ETV Bharat / state

ಬೆಂಗಳೂರು ಕೆಫೆ​ ಸ್ಫೋಟ: ಹೆಚ್​ಎಎಲ್​​ ಠಾಣೆಯಲ್ಲಿ ಯುಎಪಿಎ ಪ್ರಕರಣ ದಾಖಲು

author img

By ETV Bharat Karnataka Team

Published : Mar 2, 2024, 7:06 AM IST

ರಾಮೇಶ್ವರಂ ಕೆಫೆಯಲ್ಲಿನ​ ಬ್ಲಾಸ್ಟ್​ ಕುರಿತು ಹೆಚ್​ಎಎಲ್ ಠಾಣೆಯಲ್ಲಿ ​ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Bangalore Rameswaram Cafe Bomb Blast: Complaint filed under UAPA
ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ: ಹೆಚ್​ಎಎಲ್​ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ನಗರದ ಪ್ರಸಿದ್ಧ ಉಪಹಾರ ಗೃಹ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ​ಸ್ಫೋಟ​ಕ್ಕೆ ಸಂಬಂಧಿಸಿದಂತೆ ಹೆಚ್​ಎಎಲ್ ಪೊಲೀಸ್​​​ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಕೆಫೆ ಸಿಬ್ಬಂದಿ ಹಾಗೂ ಗ್ರಾಹಕರು ಸೇರಿದಂತೆ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.

"ಗಾಯಾಳುಗಳ ಜೊತೆ ನಾವಿದ್ದೇವೆ": ಘಟನೆ ಬಗ್ಗೆ ರಾಮೇಶ್ವರಂ ಕೆಫೆಯ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ರಾಘವೇಂದ್ರ ರಾವ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಬ್ರೂಕ್​ಫೀಲ್ಡ್​ ಶಾಖೆಯಲ್ಲಿ ನಡೆದ ಘಟನೆಯ ಬಗ್ಗೆ ನಾವು ತುಂಬಾ ದುಃಖಿತರಾಗಿದ್ದೇವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ನಾವು ಅಧಿಕಾರಿಗಳ ತನಿಖೆಯಲ್ಲಿ ಸಹಕರಿಸುತ್ತಿದ್ದೇವೆ. ಗಾಯಗೊಂಡವರು ಹಾಗೂ ಅವರ ಕುಟುಂಬದ ಜೊತೆಗೆ ನಾವಿದ್ದೇವೆ. ನಾವು ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲ, ಕಾಳಜಿ ಹಾಗೂ ನೆರವು ನೀಡುತ್ತಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತೇವೆ" ಎಂದು ಹೇಳಿದ್ದಾರೆ.

ಬೆಂಗಳೂರಿನ ಕುಂದಲಹಳ್ಳಿ ಸಮೀಪದಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಾಂಬ್​ ಸ್ಫೋಟ ಸಂಭವಿಸಿತ್ತು. ಬಾಂಬ್​ ಸ್ಫೋಟಗೊಳ್ಳುತ್ತಿದ್ದಂತೆ ಕೆಫೆಯಲ್ಲಿದ್ದ 30 ಮಂದಿ ಹೊರಗೆ ಓಡಿ ಬಂದಿದ್ದರು. ಘಟನೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ, ಎಫ್​ಎಸ್​ಎಲ್​ ತಂಡ ಹಾಗೂ ಪೊಲೀಸ್​ ತಂಡ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, "ರಾಮೇಶ್ವರ ಕೆಫೆಯಲ್ಲಿ ನಡೆದಿದ್ದು ಭಾರೀ ಪ್ರಮಾಣದ ಸ್ಫೋಟವಲ್ಲ, ಆದರೆ ಸುಧಾರಿತ ಸ್ಫೋಟ ಸಂಭವಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೂರ್ಣ ಪ್ರಮಾಣದ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದ ಡಿಜಿ ಹಾಗೂ ಐಜಿಪಿ ಅಲೋಕ್​ ಮೋಹನ್​ ಅವರು, "​ಸ್ಫೋಟದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಎರ್ಪ್ಎಸ್​ಎಲ್ ತಂಡ ಹಾಗೂ ಪೊಲೀಸ್​ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಕೂಡ ಮಾಹಿತಿ ಪಡೆದಿದ್ದಾರೆ. ತನಿಖೆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ." ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದ ಸಿಸಿಟಿವಿ ವಿಡಿಯೋ: ಡಿಜಿ ಅಲೋಕ್ ಮೋಹನ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.