ETV Bharat / state

ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಸ್ಫೋಟ: ವ್ಯಾಪಾರಿಗೆ ಗಾಯ, ದಂಪತಿ ವಶಕ್ಕೆ

author img

By ETV Bharat Karnataka Team

Published : Feb 18, 2024, 4:08 PM IST

Updated : Feb 18, 2024, 7:19 PM IST

ಶಿರಾಳಕೊಪ್ಪದ ಬಸ್ ನಿಲ್ದಾಣದ ಮುಂಭಾಗ ಸಿಡಿಮದ್ದು ಸ್ಫೋಟಗೊಂಡಿದೆ.

ಶಿವಮೊಗ್ಗ
ಶಿವಮೊಗ್ಗ

ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ : ಶಿರಾಳಕೊಪ್ಪ ಬಸ್ ನಿಲ್ದಾಣದ ಮುಂಭಾಗ ಇಂದು ಮಧ್ಯಾಹ್ನ ಸ್ಫೋಟವಾಗಿದೆ. ಪರಿಣಾಮ ಬೆಡ್ ಶೀಟ್ ವ್ಯಾಪಾರಿ ಅಂತೋನಿದಾಸ್ (50) ಎಂಬುವರು ಗಾಯಗೊಂಡಿದ್ದಾರೆ.

ಅಂತೋನಿ ದಾಸ್ ಅವರ ಗಾಡಿ ಬಳಿ ಹಾವೇರಿ ಜಿಲ್ಲೆಯ ದಂಪತಿ ಉಮೇಶ್ ಹಾಗೂ ರೂಪಾ ದಂಪತಿ ಆಗಮಿಸಿ, ತಮ್ಮ ಬಳಿ ಇರುವ ಬ್ಯಾಗ್ ಅನ್ನು ಇಟ್ಟು ಬೇರೆ ಅಂಗಡಿಗೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ದಂಪತಿ ಇಟ್ಟಿದ್ದ ಬ್ಯಾಗ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಂತೋನಿ ದಾಸ್ ಕಾಲು ಹಾಗೂ ಕೈಗೆ ಗಾಯವಾಗಿದೆ. ತಕ್ಷಣ ಇವರನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ.

ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ಸ್ಫೋಟ

ಉಮೇಶ್ ದಂಪತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರು ಕಾಡು ಪ್ರಾಣಿಗಳಿಗೆ ಇಡುವ ಸಿಡಿಮದ್ದನ್ನು ತಮ್ಮ ಬ್ಯಾಗ್​ನಲ್ಲಿ ಇಟ್ಟಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇಂದು ಸಂತೆ ಇರುವ ಕಾರಣ ದಂಪತಿ ಶಿರಾಳಕೊಪ್ಪಕ್ಕೆ ಆಗಮಿಸಿದ್ದರು. ಸ್ಫೋಟದಿಂದ ಅಂತೋನಿದಾಸ್ ಅವರ ಬಳಿ ಇದ್ದ ಎಲೆಕ್ಟ್ರಿಕಲ್ ಗ್ಯಾಸ್ ಸ್ಟೌವ್ ಸಹ ಸ್ಫೋಟವಾಗಿದೆ. ಶಿರಾಳಕೊಪ್ಪಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಗಾಯಾಳು ಅಂತೋನಿ ದಾಸ್ ಮಾತನಾಡಿ, ''ನಾನು ಬೆಡ್ ಶೀಟ್ ವ್ಯಾಪಾರ ಮಾಡುತ್ತೇನೆ. ಪ್ರತಿ ಸಂತೆಯ ವೇಳೆ ನಾನು ಶಿರಾಳಕೊಪ್ಪದಲ್ಲಿ ಅಂಗಡಿ ಹಾಕುತ್ತೇನೆ. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಮ್ಮಲ್ಲಿ ಬೆಡ್ ಶೀಟ್ ಖರೀದಿ ಮಾಡಿ ನಮ್ಮ ಬಳಿ ಕೈ ಚೀಲದಂತಹ ಬ್ಯಾಗ್ ಅನ್ನು ಇಟ್ಟು ಬೇಗ ಬರುವುದಾಗಿ ಹೇಳಿ ಹೋದರು. ಅದರಲ್ಲಿ ಏನಿತ್ತು ಏನೂ ಗೊತ್ತಿಲ್ಲ. ಅಲ್ಲಿ ಬ್ಯಾಗ್​ಗೆ ನನ್ನ ಕಾಲು ತಾಗಿ ಬ್ಲಾಸ್ಟ್ ಆಯಿತು. ಇದರಿಂದ ನನ್ನ ಎರಡು ಕಾಲುಗಳಿಗೆ, ಕೈಗಳಿಗೆ ಗಾಯವಾಗಿದೆ. ಉಳಿದಂತೆ ಸಿಡಿಮದ್ದಿನ ಚೂರು ಸಿಡಿದು ಸಣ್ಣಪುಟ್ಟ ಗಾಯವಾಗಿದೆ. ಅದು ಕಲ್ಲಿನ ಪುಡಿ ಸಿಡಿದ ಹಾಗೆ ಸಿಡಿದಿದೆ ಎಂದರು. ಬಂದವರು ನನಗೆ ಪರಿಚಯವಿಲ್ಲ. ಅವರು ನಾವು ತಡಗುಂದದವರು ಎಂದು ಹೇಳಿ ಪರಿಚಯ ಮಾಡಿಕೊಂಡು ನಂತರ ಬ್ಯಾಗ್ ಇಟ್ಟು ಹೋದರು. ಈ ಕುರಿತು ತನಿಖೆ ನಡೆಸಬೇಕು'' ಎಂದು ಒತ್ತಾಯಿಸಿದ್ದಾರೆ. ‌

ಗಾಯಾಳು ಅಂತೋನಿ ದಾಸ್

ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಅವರು ಮಾತನಾಡಿ, ''ಶಿರಾಳಕೊಪ್ಪದಲ್ಲಿ ಸಂತೆ ನಡೆಯುತ್ತಿತ್ತು. ಸಂತೆಯಲ್ಲಿ ಅಂತೋನಿ ಎಂಬ ವ್ಯಕ್ತಿ ಬೆಡ್ ಶೀಟ್ ವ್ಯಾಪಾರ ಮಾಡುತ್ತಿದ್ದರು. ಇಂದು ಅಂತೋನಿ ಬಳಿ ಒಬ್ಬ ಅಜ್ಜಿ, ಮೊಮ್ಮಗ ಹಾಗೂ ಮಹಿಳೆ ಬಂದು 800 ರೂ. ಗೆ ಬೆಡ್ ಶೀಟ್ ಕೊಂಡುಕೊಂಡಿದ್ದಾರೆ. ನಂತರ ಅರ್ಧ ಗಂಟೆ ಬಿಟ್ಟು ಅಜ್ಜಿ, ಇಬ್ಬರು ದಂಪತಿಯನ್ನು ಕರೆದುಕೊಂಡು ಬಂದು ಇವರು ನಮಗೆ ಬೇಕಾದವರು ಎಂದು ಉಮೇಶ್ ಹಾಗೂ ರೂಪ ದಂಪತಿ ಬಳಿ ಇರುವ ಬ್ಯಾಗ್ ಅನ್ನು ಇಟ್ಟು, ಸಂತೆ ಮುಗಿಸಿಕೊಂಡು ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ.

ಬ್ಯಾಗ್ ಇಟ್ಟು ಹೋದ 15 ನಿಮಿಷದ ವೇಳೆಗೆ ಅಂತೋನಿ ಅವರ ಕಾಲು ಬ್ಯಾಗ್​ಗೆ ತಾಗಿದೆ. ಆಗ ಸಿಡಿಮದ್ದು ಸ್ಫೋಟಗೊಂಡಿದೆ. ಈ ವೇಳೆ ಅಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಅಂತೋನಿ ದಾಸ್​ಗೆ ಗಾಯವಾಗಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಉಮೇಶ್ ಹಾಗೂ ರೂಪಾ ದಂಪತಿ ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಪ್ರಾಣಿಗಳನ್ನು ಹೆದರಿಸಲು ಸಿಡಿಮದ್ದು ಇಡುತ್ತಾರೆ. ಇದು ಸಹ ಅದೇ ರೀತಿಯ ಸಿಡಿಮದ್ದಾಗಿದೆ. ಸದ್ಯಕ್ಕೆ ದೊರೆತ ಮಾಹಿತಿ ಇದಾಗಿದೆ. ಇನ್ನೂ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ. ಸ್ಥಳಕ್ಕೆ ನಮ್ಮ ತಜ್ಞರ ತಂಡ ಸಹ ಭೇಟಿ ನೀಡಿದೆ. ದಂಪತಿ ಮೂಲತಃ ಹಾವೇರಿಯವರು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅವರು ಕೆಲಸ ಮಾಡಿದ ಜಾಗಕ್ಕೆ ಹೋಗಿ ವಿಚಾರಣೆ ನಡೆಸಬೇಕೇ? ಎಂಬುದನ್ನು ತನಿಖೆಯ ವೇಳೆ ನಿರ್ಧಾರ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.

ಎಲೆಕ್ಟ್ರಿಕಲ್ ಗ್ಯಾಸ್ ಸ್ಟೌವ್
ಎಲೆಕ್ಟ್ರಿಕಲ್ ಗ್ಯಾಸ್ ಸ್ಟೌವ್

ಸ್ಫೋಟದ ಕುರಿತು ಸ್ಥಳೀಯರಾದ ಶಾರೂಕ್ ಅವರು ಮಾತನಾಡಿ, ನಾನು ಬಸ್​ಗಾಗಿ ಬಸ್ ಸ್ಟಾಂಡ್​ನಲ್ಲಿ ನಿಂತಿದ್ದೆ. ಆಗ ದಿಢೀರ್ ಎಂದು ಸ್ಫೋಟದ ಶಬ್ಧ ಕೇಳಿಸಿತು. ಆಗ ಅಲ್ಲಿ‌ ನೋಡಿದ್ರೆ, ಜೋರಾಗಿ ಶಬ್ಧದೊಂದಿಗೆ ಹೊಗೆಯೂ ಬಂತು. ಈ ವೇಳೆ ಓರ್ವರಿಗೆ ಗಾಯವಾಗಿತ್ತು. ಅಲ್ಲಿ ಜನ ಸೇರಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟದಿಂದ ಮೂವರು ಸಾವು: ಸ್ಥಳಕ್ಕೆ ಎಸ್​ಪಿ ಭೇಟಿ, ಪರಿಶೀಲನೆ

Last Updated : Feb 18, 2024, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.