ETV Bharat / state

ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೇ ನಿರ್ಣಯ ಮಂಡಿಸಿ ಬಿಜೆಪಿ - ಜೆಡಿಎಸ್ ತಿರುಗೇಟು

author img

By ETV Bharat Karnataka Team

Published : Feb 23, 2024, 1:05 PM IST

Updated : Feb 23, 2024, 3:09 PM IST

ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯಲ್ಲೇ ನಿರ್ಣಯ ಮಂಡಿಸಿದ ಪ್ರಸಂಗ ಕಂಡು ಬಂತು.

BJP JDS presented a resolution  state government  ರಾಜ್ಯ ಸರ್ಕಾರ  ನಿರ್ಣಯ ಮಂಡಿಸಿದ ಬಿಜೆಪಿ ಜೆಡಿಎಸ್
ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೇ ನಿರ್ಣಯ ಮಂಡಿಸಿದ ಬಿಜೆಪಿ-ಜೆಡಿಎಸ್

ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಿರ್ಣಯ ಮಂಡಿಸಿವೆ. ಸದನ ಮತ್ತೆ ಸೇರಿದಾಗ ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಸ್ಥಾನಗಳಿಗೆ ತೆರಳುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ಆದರೆ, ಸ್ಪೀಕರ್ ಮನವಿಗೆ ಜಗ್ಗದ ಸದಸ್ಯರು ಧರಣಿ ಮುಂದುವರಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಿದ್ದರು. ಇದರ ಮಧ್ಯೆ ಖಾದರ್ ಅವರು ವಿಧೇಯಕಗಳನ್ನು ಕೈಗೆತ್ತಿಕೊಂಡರು. ಈ ನಡುವೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, ಸದನದಲ್ಲೇ ಸರ್ಕಾರದ ವಿರುದ್ಧ ತೆಗೆದುಕೊಂಡ ನಿರ್ಣಯನ್ನು ಓದಿದರು.

"ಭಾರತ ಪ್ರಜಾಸತ್ತಾತ್ಮಕ ದೇಶವಾಗಿ 75 ವರ್ಷ ಕಳೆದಿದೆ. ಅಧಿಕವಾಗಿ ಆಡಳಿತ ಮಾಡಿರುವುದು ಕಾಂಗ್ರೆಸ್ ಪಕ್ಷ. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ 20% ರಷ್ಟು ಕೂಟ್ಟಿದ್ದು, ಶೇ 30 ಹೆಚ್ಚಿಸಲು ಸುದೀರ್ಘ ಹೊರಾಟ ರಾಜ್ಯ ಮಾಡಬೇಕಾಯಿತು. ಶೇ 30% ರಿಂದ ಶೇ 40% ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಪಾಲು ಕೊಡದ ಯುಪಿಎ ಸರ್ಕಾರದ ವಿರುದ್ಧ ಚಕಾರ ಎತ್ತದ ರಾಜ್ಯ ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ " ಎಂದು ಹೇಳಿದರು.

"ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಕೋ ಆಪರೇಟಿವ್ ಫೆಡರಲಿಸಂ ಎಂಬ ನೀತಿಯಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ 32% ರಿಂದ 42% ಏರಿಸಿರುವುದು ಎನ್​ಡಿಎ ಸರ್ಕಾರದ ಕಾಳಜಿ ತೋರಿಸುತ್ತದೆ.
ಸಂವಿಧಾನದ ಅಡಿ ರಚನೆಯಾಗಿರುವ ಹಣಕಾಸು ಆಯೋಗಗಳ ಶಿಫಾರಸಿನಂತೆ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಅದನ್ನು ಕೆಂದ್ರದ ಎನ್​ಡಿಎ ಸರ್ಕಾರ ಚಾಚು ತಪ್ಪದೆ ಪಾಲಿಸಿದೆ ಎಂದರು.

ರಾಜ್ಯ ಸರ್ಕಾರದ ತಾರತಮ್ಯದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ. 15 ನೇ ಹಣಕಾಸಿನ ಕಾರ್ಯ ಪ್ರಾರಂಭಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ರಾಜ್ಯ ಸರ್ಕಾರದ ವಸ್ತು ಸ್ಥಿತಿಗತಿಗಳನ್ನು ಆಯೋಗಕ್ಕೆ ಮನದಟ್ಟು ಮಾಡಿಕೊಡಲು ವಿಫಲವಾಗಿದೆ. ಅದಲ್ಲದೇ ಆಯೋಗದ ನಿರ್ಣಾಯಕ ಅಂತಿಮ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್​ನ ಐದು ಜನ ಸಚಿವರು ಭಾಗವಹಿಸಿದ್ದು, ಆ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಮೌನ ವಹಿಸಿದ್ದರು ಮತ್ತು ಆಯೋಗದ ಹಂಚಿಕೆಯಂತೆ ಹಣಕಾಸು ಹಂಚಿಕೆ ಕಾರ್ಯ ಆರಂಭವಾಗಿ ಎರಡು ವರ್ಷಗಳ ಮೇಲಾಗಿದೆ. ಏನಾದರೂ ಮಾನದಂಡದಲ್ಲಿ ವ್ಯತ್ಯಾಸವಾಗಿ ಅನುದಾನ ಕಡಿತವಾಗಿದ್ದರೆ ಅದಕ್ಕೆ ಅವತ್ತಿನ ಕಾಂಗ್ರೆಸ್ ಸರ್ಕಾರ ವೇ ಕಾರಣ" ಎಂದು ಕಿಡಿಕಾರಿದರು.

ಸಂವಿಧಾನಾತ್ಮಕವಾಗಿರುವ ಜಿಎಸ್​ಟಿ: "ಒಂದು ದೇಶ ಒಂದು ತೆರಿಗೆ ಜಿಎಸ್​ಟಿ ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಕಾನೂನು. ಅದರಲ್ಲಿ ಐದು ವರ್ಷ ರಾಜ್ಯದ ಆರ್ಥಿಕತೆ ಶೇ 14% ರಷ್ಡು ಬೆಳವಣಿಗೆ ಆಧರಿಸಿ ಐದು ವರ್ಷ ತೆರಿಗೆಯ ಪರಿಹಾರ ನಿಗದಿ ಪಡಿಸಲಾಗುವುದು. ಅದರಂತೆ ಶೇ 14% ಆರ್ಥಿಕ ಬೆಳವಣಿಗೆ ಅನುಸಾರ 1,06,258 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿದೆ. ಇದು 2022 ಕ್ಕೆ ಅಂತಿಮಗೊಂಡಿದ್ದರೂ ಕೂಡ ರಾಜ್ಯ ಸರ್ಕಾರ 2023-24 ನ್ನು ಸೇರಿಸಿ ಸುಳ್ಳು ಲೆಕ್ಕಾಚಾರವನ್ನು ರಾಜ್ಯದ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹಲವು ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕೊಡುವ ವ್ಯವಸ್ಥೆ‌ಯನ್ನು ಕೇಂದ್ರ ಅನುಸರಿಸಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಹಾಯಧನ ಕಡಿತಗೊಂಡಿದೆ ಎಂಬ ಇನ್ನೊಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಅಶೋಕ್​ ಹೇಳಿದರು.

ಸೆಸ್​​, ಸರ್​​ಚಾರ್ಜ್​ಗಳು ಇಂದಿನದ್ದಲ್ಲ: ಸೆಸ್ ಮತ್ತು ಸರ್ ಚಾರ್ಜ್​ಗಳು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಕಾಲದಿಂದಲೂ ಇವೆ. ಕೆಲವು ನಿರ್ಧಿಷ್ಟ ‌ಕಾರ್ಯಕ್ರಮಕ್ಕಾಗಿ ಈ ತೆರಿಗೆ ಹಾಕುವ ಅಧಿಕಾರ ಕೆಂದ್ರಕ್ಕೆ ಮಾತ್ರ ಇದೆ. ನಮ್ಮ ರಾಜ್ಯಕ್ಕೆ 1,06,258 ಕೊಟಿ ರೂ ಜಿಎಸ್​ಟಿ ಪರಿಹಾರ ಇಂತಹ ಸರ್ ಚಾರ್ಜ್ ಮತ್ತು ಸೆಸ್ ಮೂಲಕ ಬಂದಿರುತ್ತದೆ. ಈ ಸತ್ಯವನ್ನು ಮರೆಮಾಚಿ ರಾಜ್ಯಕ್ಕೆ ಇನ್ನಷ್ಟು ಪಾಲು ಬರಬೇಕು ಎಂಬ ಬೇಡಿಕೆ ರಾಜಕೀಯ ಪ್ರೇರಿತವಾಗಿದೆ ಎಂದರು.

ಜಿಎಸ್​ಟಿಯನ್ನು ಮೊದಲು ರಾಷ್ಟ್ರದಲ್ಲಿ ಪ್ರಸ್ತಾಪಿಸಿರುವುದು ಕಾಂಗ್ರೆಸ್ ಸರ್ಕಾರ. ಅದರಲ್ಲಿ ಹಲವಾರು ಮಾರ್ಪಾಡು ಮಾಡಿ ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಅಳವಡಿಸಿ ಸಮರ್ಥವಾಗಿ ಜಾರಿಗೆ ತಂದಿದೆ. ಇದರಿಂದ ರಾಜ್ಯಗಳ ತೆರಿಗೆ ಸಂಗ್ರಹ ಹೆಚ್ಚಾಗಿರುವುದು ಅಂಕಿ - ಅಂಶಗಳಿಂದ ಗೊತ್ತಾಗುತ್ತದೆ. ಹಾಗೂ ಶೇ 14% ಆರ್ಥಿಕ ಬೆಳವಣಿಗೆ ಆಗದಿದ್ದರೂ ಕೂಡ ತೆರಿಗೆ ಪರಿಹಾರ 14% ರಷ್ಟು ಕೊಡುವ ಮುಖಾಂತರ ರಾಜ್ಯಗಳಲ್ಲಿ ಸ್ಥಿರವಾದ ಆರ್ಥಿಕತೆ ತರಲು ಸಹಾಯವಾಗಿದೆ. ಕಾಲ್ಪನಿಕವಾಗಿ ಹಾಗೂ ಅವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿ ಬಹಳ ದೊಡ್ಡ ಪ್ರಮಾಣದ ನಷ್ಟ ರಾಜ್ಯಕ್ಕೆ ಆಗಿದೆ ಎಂದು ಹೇಳುವುದು ಮತ್ತು ಕೇಂದ್ರವನ್ನು ದೂಷಿಸುವುದು ರಾಜಕಾರಣದಲ್ಲಿ ಅತಿ ದೊಡ್ಡ ಸುಳ್ಳಾಗಿದೆ " ಎಂದು ಅಶೋಕ್​ ಟೀಕಿಸಿದರು.

ನ್ಯಾಯ ಸಮ್ಮತ ಪಾಲು ಪಡೆಯಲು ನಾವೆಲ್ಲರೂ ಬದ್ಧತೆ ತೋರಬೇಕು: "ರಾಜ್ಯದಲ್ಲಿ ಅಭಿವೃದ್ಧಿ ಮತ್ತು ರಾಜ್ಯದ ಪಾಲನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಾವೆಲ್ಲರೂ ಕೂಡ ಬದ್ಧತೆ ತೋರಿಸಬೇಕು. ಆದರೆ ಸುಳ್ಳು ಕಾಲ್ಪನಿಕ ಮತ್ತು ರಾಜಕೀಯ ಪ್ರೇರಣೆಯ ವಿಚಾರ, ವಾದ, ನಿರ್ಣಯಗಳನ್ನು ಖಂಡಿಸಲೇಬೇಕು. ರಾಜ್ಯ ಸರ್ಕಾರ ಆರ್ಥಿಕತೆಯ ಬಗ್ಗೆ ನಿನ್ನೆಯ ನಿರ್ಣಯವನ್ನು ಖಂಡಿಸುತ್ತೇವೆ. ಅದಲ್ಲದೇ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹ, ಹಂಚಿಕೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈಬಿಡಬೇಕೆಂದು ಒತ್ತಾಯ ಮಾಡುತ್ತೇವೆ " ಎಂದು ಅಶೋಕ್ ಸದನದಲ್ಲಿ ಓದಿ ತಮ್ಮ ಶಾಸಕರನ್ನು ಬೆಂಬಲ ಕೋರಿದರು. ಆಗ ಎಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ಓದಿ: ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ: ಸದನದಲ್ಲಿ ಪ್ರತಿಪಕ್ಷಗಳ ಧರಣಿ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

Last Updated :Feb 23, 2024, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.