ETV Bharat / state

ಬೆಂಗಳೂರಿನಲ್ಲಿ ಅಂತರ್ಜಲ ಕುಸಿತ: ಕುಡಿಯುವ ನೀರು ಸರಬರಾಜು ಮಾಡಲು ಮುಂದಾದ ಜಲಮಂಡಳಿ

author img

By ETV Bharat Karnataka Team

Published : Feb 22, 2024, 4:50 PM IST

ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಜಲಮಂಡಳಿ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ

ಬೆಂಗಳೂರು: ನಗರದಲ್ಲಿ ಈ ಬಾರಿ ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಅನೇಕ ಕಾರಣಗಳಿಂದ ಫೆಬ್ರವರಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳಿಗೆ ಜಲಮಂಡಳಿ ಕುಡಿಯುವ ನೀರನ್ನು ಸರಬರಾಜು ಮಾಡಲು ಮುಂದಾಗಿದೆ.

ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಬೇಸಿಗೆ ಆರಂಭವಾಗುವ ಮುನ್ನವೇ ಸಮಸ್ಯೆ ತಲೆದೋರಿದೆ. ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿದ್ದು, ನೀರಿನ ಕೊರತೆ ಎದುರಾಗಿದೆ. ಈ ಪ್ರದೇಶಗಳಿಗೆ ಜಲಮಂಡಳಿಯ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲು ಮುಂದಾಗಿದ್ದು, 86 ಟ್ಯಾಂಕರ್​ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಲ್ಲಿ 51 ಗ್ರಾಮಗಳಿಗೆ ಸಹ ನೀರಿನ ಸರಬರಾಜು ಮಾಡಲು ಜಲಮಂಡಳಿ ಸಜ್ಜಾಗಿದೆ.

ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಜೂನ್‌ವರೆಗೆ ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸುವಷ್ಟು ನೀರಿದೆ. ಹೀಗಾಗಿ ಜಲಮಂಡಳಿಯು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಬಿಬಿಎಂಪಿ ಮಿತಿಯಲ್ಲಿರುವ 51 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆ ಮಾಡುತ್ತಿದೆ. ಸಮಸ್ಯೆಗಳಿದ್ದ ಕಡೆ ಟ್ಯಾಂಕರ್​ಗಳನ್ನು ಸಹ ಬಳಸಲು ಮುಂದಾಗಿದ್ದೇವೆ. ಟ್ಯಾಂಕರ್​ಗಳಿಂದ 6,000 ಲೀಟರ್‌ ನೀರು ಪೂರೈಕೆ ಮಾಡಬಹುದಾಗಿದ್ದು, ಇದರ ಹೊರತಾಗಿ ಬೇಸಿಗೆಯ ತಿಂಗಳುಗಳಲ್ಲಿ ನಿವಾಸಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬೋರ್‌ವೆಲ್‌ಗಳ ಸೇವೆ ಮತ್ತು ದುರಸ್ತಿಗಾಗಿ ತಂಡವನ್ನು ರಚಿಸಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಋತುವಿನಲ್ಲಿ ಬೆಂಗಳೂರು ಶೇ.50ರಷ್ಟು ಮಳೆ ಕೊರತೆ ಎದುರಿಸಿತ್ತು. ಕಳೆದ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿತ್ತು. ಅಲ್ಲದೆ, ಬಯಲು ಜಾಗಗಳು ಕಾಂಕ್ರಿಟೀಕರಣ ಗೊಳ್ಳುತ್ತಿರುವುದರಿಂದ ಬೋರ್‌ವೆಲ್‌ಗಳ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲು ಬಾವಿಗಳು ಮತ್ತು ಸಣ್ಣ ಕೊಳಗಳನ್ನು ನಿರ್ಮಿಸಬೇಕಾಗುತ್ತದೆ ಎಂದಿದ್ದಾರೆ.

ಜಲಕ್ಷಾಮದ ಕುರಿತು ಜಲತಜ್ಞ ವಿಶ್ವನಾಥ ಶ್ರೀಕಂಠಯ್ಯ ಮಾತನಾಡಿದ್ದು, ಮಂಡಳಿಯು ತೃತೀಯ ಹಂತದ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ಮಳೆ ನೀರಿನ ಚರಂಡಿಗಳು, ಕಣಿವೆಗಳು ಮತ್ತು ಕೆರೆಗಳ ಬಳಿಯಿರುವ ಬೋರ್‌ವೆಲ್‌ಗಳನ್ನು ರೀಚಾರ್ಜ್ ಮಾಡಲು ಸಹ ಸಂಸ್ಥೆಗೆ ಅವಕಾಶವಿದೆ. ವೃಷಭಾವತಿ ಕಣಿವೆಯು ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಹೊಂದಿದ್ದು, ಇದು 150 ಎಂಎಲ್‌ಡಿ ಕೊಳಚೆ ನೀರನ್ನು ಸಂಸ್ಕರಿಸುತ್ತದೆ. ಅದೇ ರೀತಿ ಜಕ್ಕೂರು ಕೆರೆಯಲ್ಲಿ ತೃತೀಯ ನೀರಿನ ಶುದ್ಧೀಕರಣ ಘಟಕವಿದೆ. ಸುತ್ತಮುತ್ತಲಿನ ಪ್ರದೇಶಗಳ ಕೊಳವೆಬಾವಿಗಳನ್ನು ಬಳಸಿಕೊಂಡು ಸದ್ಯಕ್ಕೆ ಬೇಕಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾವೇರಿ: ನದಿ ತೀರದ ಗ್ರಾಮದಲ್ಲೇ ಕುಡಿಯುವ ನೀರಿಗೆ ಹಾಹಾಕಾರ; ಗುಂಡಿ ತೋಡಿ ಜಲ ಸಂಗ್ರಹಿಸುತ್ತಿರುವ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.