ETV Bharat / state

ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದರೆ ಹುಡುಗಿಯೇ ಒಪ್ಪಲಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

author img

By ETV Bharat Karnataka Team

Published : May 24, 2024, 7:30 AM IST

Updated : May 24, 2024, 8:02 AM IST

ಅಂತರ್ಜಾತಿ ವಿವಾಹಗಳಿಂದ ಮಾತ್ರ ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಜಾತಿ ಪದ್ಧತಿಯನ್ನು ನಾಶಗೊಳಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ಮೈಸೂರು: ''ನನಗೂ ಕೂಡ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೇ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.

ಗುರುವಾರ ನಗರದಲ್ಲಿ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್​​ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.

''ನಾನು ಕಾನೂನು ಓದುವಾಗ ಒಬ್ಬ ಹುಡುಗಿ ಜೊತೆ ಸ್ನೇಹ ಮಾಡಿಕೊಂಡಿದ್ದೆ. ಇದಕ್ಕೆ ಬೇರೆ ಅರ್ಥ ಬೇಡ, ಸ್ನೇಹವಿತ್ತು. ಆಕೆಯನ್ನು ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ, ಹುಡುಗಿ ಹಾಗೂ ಮನೆಯವರು ಒಪ್ಪದ ಕಾರಣ ಮದುವೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯವರನ್ನೇ ಮದುವೆಯಾಗಬೇಕಾದ ಪರಿಸ್ಥಿತಿ ಬಂತು'' ಎಂದರು.

''ಅಂತರ್ಜಾತಿ ವಿವಾಹವಾದ ಎಲ್ಲ ಸಹೋದರ-ಸಹೋದರಿಯರಿಗೆ ಧನ್ಯವಾದಗಳು. ಅಂತರ್ಜಾತಿ ಮದುವೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ನಮ್ಮ ಸರ್ಕಾರವೂ ಕೂಡ ಸಹಾಯ, ಸಹಕಾರ ನೀಡುತ್ತದೆ. ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹೋಗಬೇಕಾದರೆ ಅಂತರ್ಜಾತಿ ವಿವಾಹ ಅಗತ್ಯ. ಜಾತಿ ವ್ಯವಸ್ಥೆಯು ಬಹಳ ಗಟ್ಟಿಯಾಗಿದೆ. ಇದರಿಂದ ಸಮಾಜ ಚಲನರಹಿತವಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆ ಇಲ್ಲದಾಗ ಅಂತಹ ಸಮಾಜದಲ್ಲಿ ಚಲನೆ ಇರುವುದಿಲ್ಲ. ಅನೇಕರು ಸಮ ಸಮಾಜ ಮಾಡಲು ಪ್ರಯತ್ನ ಮಾಡಿದ್ದರೂ ಕೂಡ, ಸಂಪೂರ್ಣ ಯಶಸ್ವಿಯಾಗಿಲ್ಲ'' ಎಂದು ಹೇಳಿದರು.

ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ: ''ಅಂತರ್ಜಾತಿ ವಿವಾಹಗಳಿಂದ ಮಾತ್ರ ಜಾತಿ ನಾಶ ಸಾಧ್ಯ. ಈ ವಿವಾಹಗಳ ಜತೆಗೆ ಮಹಿಳೆಯರು ಹಾಗೂ ಎಲ್ಲಾ ವರ್ಗದ ದುರ್ಬಲರಿಗೆ ಆರ್ಥಿಕ ಶಕ್ತಿ ಸಿಕ್ಕಾಗ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಪರಸ್ಪರ ಪ್ರೀತಿಸಿ ಮದುವೆ ಆಗುವುದು ಬೇರೆ. ಆದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲತೆ ಇದ್ದರೆ ಯಾವ ಜಾತಿಯವರು ಬೇಕಾದರೂ ಮದುವೆ ಆಗಬಹುದು. ರಾಜಕೀಯ ಸ್ವಾತಂತ್ರ್ಯ ಯಶಸ್ಸು ಗಳಿಸಬೇಕಾದರೆ ಅಬಲರಾಗಿದ್ದವರು, ತಳ ಸಮುದಾಯದವರಿಗೆ ಈ ನಿಟ್ಟಿನಲ್ಲಿ ಶಕ್ತಿ ಬರಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಹೀಗಾಗಿ ನಮ್ಮ ಸರ್ಕಾರದಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ'' ಎಂದರು.

''ಸಮಾಜದಲ್ಲಿ ಎಲ್ಲರೂ ಕೂಡ ಅಂತರ್ಜಾತಿ ವಿವಾಹವಾಗುವುದಿಲ್ಲ. ವಿದ್ಯಾವಂತರು, ಸಬಲರಾದವರು ಮಾತ್ರ ಅಂತರ್ಜಾತಿ ಮದುವೆಯಾಗಲು ಸಾಧ್ಯವಾಗಿದೆ. ಮನುಷ್ಯ ಇತರರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಬಸವಣ್ಣ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು'' ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಜ್ವಲ್​ನನ್ನು ಕಳುಹಿಸಿರುವುದು ಅವರೇ ಅಲ್ವಾ?: ದೇವೇಗೌಡರ ಪತ್ರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ - CM REACTION ON DEVE GOWDA LETTER

Last Updated : May 24, 2024, 8:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.