ETV Bharat / state

ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದ ಆರ್ ಅಶೋಕ್ : ಪೂರಕ ಅಂಕಿ-ಅಂಶಗಳ ದಾಖಲೆ ಒದಗಿಸಿದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Feb 20, 2024, 5:09 PM IST

Updated : Feb 20, 2024, 5:23 PM IST

ಬಿಜೆಪಿಯವರು ಎಂದಾದರು ಜಿಲ್ಲೆ, ತಾಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್​ಸಿ, ಎಸ್​ಟಿ ಹಾಸ್ಟೆಲ್​​ಗಳಿಗೆ ಭೇಟಿ ನೀಡಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಆರ್. ಅಶೋಕ್ ಅವರು ಸದನದಲ್ಲಿ ಪ್ರಸ್ತಾಪಿಸಿದ ಮಾತಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಸಮೇತ ತಮ್ಮ ಅವಧಿಯ ಸಾಧನೆಗಳನ್ನು ಬಿಚ್ಚಿಟ್ಟರು.

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ, ಬಿಜೆಪಿಯವರು ಎಂದಾದರೂ ಜಿಲ್ಲೆ, ತಾಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್​ಸಿ, ಎಸ್​ಟಿ ಹಾಸ್ಟೆಲ್​ಗಳಿಗೆ ಭೇಟಿ ನೀಡಿದ್ದಾರಾ?. ಈ ಸಮುದಾಯದ ವಿದ್ಯಾರ್ಥಿಗಳ ಕಷ್ಟಗಳನ್ನು ಆಲಿಸಿದ್ದಾರಾ?. ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರಾ? ಎಂದು ಪ್ರಶ್ನಿಸಿ ತಾವು ಸಿಎಂ ಆದಾಗಿನ ಮತ್ತು ಬಿಜೆಪಿ ಅವಧಿಯಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಬಿಡುಗಡೆ ಮಾಡಲಾದ ಹಣ, ಅನುದಾನದ ಅಂಕಿ-ಅಂಶಗಳನ್ನು ಸದನದ ಮುಂದೆ ಬಿಚ್ಚಿಟ್ಟರು.

2013 ರಿಂದ 2018ರ ವರೆಗೆ ಪ್ರತೀ ವರ್ಷ ವಸತಿ ನಿಲಯಗಳ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. 2014ರಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನಾ ವೆಚ್ಚ ತಲಾ 750 ರಿಂದ 900ಕ್ಕೆ ಹೆಚ್ಚಿಸಿದ್ದು, ಮೆಟ್ರಿಕ್ ನಂತರದ ಭೋಜನಾ ವೆಚ್ಚ ತಲಾ 850 ರಿಂದ 1000ಕ್ಕೆ ಹೆಚ್ಚಿಸಲಾಯಿತು. ಈ ಮೊತ್ತ 2017-18ಕ್ಕೆ ಕ್ರಮವಾಗಿ ಮೆಟ್ರಿಕ್ ಪೂರ್ವಕ್ಕೆ 1400 ಕ್ಕೆ, ಮೆಟ್ರಿಕ್ ನಂತರದ್ದು 1500ಕ್ಕೆ ತಲುಪಿತು ಎಂದು ದಾಖಲೆಗಳನ್ನು ತೋರಿಸಿದರು.

ಆದರೆ, ಬಿಜೆಪಿ 2019 ರಿಂದ 2022ರ ವರೆಗೆ ಒಂದೇ ಒಂದು ರೂಪಾಯಿಯನ್ನೂ ಹೆಚ್ಚಿಸಲಿಲ್ಲ. ನಾವು ಒಟ್ಟು ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು ತಲಾ ವಿದ್ಯಾರ್ಥಿಗೆ 650 ರೂ. ಹೆಚ್ಚಿಸಿದ್ದನ್ನು ವಿವರಿಸಿದರು. ಹಾಗೆಯೇ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನಾವು ಕೊಟ್ಟಿದ್ದು 408.02 ಕೋಟಿ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 880.65 ಕೋಟಿ ಸೇರಿ ಒಟ್ಟು 1288.67 ಕೋಟಿ ಕೊಟ್ಟೆವು. ಆದರೆ ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಕೊಟ್ಟ ವಿದ್ಯಾರ್ಥಿ ವೇತನ ಕೇವಲ 650.78 ಕೋಟಿ ಮಾತ್ರ ಎಂದು ದಾಖಲೆ ತೋರಿಸಿ ಹೇಳಿದರು.

ಸಿಎಂ ಸಿದ್ದರಾಮಯ್ಯ

ವಿದ್ಯಾಸಿರಿ ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ 431.68 ಕೋಟಿ ಕೊಟ್ಟರೆ, ಬಿಜೆಪಿ ತನ್ನ ಅವಧಿಯಲ್ಲಿ ಕೊಟ್ಟಿದ್ದು 197.62 ಕೋಟಿ ಮಾತ್ರ. ನಮ್ಮ ಅವಧಿಯಲ್ಲಿ ಹೊಸದಾಗಿ 308 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹೊಸ ಹಾಸ್ಟೆಲ್​ಗಳನ್ನು ತೆರೆದು 30,800 ವಿದ್ಯಾರ್ಥಿಗಳಿಗೆ ಹೊಸದಾಗಿ ಅವಕಾಶ ಒದಗಿಸಿದೆವು. ಬಿಜೆಪಿ ತನ್ನ ಅವಧಿಯಲ್ಲಿ ಕೇವಲ 5 ಹಾಸ್ಟೆಲ್ ಗಳನ್ನು ಮಾತ್ರ ತೆರೆದು ಕೇವಲ 500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು ಎಂದು ಅಂಕಿ-ಅಂಶ ಬಿಚ್ಚಿಟ್ಟು, ಬಿಜೆಪಿ ಸದಸ್ಯರ ಕಡೆಗೆ ನೋಡಿದರು. ಕಾಂಗ್ರೆಸ್ ಸದಸ್ಯರು ಟೇಬಲ್ ಗುದ್ದಿ ಸ್ವಾಗತಿಸಿದರು.

328 ಮೊರಾರ್ಜಿ ವಸತಿ ಶಾಲೆ : ಕಾಂಗ್ರೆಸ್ ಸರ್ಕಾರದ 2013-18ರ ಅವಧಿಯಲ್ಲಿ 328 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು, 82,000 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ, ಶಿಕ್ಷಣ ಒದಗಿಸಿತು. ಬಿಜೆಪಿ 14 ವಸತಿ ಶಾಲೆ ತೆರೆದು 3500 ವಿದ್ಯಾರ್ಥಿಗಳಿಗೆ ಅವಕಾಶವಾಯಿತು ಎನ್ನುತ್ತಾ ಹೀಗೆ ಪ್ರತೀ ಇಲಾಖೆಯ ಅಂಕಿ-ಅಂಶಗಳು ನನ್ನ ಕೈಯಲ್ಲಿವೆ. ಎಲ್ಲವನ್ನೂ ಹೇಳುವುದಕ್ಕೆ ಸಮಯ ಆಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : 35 ಸಾವಿರ ಕೋಟಿ ರೂ. ಬೆಳೆ ನಷ್ಟ ಆಗಿದ್ದು, ಕೇಂದ್ರದಿಂದ ಬರ ಪರಿಹಾರ ಒಂದು ರೂಪಾಯಿ ಸಹ ಬಿಡುಗಡೆ ಇಲ್ಲ: ಸಿಎಂ ಸಿದ್ದರಾಮಯ್ಯ

Last Updated : Feb 20, 2024, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.