ETV Bharat / state

ಮೀನುಗಾರಿಕೆ ಬಂದರು ಬಿಟ್ಟು ಕೇವಲ ವಾಣಿಜ್ಯ ಬಂದರುಗಳ ಹೂಳೆತ್ತುವ ಕಾರ್ಯ: ಮೀನುಗಾರರ ಆರೋಪ

author img

By ETV Bharat Karnataka Team

Published : Feb 5, 2024, 4:52 PM IST

ಕಾರವಾರ
ಕಾರವಾರ

ಕಾರವಾರ ತಾಲೂಕಿನ ಬೈತಖೋಲ ಬಂದರಿನಲ್ಲಿ ಹೂಳೆತ್ತದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ

ಕಾರವಾರ (ಉತ್ತರ ಕನ್ನಡ) : ಕಾರವಾರ ತಾಲೂಕಿನಲ್ಲಿ ಮೀನುಗಾರರ ಬಳಕೆಗೆ ಇರುವ ಏಕೈಕ ದೊಡ್ಡ ಬಂದರು ಬೈತಖೋಲ ಮೀನುಗಾರಿಕಾ ಬಂದರು. ಹೂಳು ತುಂಬಿಕೊಂಡು ಹಲವಾರು ವರ್ಷವಾದರೂ ಇನ್ನೂ ಹೂಳೆತ್ತದೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಮೀನುಗಾರರದ್ದು. ಆದರೆ ಮೀನುಗಾರಿಕಾ ಬಂದರನ್ನು ಹೂಳೆತ್ತಲು ಆಗ್ರಹ ಮಾಡಿದರೆ ಪಕ್ಕದಲ್ಲೇ ಇರುವ ವಾಣಿಜ್ಯ ಬಂದರಿನ ಹೂಳನ್ನು ಎತ್ತುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕಡಲನಗರಿ ಕಾರವಾರದಲ್ಲಿ ಮೀನುಗಾರಿಕೆ ಈ ಭಾಗದ ಜನರ ಪ್ರಮುಖ ಉದ್ಯೋಗ. ಪ್ರತಿನಿತ್ಯ ನೂರಾರು ಬೋಟ್ ನಲ್ಲಿ ಕಡಲಿಗೆ ಇಳಿದು ಮೀನು ಶಿಕಾರಿ ಮಾಡಿಕೊಂಡು ಬರುವ ಮೀನುಗಾರರು ಮೀನುಗಾರಿಕಾ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾರೆ.

ಬೈತಖೋಲ ಮೀನುಗಾರಿಕಾ ಬಂದರಿನಲ್ಲಿ ಹೂಳಿನ ಸಮಸ್ಯೆಯಿಂದ ಬೋಟ್​ಗಳು ಓಡಾಡಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಹೂಳನ್ನು ಎತ್ತಬೇಕು ಎನ್ನುವುದು ಮೀನುಗಾರರ ಹಲವಾರು ವರ್ಷಗಳ ಆಗ್ರಹವಾಗಿದೆ. ಆದ್ರೆ ಜನಪ್ರತಿನಿಧಿಗಳು ಹೂಳನ್ನು ಎತ್ತುತ್ತೇವೆ ಎನ್ನುವ ಆಶ್ವಾಸನೆ ಕೊಡುತ್ತಾ ಬಂದಿದ್ದಾರೆ ವಿನಃ ಈವರೆಗೆ ಭರವಸೆಯನ್ನು ಮಾತ್ರ ಈಡೇರಿಸಿಲ್ಲ. ಹೀಗಾಗಿ ಬಂದರಿಗೆ ಬರುವ ಬೋಟ್​ಗಳು ಪರದಾಡುವಂತಾಗಿದೆ.

ಬೋಟ್ ಲಂಗರು ಹಾಕುವುದಕ್ಕೂ ಕಷ್ಟಸಾಧ್ಯ: ''ಹೂಳನ್ನು ಎತ್ತಿ ಎಂದು ಮೀನುಗಾರರು ಆಗ್ರಹಿಸಿದ್ದರೂ ಕೂಡ ಮೀನುಗಾರಿಕಾ ಬಂದರು ಬಿಟ್ಟಿರುವ ಸರ್ಕಾರ ಪಕ್ಕದಲ್ಲೇ ಇರುವ ವಾಣಿಜ್ಯ ಬಂದರನ್ನು 39 ಕೋಟಿ ವೆಚ್ಚದಲ್ಲಿ ಹೂಳನ್ನು ಎತ್ತುವ ಮೂಲಕ ತಾರತಮ್ಯ ಧೋರಣೆಗೆ ಇಳಿದಿದೆ. ಇದರಿಂದ ಬೋಟ್​ಗಳು ಪ್ರತಿ ಮಳೆಗಾಲ ಬೇಸಿಗೆ ವೇಳೆ ಹಾನಿಗೊಳಗಾಗುತ್ತಿವೆ. ಬೋಟ್ ಲಂಗರು ಹಾಕುವುದಕ್ಕೂ ಕಷ್ಟಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ'' ಎನ್ನುತ್ತಾರೆ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ.

ಕಾರವಾರ ವಾಣಿಜ್ಯ ಬಂದರಿನ ವಾರ್ಷಿಕ ವಹಿವಾಟು ಆಗುವುದಕ್ಕಿಂತ ಹೂಳೆತ್ತಲು ವಿನಿಯೋಗಿಸಿದ ಹಣವೇ ಹೆಚ್ಚಿದೆ. ವಾಣಿಜ್ಯ ಬಂದರು ಹೂಳೆತ್ತುವ ಕಾಮಗಾರಿಯಿಂದ ಸಾಕಷ್ಟು ಲಾಭವಿದೆ. ಈ ನಿಟ್ಟಿನಲ್ಲಿ ಹೂಳೆತ್ತಲು ಮೊದಲು ಆದ್ಯತೆ ಕೊಡಲಾಗುತ್ತಿದೆ. ಆದರೆ ಮೀನುಗಾರರಿಗೆ ಉಪಯೋಗವಿದೆ ಎಂದರೂ ಇನ್ನು ಮೀನುಗಾರಿಕಾ ಬಂದರಿನಲ್ಲಿ ಹೂಳನ್ನ ಎತ್ತುತ್ತಿಲ್ಲ ಎನ್ನುವುದು ಮೀನುಗಾರರ ಆರೋಪ. ಇನ್ನೊಂದೆಡೆ ವಾಣಿಜ್ಯ ಬಂದರು ಮೀನುಗಾರಿಕಾ ಬಂದರಿನ ಪಕ್ಕದಲ್ಲೇ ಇದ್ದು, ಒಂದು ಕಡೆ ಹೂಳೆತ್ತಿ, ಇನ್ನೊಂದು ಕಡೆ ಹಾಗೆ ಬಿಟ್ಟರೆ ಮೀನುಗಾರಿಕಾ ಬೋಟ್​ಗಳಿಗೆ ಸಮಸ್ಯೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮೀನುಗಾರಿಕಾ ಸಚಿವರಿಗೆ ಕೇಳಿದರೆ ಮೀನುಗಾರರಿಗೆ ತೊಂದರೆ ಆಗುವುದಾದರೆ ಯಾವುದೇ ಬಂದರು ಬೇಡ ನಮಗೆ, ಶೀಘ್ರದಲ್ಲಿ ಅಲ್ಲೂ ಸಹ ಹೂಳನ್ನು ಎತ್ತುತ್ತೇವೆ ಎನ್ನುತ್ತಾರೆ.

ಮೀನುಗಾರಿಕಾ ಬಂದರು ಹೂಳೆತ್ತುವಂತೆ ಆಗ್ರಹ: ಸದ್ಯ ಒಂದೆಡೆ ಜೋರಾಗಿ ವಾಣಿಜ್ಯ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ವಾಣಿಜ್ಯ ಬಂದರು ಹೂಳೆತ್ತುವ ಜೊತೆಗೆ ಮೀನುಗಾರಿಕಾ ಬಂದರಿನಲ್ಲಿಯೂ ಹೂಳೆತ್ತಿ ಎನ್ನುವ ಆಗ್ರಹ ಮೀನುಗಾರರಿಂದ ಕೇಳಿ ಬರುತ್ತಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಬಂದರಿನ ಹೂಳನ್ನು ಎತ್ತುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಕಡಲ ಮಕ್ಕಳಿಗೆ ಕೈಗೂಡದ ಮತ್ಸ್ಯ ಬೇಟೆ: ಅವಧಿಗೂ ಮುನ್ನವೇ ಲಂಗರು ಹಾಕುತ್ತಿರುವ ಬೋಟ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.