಚುನಾವಣಾ ಕಾರ್ಯಕ್ಕೆ ಧುಮುಕಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸಹಕಾರ ನಮಗೆ ಕೊಟ್ಟಿದೆ. ಎಲ್ಲ 28 ಕ್ಷೇತ್ರದಲ್ಲಿ ಗೆಲುವಿನ ಉತ್ಸಾಹದಲ್ಲಿ ನಾವಿದ್ದೇವೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುವಂಥ ಪ್ರಯತ್ನ ಯಶಸ್ವಿಯಾಗಿ ನಡೆದಿದೆ. 3 ರೀತಿಯ ಸಾರ್ವಜನಿಕ ಸಂಪರ್ಕವನ್ನು ಯಶಸ್ವಿಯಾಗಿ ಮಾಡಿದ್ದೇವೆ. ದೊಡ್ಡ ದೊಡ್ಡ ಸಾರ್ವಜನಿಕ ಸಭೆ, ರೋಡ್ ಶೋ, ಮನೆಯಂಗಳದ ಸಭೆಗಳ ಮೂಲಕ ಸಾರ್ವಜನಿಕರನ್ನು ಸರ್ಕಾರದ ಸಾಧನೆ ತಿಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೇರಿದಂತೆ 14 ಜನ ರಾಷ್ಟ್ರೀಯ ಪ್ರಮುಖರು ಕರ್ನಾಟಕದಲ್ಲಿ 79 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. 39 ಕಡೆಗಳಲ್ಲಿ ರೋಡ್ ಶೋ, ರಾಜ್ಯದ 30 ನಾಯಕರಿಂದ 557 ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಸಣ್ಣ ಸಭೆಗಳು, ಕಾಂಗ್ರೆಸ್ ಅಪಪ್ರಚಾರ, ಡೇಂಜರ್ ಕಾಂಗ್ರೆಸ್ ಎಂದು ತಿಳಿಸಲು ‘ಮನೆಯಂಗಳದಲ್ಲಿ ಸಭೆ’ ಎಂಬ ಕರೆ ಕೊಡಲಾಗಿದ್ದು, 50-75 ಜನರನ್ನು ಒಳಗೊಂಡ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಸಭೆಗಳು ಎಲ್ಲ ಬೂತ್‍ಗಳಲ್ಲಿ ಮಾಡಿರುವುದು ಈ ಚುನಾವಣೆಯ ವಿಶೇಷ ಎಂದು ಮಾಹಿತಿ ನೀಡಿದರು.

ವಿಧಾನಪರಿಷತ್ ಚುನಾವಣೆಗೆ ಶೀಘ್ರವೇ ಅಭ್ಯರ್ಥಿಗಳ ವಿವರ : ಜೂ. 3ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿ ತಯಾರಿ ಪ್ರಕ್ರಿಯೆಗಳನ್ನು ಇವತ್ತು ಆರಂಭಿಸಲಿದ್ದೇವೆ. ವಿಧಾನಪರಿಷತ್ತಿನ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಪದವೀಧರರು, ಶಿಕ್ಷಕರ ಕ್ಷೇತ್ರದಲ್ಲಿ ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಮುಗಿದು ಸ್ಥಳೀಯ ಮಟ್ಟದಲ್ಲಿ ಮತದಾರರ ಸಂಪರ್ಕ ಕಾರ್ಯ ನಡೆಯುತ್ತಿದೆ. ನಾಳೆ ಬೆಳಗ್ಗೆಯೊಳಗೆ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಪ್ರಕಟಿಸಲಿದೆ.

ಚುನಾವಣಾ ಆಯೋಗಕ್ಕೆ 152 ದೂರು: ಚುನಾವಣೆ ಘೋಷಣೆ ಆದ ದಿನದಿಂದ ಚುನಾವಣೆ ಮುಗಿಯುವ ತನಕ 152 ದೂರುಗಳನ್ನು ಚುನಾವಣಾ ಆಯೋಗಕ್ಕೆ ನಾವು ಕೊಟ್ಟಿದ್ದೇವೆ. ಆಡಳಿತ ಯಂತ್ರದ ಸಂಪೂರ್ಣ ದುರುಪಯೋಗವನ್ನು ಕಾಂಗ್ರೆಸ್ ಸಹಜವಾಗಿ ಕರ್ನಾಟಕದಲ್ಲಿ ಮಾಡಿದೆ. ಎಲ್ಲ ಜಿಲ್ಲೆ- ತಾಲ್ಲೂಕುಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬೆದರಿಸುವ, ಹೆದರಿಸುವ ತಂತ್ರವನ್ನು ಮತ್ತು ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕುವ ವ್ಯಾಪಕ ದೌರ್ಜನ್ಯದ ಕಾರ್ಯವನ್ನು ಆಡಳಿತ ಪಕ್ಷ ಮಾಡಿದೆ. ಇವುಗಳ ವಿರುದ್ಧ ಸ್ಥಳೀಯವಾಗಿ ದೂರು ಕೊಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ: ಬಿಜೆಪಿಯಿಂದ ಈಗಾಗಲೇ ಶಸ್ತ್ರತ್ಯಾಗ, ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾ‌ನ ಗೆಲ್ಲುತ್ತೆ: ಪ್ರಿಯಾಂಕ್​ ಖರ್ಗೆ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.