ETV Bharat / state

ಪಂಚ ಗ್ಯಾರಂಟಿ, ಬರದ ಬರೆ, ಲೋಕಸಭೆ ಚುನಾವಣೆ ಮೇಲೆ ಕಣ್ಣು: 15ನೇ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕಸರತ್ತು

author img

By ETV Bharat Karnataka Team

Published : Jan 27, 2024, 7:56 PM IST

2024-25ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಸಮಾರು 58,000 ಕೋಟಿ ರೂ. ಮೀಸಲಿಡುವ ಅನಿವಾರ್ಯತೆ ಇದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಆದಾಯ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿದ್ದಾರೆ.

cm-siddaramaiah-prepares-to-present-his-record-15th-budget
15ನೇ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕಸರತ್ತು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಇಲಾಖಾವಾರು ಬಜೆಟ್ 2024-25ನೇ ಸಾಲಿನ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಈ ಬಾರಿ ಪಂಚ ಗ್ಯಾರಂಟಿ, ಬರದ ಆರ್ಥಿಕ ಹೊರೆಯ ಮಧ್ಯೆ ಆದಾಯ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕಸರತ್ತು ಮಾಡುತ್ತಿದ್ದಾರೆ.

ಫೆ.16ಕ್ಕೆ ತಮ್ಮ ದಾಖಲೆಯ 15ನೇ ಬಜೆಟ್ ಮಂಡನೆಗೆ ಸಜ್ಜಾಗಿರುವ ಸಿದ್ದರಾಮಯ್ಯ, ಕಳೆದ ಒಂದು ವಾರದಿಂದ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಒಂದೆಡೆ ಪಂಚ ಗ್ಯಾರಂಟಿಗಳಿಗಾಗಿ ಭಾರಿ ಹೊರೆ ಹಾಗೂ ಬರದ ಬರೆಯ ಆರ್ಥಿಕ ಸಂಕೀರ್ಣತೆಯೊಂದಿಗೆ ಅವರು ಬಜೆಟ್ ಮಂಡಿಸಬೇಕಾಗಿದೆ. ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು, ಜನರಿಗೆ ಹೆಚ್ಚಿನ ಹೊರೆ ಬೀಳದಂತೆ ಅಳೆದುತೂಗಿ ಬಜೆಟ್​ ನೀಡಬೇಕಿದೆ.

ಪಂಚ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಿಸುವ ಬೃಹತ್ ಸವಾಲಿನೊಂದಿಗೆ ಆಯವ್ಯಯ ತಯಾರಿಸಬೇಕಾಗಿದೆ. ಕಳೆದ ಬಾರಿ 3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 12,523 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಮಂಡಿಸಿದ್ದರು. ಈ ಬಾರಿ ಬಜೆಟ್​ನಲ್ಲಿ ಹೆಚ್ಚಿನ ಆರ್ಥಿಕ ಹೊರೆಯ ಯೋಜನೆ ಘೋಷಣೆ ಅನುಮಾನ ಎನ್ನಲಾಗಿದೆ.

ಆದಾಯ ಬಜೆಟ್ ಮಂಡನೆಗೆ ಕಸರತ್ತು: 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ ಬೃಹತ್ ಪ್ರಮಾಣದ ಹಣ ಮೀಸಲಿಡಬೇಕಾದ ಹಿನ್ನೆಲೆ ಆದಾಯ ಕೊರತೆಯ ಬಜೆಟ್ ಮಂಡಿಸಬೇಕಾಯಿತು. ಆದರೆ, ಈ ಬಾರಿ ಸಿದ್ದರಾಮಯ್ಯ ಆದಾಯ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿದ್ದಾರೆ. ಆದಾಯ ಬಜೆಟ್ ಎಂದರೆ ರಾಜಸ್ವ ವೆಚ್ಚಕ್ಕಿಂತ ಹೆಚ್ಚಿನ ರಾಜಸ್ವ ಆದಾಯ ಸಂಗ್ರಹವಾಗಿದೆ.

2023-24ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಗುರಿ ಸಾಧಿಸುವಲ್ಲಿ ಆಗಿಲ್ಲ. ಮಾರ್ಚ್ ಅಂತ್ಯಕ್ಕೆ ನಿರೀಕ್ಷಿತ ಗುರಿಗಿಂತ ಸುಮಾರು 10,000 ಕೋಟಿ ರೂ. ತೆರಿಗೆ ಆದಾಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಂದಾಜಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 1.7 ಲಕ್ಷ ಕೋಟಿ ರೂ. ತೆರಿಗೆ ಆದಾಯದ ನಿರೀಕ್ಷೆ ಇಡಲಾಗಿತ್ತು. ಆದರೆ, ಬರದ ಹಿನ್ನೆಲೆ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ 38,000 ಕೋಟಿ ರೂ. ಖರ್ಚಾಗಿದೆ. 2024-25ನೇ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಮೀಸಲಿಡುವ ಅನಿವಾರ್ಯತೆ ಇದೆ.

ಇದರ ಮಧ್ಯೆ ವಿತ್ತೀಯ ಹೊಣೆಗಾರಿಕೆ ಹಾಗೂ ಬಜೆಟ್ ನಿರ್ವಹಣೆ ಕಾಯ್ದೆಯನ್ವಯ ಮೂರು ಪ್ರಮುಖ ಪ್ಯಾರಮೀಟರ್​ಗಳ ಪೈಕಿ ಆದಾಯ ಬಜೆಟ್ ಮಂಡಿಸಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ. 2024-25ನೇ ಸಾಲಿನಲ್ಲಿ ಆದಾಯ ಸಂಗ್ರಹದ ಗುರಿಯನ್ನು ಇನ್ನಷ್ಟು ಹೆಚ್ಚಿಸುವತ್ತ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ರಾಜ್ಯದ ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದು, 2024-25ನೇ ಸಾಲಿನಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಆದಾಯ ಸಂಗ್ರಹದ ಗುರಿ ಇಡಲು ಸಿದ್ಧತೆ ನಡೆಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ತೆರಿಗೆಯೇತರ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡಲು ಮುಂದಾಗಿದ್ದಾರೆ. ಈಗಾಗಲೇ ಆಸ್ತಿ ಮಾರ್ಗಸೂಚಿ ದರ, ಬಿಯರ್ ದರ ಹೆಚ್ಚಿಸಲಾಗಿದೆ. ಉಳಿದಂತೆ ಈ ಬಾರಿ ಗಣಿಗಾರಿಕೆ ರಾಯಧನ ಹೆಚ್ಚಿಸಲು ಚರ್ಚೆ ನಡೆಸುತ್ತಿದ್ದಾರೆ. ಇತರ ತೆರಿಗೆಯೇತರ ಆದಾಯಗಳನ್ನು ಹೆಚ್ಚಿಗೆ ಸಂಗ್ರಹಿಸುವ ಗುರಿಯೊಂದಿಗೆ ಆದಾಯ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ.

ಹೆಚ್ಚಿನ ಸಾಲದ ಮೊರೆಯ ಅನಿವಾರ್ಯತೆ: ರಾಜಸ್ವ ವೆಚ್ಚ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023-24ನೇ ಸಾಲಿನಲ್ಲಿ 2,50,932 ಕೋಟಿ ರೂ.ಗಳ ವೇತನ, ಪಿಂಚಣಿ, ಸಹಾಯಧನ, ಬಡ್ಡಿ ಪಾವತಿಗಳನ್ನೊಳಗೊಂಡ ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದೆ. 2024-25ನೇ ಸಾಲಿನಲ್ಲಿ ರಾಜಸ್ವ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ವೇತನ ಹೆಚ್ಚಳ, ಪಿಂಚಣಿ ಹೆಚ್ಚಳ ಹಾಗೂ ಬಡ್ಡಿ ಪಾವತಿ ಪ್ರಮಾಣ ಹೆಚ್ಚುವ ಹಿನ್ನೆಲೆ ರಾಜಸ್ವ ವೆಚ್ಚದಲ್ಲೂ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೀಗಾಗಿ 2024-25ನೇ ಸಾಲಿನಲ್ಲೂ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಹೊರೆ, ಬರದ ಬರೆ, ಹೆಚ್ಚಿನ ರಾಜಸ್ವ ಹೊರೆ ಹಿನ್ನೆಲೆ ಇನ್ನಷ್ಟು ಹೆಚ್ಚಿನ ಸಾಲದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ‌. 2023-24ನೇ ಸಾಲಿನಲ್ಲಿ ಅಂದಾಜು 85,818 ಕೋಟಿ ಸಾಲದ ಮೊರೆ ಹೋಗಿದ್ದರು. ಈ ಬಾರಿ ರಾಜಸ್ವ ವೆಚ್ಚ, ಹೆಚ್ಚಿನ ಬಂಡವಾಳ ವೆಚ್ಚವನ್ನು ನಿಭಾಯಿಸಲು 90,000 ಕೋಟಿ ರೂ.ಗೂ ಮೀರಿ ಸಾಲದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 2023-24ರ ಬಜೆಟ್ ವರ್ಷದ 9 ತಿಂಗಳಲ್ಲಿ ರಾಜ್ಯದ ಇಲಾಖಾವಾರು ಆರ್ಥಿಕ ಪ್ರಗತಿ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.