ETV Bharat / state

ಈ ಚುನಾವಣೆ ಗೆಲ್ಲಲೇಬೇಕೆಂದು ಗಂಭೀರವಾಗಿ ತೆಗೆದುಕೊಂಡಿದ್ದೇವೆ : ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್​ - M LAKSHMAN INTERVIEW

author img

By ETV Bharat Karnataka Team

Published : Apr 4, 2024, 5:20 PM IST

ಈ ಚುನಾವಣೆಯನ್ನು ನಾವು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಖುದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೇ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್​ ತಿಳಿಸಿದ್ದಾರೆ.

Congress candidate M. Lakshman
ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್​

ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್​

ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆಲ್ಲಲೇಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಪ್ರಚಾರ ಆರಂಭಿಸಿದ್ದು, ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನಗೊಂದು ಅವಕಾಶ ಕೊಡಿ ಎಂದು ಕೇಳುತ್ತಾ ಇದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಇಂದು ಈಟಿವಿ ಭಾರತ್ ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್, ಕಳೆದ ಒಂದು ತಿಂಗಳಿಂದ ಪ್ರಚಾರ ಆರಂಭಿಸಿದ್ದು, ಎಲ್ಲಾ ಕಡೆ ಮತದಾರರಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚುನಾವಣೆಯನ್ನು ನಾವು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಖುದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು. 47 ವರ್ಷದ ನಂತರ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಸಿಕ್ಕಿದೆ. ಈ ಬಾರಿ ಎಲ್ಲರೂ ನನಗೆ ಆಶೀರ್ವಾದ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರಚಾರ ಹೇಗಿದೆ? : ನಾವು ಪ್ರಚಾರ ಶುರು ಮಾಡಿ ಆಗಲೇ 1 ತಿಂಗಳು ಆಯಿತು. ಇವತ್ತು ನಮ್ಮ ವಕೀಲರ ಸಂಘದಿಂದ ಪ್ರಚಾರವನ್ನು ಹಮ್ಮಿಕೊಂಡಿದ್ದೇವೆ. ಒಳ್ಳೆ ರೆಸ್ಪಾನ್ಸ್ ಸಿಕ್ತಾ ಇದೆ. ನಮ್ಮ ಜನರು ಅದರಲ್ಲೂ ಪ್ರಮುಖವಾಗಿ ವಕೀಲರು ಬುದ್ಧಿಜೀವಿಗಳು. ಕೆಲವು ವಕೀಲರು ನನಗೆ ಹೇಳಿದ್ದೇನು ಅಂದರೆ, ಪಾರ್ಲಿಮೆಂಟ್​ಗೆ ಹೋಗಿ ಸೈನ್ ಮಾಡಿ ಟಿಎ ಕಲೆಕ್ಟ್ ಮಾಡಿಕೊಂಡು ಬರುವ ವ್ಯಕ್ತಿ ಬೇಡ. ನಮ್ಮ ರಾಜ್ಯದ ಬಗ್ಗೆ, ನಮ್ಮ ಲೋಕಸಭಾ ಕ್ಷೇತ್ರದ ಸಮಸ್ಯೆಯ ಬಗ್ಗೆ ಎಫೆಕ್ಟಿವ್ ಆಗಿ ವಾದ ಮಾಡುವ ವ್ಯಕ್ತಿ ಬೇಕು ಎಂದರು. ಅದರಲ್ಲಿ ನಾವು ನಿಮ್ಮನ್ನ ಕಣ್ಣಾರೆ ನೋಡಿದ್ದೇವೆ. ನೀವು ಸೂಕ್ತವಾದ ಅಭ್ಯರ್ಥಿ. ಯಾವುದೇ ಪಕ್ಷ ಇರಬಹುದು, ಯಾವುದೇ ಜಾತಿ ಇರಬಹುದು, ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಅವರು ನಮಗೆ ಆಶ್ವಾಸನೆ ಕೊಟ್ಟಿದ್ದಾರೆ ಎಂದರು.

ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು, ರಾಜ್ಯದ ನಾಯಕರುಗಳು ಮೈಸೂರು-ಕೊಡಗಿನ 8 ಕ್ಷೇತ್ರಗಳ ಎಂಎಲ್​ಎಗಳು, ನಮ್ಮ ಪಕ್ಷದಿಂದ ಸೋತಿರುವ ಎಂಎಲ್ಎ​ ಗಳು ಎಲ್ಲರೂ ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮತ್ತು ಚಾಮರಾಜನಗರ ಕ್ಷೇತ್ರವನ್ನು ಈ ಸಲ ಬಹುತೇಕ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಮತದಾರರಲ್ಲಿ ವಿನಂತಿ ಮಾಡುವುದು ಏನೆಂದರೆ, ದಯಮಾಡಿ ನಮಗೂ ಒಂದು ಅವಕಾಶ ಕೊಡಿ. ನಾನು 3-4 ಚುನಾವಣೆಯಲ್ಲಿ ಸೋತಿದ್ದೇನೆ. ಆದರೂ ಪಕ್ಷ ನನಗೂ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಸೇವೆಯನ್ನು ಮಾಡುವುದಕ್ಕೆ ನಮಗೂ ಅವಕಾಶ ಮಾಡಿಕೊಡಿ ಎಂದು ನಾವು ಕೇಳುತ್ತಾ ಇದ್ದೇವೆ. ದಯಮಾಡಿ ಪಕ್ಷಾತೀತವಾಗಿ, ಜಾತ್ಯತೀತವಾಗಿ, ನನ್ನನ್ನ ಬೆಂಬಲಿಸಿ ಎಂದು ಕೇಳಿಕೊಂಡರು.

ಕಳೆದ 30 ವರ್ಷಗಳಿಂದ ಮೈಸೂರು ನಗರ ಸಮಸ್ಯೆಯ ಬಗ್ಗೆ ಎಷ್ಟೋ ಹೋರಾಟವನ್ನು ನಾವು ಮಾಡಿಕೊಂಡು ಬಂದಿದ್ದೇವೆ. ನಾನೇನು ಅಪರಿಚಿತನಲ್ಲ. ಇದು ಇದ್ದಂಗೆ ಯಾವುದೋ ಒಂದು ಪಕ್ಷಕ್ಕೆ ಸೇರಿಕೊಂಡು ಚುನಾವಣೆ ಎದುರಿಸುವ ವ್ಯಕ್ತಿ ನಾನು ಅಲ್ಲ. ಪಕ್ಷಕ್ಕಾಗಿ ದುಡಿದಿರುವ ವ್ಯಕ್ತಿ ನಾನು. ಪಕ್ಷ ನನ್ನನ್ನು ಗುರುತಿಸಿ, ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನನ್ನ ಗುರುತಿಸಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದಾರೆ. ಜಾತ್ಯತೀತವಾಗಿ ಬೆಂಬಲವನ್ನು ಕೊಟ್ಟಿದಾರೆ ಎಂದರು.

47 ವರ್ಷದ ನಂತರ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್: 1977ರ ನಂತರ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ. 47 ವರ್ಷದ ನಂತರ ನಾನು ಒಕ್ಕಲಿಗ ಸಮುದಾಯ ಆಗಿರುವುದರಿಂದ ನನಗೆ ಅವಕಾಶ ಮಾಡಿಕೊಟ್ಟಿದೆ. ನಾನು ಮತ್ತೆ ಹೇಳುತ್ತಾ ಇದ್ದೇನೆ. ಜಾತಿ ಪಟ್ಟಿ ಹಣೆಗೆ ಅಂಟಿಸಿಕೊಂಡು ಹೋಗುವಂಥ ವ್ಯಕ್ತಿ ನಾನಲ್ಲ. ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ನಮ್ಮ ಸಮುದಾಯಕ್ಕೆ ಅವರು ದಯಮಾಡಿ ಬೆಂಬಲ ಕೊಡಬೇಕು ಹಾಗೂ ಇತರ ಎಲ್ಲ ಸಮುದಾಯದವರು ಬೆಂಬಲ ಕೊಡಬೇಕು ಎಂದು ಕೇಳುತ್ತಾ ಇದ್ದೇನೆ. ಪಕ್ಷಾತೀತವಾಗಿ ಮೈಸೂರು-ಕೊಡಗು ಕ್ಷೇತ್ರದ 21 ಲಕ್ಷ ಮತದಾರರಿಗೆ ನಾನು ಪ್ರತಿನಿಧಿ ಆಗಿರುತ್ತೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ : ಗೆಲ್ಲಲೇಬೇಕು ಎಂದು ನಾವು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಕೂಡ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ನಿನ್ನೆ ನಾಮಿನೇಷನ್ ಫೈಲ್ ಮಾಡುವಾಗ ಕೂಡಾ ಇಬ್ಬರು ಬಂದಿದ್ದಾರೆ. ಜಾತ್ಯತೀತವಾಗಿ ಲಕ್ಷ್ಮಣ್ ಅವರನ್ನು ಗೆಲ್ಲಿಸಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ ಎಂದರು.

ನಾನು ಕೂಡ ಅಷ್ಟೇ ಎಲ್ಲರಲ್ಲಿ ಮತಯಾಚನೆ ಮಾಡುತ್ತಾ ಇದ್ದೇನೆ. ನಾನು ಒಬ್ಬ ಅಭ್ಯರ್ಥಿಯಾಗಿ ಪ್ರತಿಯೊಂದು ಊರು, ಪ್ರತಿಯೊಂದು ಮನೆಗೆ, ಪ್ರತಿಯೊಬ್ಬರನ್ನ ಭೇಟಿ ಮಾಡುವುದಕ್ಕೆ ಆಗುವುದಿಲ್ಲ. ಕೇವಲ 22 ದಿನ ಅಷ್ಟೇ ಸಮಯ ಇರುವುದು. ಈ 22 ದಿನದ ಒಳಗಡೆ ಎಲ್ಲೆಲ್ಲಿ ಹೋಗುವುದಕ್ಕೆ ಸಾಧ್ಯವೋ ಅಲ್ಲಿಗೆಲ್ಲ ಹೋಗುತ್ತೇನೆ. ಮಾಧ್ಯಮದ ಮೂಲಕ ಎಲ್ಲಾ ಕಡೆ ತಲುಪಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕ್ಷೇತ್ರದ ಸಮಸ್ಯೆಗಳು ಏನು ?: ಮೈಸೂರಿನಲ್ಲಿ ನೂರಾರು ಸಮಸ್ಯೆಗಳಿವೆ. ಅದರಲ್ಲಿ ಬಹುತೇಕ ಸಮಸ್ಯೆಗಳು ಮಾನ್ಯ ಮುಖ್ಯಮಂತ್ರಿಗಳು 2013 ರಿಂದ 2018 ರ ಸಂದರ್ಭದಲ್ಲಿ ಬರೀ ಮೈಸೂರು ನಗರ ಅಭಿವೃದ್ಧಿಗೆ ₹ 3800 ಕೋಟಿ ಕೊಟ್ಟಿದ್ದಾರೆ. ಇವತ್ತು ಮೈಸೂರಿನಲ್ಲಿ ಒಳ್ಳೊಳ್ಳೆ ಅಭಿವೃದ್ಧಿ ಕಾರ್ಯಗಳಾಗಿವೆ. ಅಂದರೆ 8 ಆಸ್ಪತ್ರೆಗಳು, ಜಯದೇವ ಹಾಸ್ಪಿಟಲ್, ಆಯುರ್ವೇದಿಕ್ ಹಾಸ್ಪಿಟಲ್ ಇರಬಹುದು, ಯೋಗ ಸೆಂಟರ್ ಇರಬಹುದು, ಇತರ ಸುಮಾರು 10 ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದಾರೆ.

ಕೆಆರ್​ಎಸ್ ಒಂದೇ ರೋಡ್​ನಲ್ಲಿ ನೋಡಿದರೆ 10 ಹಾಸ್ಪಿಟಲ್​ಗಳೆಲ್ಲಾ ಅಕ್ಕ-ಪಕ್ಕದಲ್ಲಿ ಇರುವುದನ್ನು ನಾವು ಕಾಣುತ್ತಾ ಇದ್ದೇವೆ. ಸಾಮಾನ್ಯ ಮನುಷ್ಯನಿಗೆ ಹಾರ್ಟ್ ಸಮಸ್ಯೆಯಾದರೆ ಚಿಕಿತ್ಸೆಗೆ ಒಳಪಡಬೇಕು ಅಂದರೆ ಹೊಲ, ಮನೆ ಮಾರಿಕೊಳ್ಳುವ ಸ್ಥಿತಿಯಲ್ಲಿ ಅಂದು ಇದ್ದರು. ಆದರೆ ಇವಾಗ ಫ್ರೀಯಾಗಿ ಅವರಿಗೆ ಆಪರೇಷನ್ ಮಾಡಿಕೊಡುವ ಹಾಗೆ ನಮ್ಮ ಸರ್ಕಾರ ಮಾಡಿದೆ. ಇವತ್ತು ಜಯದೇವ ಹಾಸ್ಪಿಟಲ್, ಮಹಾರಾಣಿ ಕಾಲೇಜಿನಲ್ಲಿ 3000 ಹೆಣ್ಣು ಮಕ್ಕಳು ಓದುತ್ತಾ ಇದ್ದಾರೆ. ಹಾಸ್ಟೆಲ್​ನಲ್ಲಿ 2000 ಹೆಣ್ಣು ಮಕ್ಕಳು ಇದ್ದಾರೆ. 2ನೇ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಮೈಸೂರಿಗೆ 1200 ಕೋಟಿ ಕೊಟ್ಟಿದ್ದಾರೆ. ಬರೀ 10 ತಿಂಗಳಿಗೆ ಹಿಂದೆ ಇದ್ದ ಬಿಜೆಪಿ ಸರ್ಕಾರ ಹಾಗೂ ಜೆಡಿಎಸ್ ಅವರು ಎಷ್ಟು ಕೋಟಿ ಕೊಟ್ಟಿದ್ದಾರೆ? ದಯಮಾಡಿ ಅವರು ಹೇಳಲಿ ಎಂದು ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್ ಸವಾಲು ಹಾಕಿದರು.

ಹಿಂದೆ ಇದ್ದ ಸಂಸದರು ಹಾಗೂ ಬಿಜೆಪಿಯವರು ಬರೀ ಭಾವನಾತ್ಮಕವಾಗಿ ವಿಚಾರವನ್ನ ತೆಗೆದುಕೊಂಡು ಬಂದು, ಸಮುದಾಯದ ನಡುವೆ ಜಗಳ ತಂದಿಡುತ್ತಿದ್ದರು. ಆದ್ರೆ ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಶೇಕಡಾ 94 ರಷ್ಟು ಜನರಿಗೆ ಒಂದಲ್ಲ, ಒಂದು ಯೋಜನೆ ಅವರಿಗೆ ತಲಪುತ್ತಿವೆ. ಅದಕ್ಕಾದ್ರು ಕೃತಜ್ಞತೆಯಿಂದ ದಯಮಾಡಿ ನಮ್ಮನ್ನ ಬೆಂಬಲಿಸಿ ಎಂದು ಕೇಳಿಕೊಂಡರು.

ಜನರ ಸಮಸ್ಯೆಗೆ ಧ್ವನಿಯಾಗುತ್ತೇನೆ : ಮಾಧ್ಯಮದ ಮುಂದೆ ಅರಚಿಕೊಂಡು, ಬಾಯಿಗೆ ಬಂದಂತೆ ಅವರು ಇವರನ್ನು ಬೈದುಕೊಂಡು ಹೋಗುವ ಕೆಲಸವನ್ನು ನಾನು ಮಾಡುವುದಿಲ್ಲ. ನೂರಕ್ಕೆ ನೂರರಷ್ಟು ಈ ಅಭ್ಯರ್ಥಿಗೆ ಕೊಟ್ಟ ಮತಕ್ಕೆ ಸಾರ್ಥಕವಾಯಿತು ಎಂದು ಮತದಾರರು ಹೇಳಬೇಕು. ಆ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಲಕ್ಷ್ಮಣ್ ಭರವಸೆ ನೀಡಿದರು.

ಜನಸಾಮಾನ್ಯರಿಗೆ 24 ಗಂಟೆಯೂ ಸಿಗುತ್ತೇನೆ : ನಾನು ಬೀದಿಯಲ್ಲಿ ನಿಂತುಕೊಂಡು ಮಾತನಾಡುತ್ತಾ ಇದ್ದೇನೆ. ಇಲ್ಲೇ ಟೀ ಕುಡಿಯುತ್ತಾ ಇದ್ದೇನೆ. ಮತದಾರರಲ್ಲಿ ನಾನು ಹೇಳುವುದು ಇಷ್ಟೇ, ನಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ 26ನೇ ತಾರೀಖು ಅಷ್ಟೇ ಬೀದಿಯಲ್ಲಿ ಇರುತ್ತಾರೆ. 26 ನಂತರ ಎಲ್ಲಿ ಇರುತ್ತಾರೆ ಅವರು? ಅನ್ನುವುದನ್ನ ಎಲ್ಲರೂ ಯೋಚನೆ ಮಾಡಬೇಕು?. ನಾನು ಇಂದು ಅಷ್ಟೇ, 26 ನಂತರವೂ ಅಷ್ಟೇ ಫುಟ್​ಪಾತ್, ರೋಡ್ ಅಲ್ಲೇ ಇರುತ್ತೇನೆ. 24 ಗಂಟೆಯೂ ಕೂಡ ನಿಮಗೆ ಸಿಗುತ್ತೇನೆ. ನಿಮಗೆ ಸುಲಭವಾಗಿ ಸಿಗುವ ವ್ಯಕ್ತಿ ಬೇಕಾ?. ಇಲ್ಲ ಅರಮನೆ ಒಳಗಡೆ ಹೋಗೋಕೆ ₹ 100 ಟಿಕೆಟ್ ಕೊಟ್ಟುಹೋಗಿ ಅಲ್ಲಿ ಮತ್ತೆ ಫ್ರೀ ಎಂಟ್ರೆಸ್ ಮಾಡುವಂತಹ ಕೆಲಸ ಮಾಡಬೇಕಾ? ಎಂದು ಮತದಾರರು ಯೋಚನೆ ಮಾಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಈಟಿವಿ ಭಾರತ್ ಸಂದರ್ಶದಲ್ಲಿ ವಿವರಿಸಿದರು.

ಇದನ್ನೂ ಓದಿ: ಮಾಧ್ಯಮಗಳ ಮುಂದೆ ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್; ಏಕೆ ಗೊತ್ತಾ? - Congress Candidate M Laxman

ETV Bharat Logo

Copyright © 2024 Ushodaya Enterprises Pvt. Ltd., All Rights Reserved.