ETV Bharat / state

ನೀರೆತ್ತುವ ಯೋಜನೆಗೆ ಸಿಎಂ ಚಾಲನೆ ನೀಡುವಾಗ ಕೈಕೊಟ್ಟ ಬಟನ್: ಚೆಸ್ಕಾಂ ಎಂಡಿ ಅಮಾನತು!

author img

By ETV Bharat Karnataka Team

Published : Jan 25, 2024, 9:53 AM IST

Updated : Jan 25, 2024, 4:17 PM IST

ಪಿರಿಯಾಪಟ್ಟಣ ನೀರೆತ್ತುವ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಬಟನ್ ಕೈಕೊಟ್ಟು ಸಿಎಂ ಸಿದ್ದರಾಮಯ್ಯ ಮುಜುಗರಕ್ಕೀಡಾದರು. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಎಂಡಿ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಿದೆ.

cm siddaramaih
cm siddaramaih

ನೀರೆತ್ತುವ ಯೋಜನೆಗೆ ಸಿಎಂ ಚಾಲನೆ ನೀಡುವಾಗ ಕೈಕೊಟ್ಟ ಬಟನ್

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಸಮೀಪ ಕಾವೇರಿ ನದಿಯಿಂದ ಕೆರೆ, ಕಟ್ಟೆಗಳಿಗೆ ನೀರೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗ ಬಟನ್ ಕೆಲಸ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾದ ಸನ್ನಿವೇಶ ಬುಧವಾರ ನಡೆಯಿತು. ಈ ಘಟನೆಯ ಹಿನ್ನೆಲೆಯಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತುಗೊಳಿಸಿದೆ.

ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ, ಕಟ್ಟೆಗಳಿಗೆ ತುಂಬಿಸುವ ಯೋಜನೆಯ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿ, ಉದ್ಘಾಟನೆ ಕಾರ್ಯ ನೆರವೇರಿಸುತ್ತಿದ್ದರು. ಬೃಹತ್ ಸಾರ್ವಜನಿಕ ಯೋಜನೆಯ ಲೋಕಾರ್ಪಣೆಗಾಗಿ ವಿಧ್ಯುಕ್ತವಾಗಿ ಬಟನ್ ಒತ್ತುವ ಮೂಲಕ ಚಾಲನೆ ನೀಡುವಾಗ ಅದು ಚಾಲನೆಯಾಗಲಿಲ್ಲ. ಇದರಿಂದ ಮುಖ್ಯಮಂತ್ರಿ ತೀವ್ರ ಮುಜುಗರ ಅನುಭವಿಸಿದರು.

ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸಲು ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನದ ಆದೇಶದಲ್ಲಿ ಸೂಚನೆ ನೀಡಿದ್ದರು. ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು, ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕರಿಸದೇ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯತನ ತೋರಿಸಿದ್ದಾರೆ. ಈ ಮೂಲಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಹಾಗಾಗಿ, ಈ ಸನ್ನಿವೇಶ ಸೃಷ್ಟಿಯಾಗಲು ಅವರು ನೇರ ಕಾರಣಕರ್ತರು ಎಂದು ಅಮಾನತು ಆದೇಶದಲ್ಲಿ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಚೆಸ್ಕಾಂ ಎಂಡಿ ಸ್ಥಳದಲ್ಲಿ ಹಾಜರಿಲ್ಲದೇ ಕರ್ತವ್ಯ ಲೋಪವೆಸಗಿರುವ ಸಂಬಂಧ ಮತ್ತು ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾದ ಪ್ರಸ್ತಾವನೆಯನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಗೈರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದೇ ತೀವ್ರ ಮುಜುಗರ ಉಂಟುಮಾಡುವ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಜಿಲ್ಲಾಧಿಕಾರಿಯವರ ವರದಿಯಂತೆ ಸ್ಪಷ್ಟವಾಗಿ ಕಂಡುಬರುತ್ತದೆ. ಹಾಗಾಗಿ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಪಡಿಸಲು ತೀರ್ಮಾನಿಸಿ ಆದೇಶಿಸಲಾಗಿದೆ.

ಕರ್ನಾಟಕ ನಾಗರಿಕ ಸೇವಾ (ಸಿ.ಸಿ.ಎ) ನಿಯಮಾವಳಿಗಳು, 1957ರ ನಿಯಮ 10(1) (ಡಿ) ಮತ್ತು 103) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಚೆಸ್ಕಾಂ ಎಂಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಬಾಕಿ ಇಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಅಧಿಕಾರಿಯ ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 98ರಂತೆ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಆದರೆ ಅಧಿಕಾರಿಯ ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೆಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ರುದ್ರಯ್ಯ ಬಿಜೆಪಿ ಸೇರ್ಪಡೆ

Last Updated : Jan 25, 2024, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.