ETV Bharat / state

ಚನ್ನಗಿರಿಯಲ್ಲಿ ನಡೆದಿದ್ದು ಲಾಕಪ್ ಡೆತ್ ಅಲ್ಲ, ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ: ಸಿಎಂ ಸಿದ್ದರಾಮಯ್ಯ - CM siddaramaiah

author img

By ETV Bharat Karnataka Team

Published : May 25, 2024, 1:57 PM IST

ಚನ್ನಗಿರಿ ಪೊಲೀಸ್​ ವಶದಲ್ಲಿದ್ದ ವ್ಯಕ್ತಿ ಸಾವು ಪ್ರಕರಣ ಸಂಬಂಧ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

cm-siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ (ETV Bharat)

ಮೈಸೂರು: ''ಚನ್ನಗಿರಿಯಲ್ಲಿ ನಡೆದ ಸಾವು ಲಾಪ್ ಡೆತ್ ಅಲ್ಲ. ಆತನಿಗೆ ಮೂರ್ಛೆ ರೋಗ ಇತ್ತು, ಅದರಿಂದಾಗಿ ಆತ ಮೃತಪಟ್ಟಿದ್ದಾನೆ. ಆದರೆ ಎಫ್​ಐಆರ್​ ದಾಖಲಿಸದೆ ಪೊಲೀಸರು ಆತನನ್ನು ಠಾಣೆಗೆ ಕರೆ ತಂದಿದ್ದು ತಪ್ಪು. ಅದಕ್ಕಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಶನಿವಾರ ತಮ್ಮ ಮೈಸೂರು ಮನೆಯ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ''ಎಫ್​ಐಆರ್ ಇಲ್ಲದೆ ಪೊಲೀಸ್ ಠಾಣೆಗೆ ಆರೋಪಿಯನ್ನು ಕರೆತಂದು ಇಟ್ಟುಕೊಂಡಿದ್ದ ತಪ್ಪಿಗಾಗಿ ಠಾಣೆಯ ಇನ್ಸ್​ಪೆಕ್ಟರ್ ಹಾಗೂ ಡಿವೈಎಸ್​​ಪಿ ಅವರನ್ನು ಅಮಾನತುಗೊಳಿಸಲಾಗಿದೆ'' ಎಂದು ತಿಳಿಸಿದರು.

ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ: ಪ್ರಜ್ವಲ್​ ರೇವಣ್ಣ ಪ್ರಕರಣ ಸಂಬಂಧ ಸಿಎಂ ಬರೆದ ಪತ್ರ ಕೇಂದ್ರ ಸರ್ಕಾರಕ್ಕೆ ತಡವಾಗಿ ಪತ್ರ ಬಂದಿದೆ ಎಂಬ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೆ. ಅದಕ್ಕೆ ರಿಪ್ಲೈ ಬಂದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಒಂದು ವೇಳೆ ಪತ್ರ ಬರೆದಿದ್ದೇ ತಡವಾದರೂ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಸುಮ್ಮನೆ ಕಾಲ ಕಳೆಯುವುದನ್ನು ಬಿಟ್ಟು ಪಾಸ್​​ಪೋರ್ಟ್ ರದ್ದು ಮಾಡಲಿ'' ಎಂದು ಆಗ್ರಹಿಸಿದರು.

ಪುತ್ರ ರಾಕೇಶ್​ ಸಿದ್ದರಾಮಯ್ಯ ಸಾವಿನ ಬಗ್ಗೆ ಹೆಚ್​.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿ, ''ರಾಕೇಶ್​ ಸಿದ್ದರಾಮಯ್ಯ ಸತ್ತು 8 ವರ್ಷ ಆಗಿದೆ. ಈಗ ಆ ವಿಚಾರ ಪ್ರಸ್ತಾಪಿಸುವುದು ಮೂರ್ಖತನ. ರಾಜಕೀಯಕ್ಕೋಸ್ಕರ ಹೀಗೆ ಮಾಡುತ್ತಿದ್ದಾರೆ. ಅವರು 2016ರಲ್ಲೇ ತೀರಿಕೊಂಡಿದ್ದು, ಅದಕ್ಕೂ ಈ ಪ್ರಕರಣಕ್ಕೂ ಸಂಬಂಧವೇನು?'' ಎಂದು ಪ್ರಶ್ನಿಸಿದರು.

ರೇಪ್​ಗಿಂತ ವಿಡಿಯೋ ಹಂಚಿದ್ದು, ದೊಡ್ಡ ಅಪರಾಧ ಎನ್ನುವ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿಎಂ, ''ಅಂತಹ ಅಪರಾಧ ಅಥವಾ ಯಾವುದಾದರೂ ಸೆಕ್ಷನ್ ಭಾರತೀಯ ಕಾನೂನಿನಲ್ಲಿ ಇದೆಯಾ. ಅದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಹಾಗಂತ ವಿಡಿಯೋ ಹಂಚಿಕೆ ಮಾಡಿರುವುದು ಸರಿ ಎಂದು ನಾನು ಹೇಳುವುದಿಲ್ಲ'' ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ, ಈಗ ಪರಿಷತ್ ಚುನಾವಣೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಪರಿಷತ್​​ ಸ್ಥಾನವನ್ನು ಎಸ್​ಸಿ ಹಾಗೂ ಎಸ್​ಟಿಗೆ ಕೊಡಬೇಕು. ಆದರೆ, ನಮ್ಮ ಕಷ್ಟ ಅರ್ಥವಾಗುವುದಿಲ್ಲ ಎಂದ ಸಿಎಂ, ಈ ಮೂಲಕ ಪರಿಷತ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಇದನ್ನೂ ಓದಿ: ಚನ್ನಗಿರಿಯಲ್ಲಿ ಆರೋಪಿ ಸಾವು ಪ್ರಕರಣ: 5 ವಾಹನಗಳಿಗೆ ಹಾನಿ, 11 ಪೊಲೀಸ್ ಸಿಬ್ಬಂದಿಗೆ ಗಾಯ - DAVANAGERE SP REACTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.