ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತಿಲ್ಲ: ಸಿಎಂ

author img

By ETV Bharat Karnataka Team

Published : Jan 20, 2024, 4:04 PM IST

ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತಿಲ್ಲ ಸಿಎಂ

ಜ.22 ರಂದು ರಜೆ ಘೋಷಿಸಬೇಕು ಎಂಬ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಅಯೋಧ್ಯೆಗೆ ತೆರಳುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಾನು ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತಿಲ್ಲ. ನಾನು ಇನ್ನೊಂದು ದಿನ ಹೋಗ್ತೀನಿ ಅಂತ ಹೇಳಿದ್ದೇನೆ ಎಂದರು. ರಾಮಮಂದಿರ ಉದ್ಘಾಟನಾ ದಿನದೊಂದು ರಜೆ ನೀಡಬೇಕು ಎಂದು ವಿಪಕ್ಷಗಳ ಮನವಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ವಿಚಾರ ಗೊತ್ತಿಲ್ಲ. ಆ ಪತ್ರ ನನಗೆ ಬಂದಿಲ್ಲ ನೋಡ್ತೀನಿ ಎಂದಷ್ಟೇ ಹೇಳಿ ತೆರಳಿದರು.

ಜ.22ಕ್ಕೆ ರಾಜ್ಯ ಸರ್ಕಾರಿ ರಜೆ ನೀಡಬೇಕು: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ದಿನ ರಾಜ್ಯ ಸರ್ಕಾರಿ ರಜೆ ಘೋಷಿಸಬೇಕೆಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಿನ್ನೆ ದಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ, 500 ವರ್ಷಗಳ ಗುಲಾಮಗಿರಿ ಮುಕ್ತ ಮಾಡಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ನಾಡಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಪ್ರಪಂಚದ ಹಿಂದೂಗಳಿಗೆ ಆನಂದವನ್ನು ತಂದಿದೆ. ಗಾಂಧೀಜಿ ಸಹ ರಾಮರಾಜ್ಯದ ಕನಸನ್ನು ಕಾಣುತ್ತಿದ್ದರು.‌ ರಾಮಮಂದಿರ ಉದ್ಘಾಟನೆಯಾಗುತ್ತಿರುವ 22 ರಂದು ರಾಜ್ಯದಲ್ಲಿ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ಸಿಎಂಗೆ ಒತ್ತಾಯಿಸುವುದಾಗಿ ತಿಳಿಸಿದ್ದರು.

ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಲು ರಜೆ ಘೋಷಿಸಿ: ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೀಕ್ಷಿಸಲು ಜ.22ರಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ರಜೆ ಘೋಷಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ ಕೂಡ ಒತ್ತಾಯಿಸಿದ್ದಾರೆ. "ಅನೇಕ ರಾಜ್ಯಗಳು 22ರಂದು ರಜೆ ಘೋಷಿಸಿವೆ. ಕೇಂದ್ರ ಸರ್ಕಾರವೂ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರ್ಕಾರವೂ ರಜೆ ಪ್ರಕಟಿಸಬೇಕು. ಆ ಮೂಲಕ ಹಿಂದೂಗಳು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡಿ" ಎಂದು ಗುರುವಾರ ಹೇಳಿದ್ದರು.

ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಜೆ: ಭವ್ಯ ರಾಮಮಂದಿರ ಉದ್ಘಾಟನೆಯ ದಿನವಾದ ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧದಿನದ ರಜೆ ನೀಡಿ ಗುರುವಾರ ಸರ್ಕಾರ ಆದೇಶಿಸಿತ್ತು. ಅಂದು ಮಧ್ಯಾಹ್ನ 2.30 ರವರೆಗೆ ಕಚೇರಿಗಳಿಗೆ ಬಿಡುವು ನೀಡಲಾಗುತ್ತಿದೆ ಎಂದು ತಿಳಿಸಿದೆ. ಭಗವಾನ್​ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ದೇಶದ ಜನರ ಭಾವನಾತ್ಮಕ ವಿಷಯವಾಗಿದೆ. ಹೀಗಾಗಿ ಅಂದಿನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸರ್ಕಾರಿ ನೌಕರರಿಗೂ ಅವಕಾಶ ನೀಡುವ ಸಲುವಾಗಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಅರ್ಧದಿನದ ರಜೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಧ್ಯಮಗಳಿಗೆ ಗುರುವಾರ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯ ದಿನ ರಜೆ ಘೋಷಿಸಿ: ಸಿಜೆಐಗೆ ಪತ್ರ ಬರೆದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.