ETV Bharat / state

ಚಿತ್ರದುರ್ಗ ಕ್ಷೇತ್ರಕ್ಕೂ ಹೊಸ ಅಭ್ಯರ್ಥಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಬದಲು ಕಾರಜೋಳಗೆ ಬಿಜೆಪಿ ಟಿಕೆಟ್ - Lok Sabha Election 2024

author img

By ETV Bharat Karnataka Team

Published : Mar 27, 2024, 7:20 PM IST

Updated : Mar 27, 2024, 7:47 PM IST

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್​ ಘೋಷಿಸಿದೆ.

BJP announced Govind  Karjol  as its candidate for Chitradurga Lok Sabha constituency
ಕೇಂದ್ರ ಸಚಿವ ನಾರಾಯಣಸ್ವಾಮಿ ಬದಲು ಕಾರಜೋಳಗೆ ಬಿಜೆಪಿ ಟಿಕೆಟ್

ಬೆಂಗಳೂರು/ನವದೆಹಲಿ: ಕರ್ನಾಟಕದ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್​ ಘೋಷಿಸಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರಿಗೆ ಟಿಕೆಟ್​ ನೀಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. 28 ಕ್ಷೇತ್ರಗಳ ಪೈಕಿ ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲಾಗಿದೆ. ಈಗಾಗಲೇ ಉಳಿದ 24 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿತ್ತು. ಚಿತ್ರದುರ್ಗದಲ್ಲಿ ಸ್ಥಳೀಯರಿಗೆ ಟಿಕೆಟ್​ ನೀಡಬೇಕು ಎಂಬ ಒತ್ತಾಯ ಪ್ರಬಲವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಳಂಬವಾಗಿತ್ತು.

ಇದೀಗ ಚಿತ್ರದುರ್ಗ ಕ್ಷೇತ್ರದಲ್ಲಿ ಅಚ್ಚರಿ ಆಯ್ಕೆ, ಸಂತರಿಗೆ ಮಣೆ ಎನ್ನುವ ಚರ್ಚೆಗೆ ತೆರೆ ಎಳೆದಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಚಂದ್ರಪ್ಪ ಪುತ್ರನಿಗೆ ನಿರಾಸೆಯಾಗಿದೆ. ಇಂದು ಕೇಂದ್ರ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಚಿತ್ರದುರ್ಗದ ಟಿಕೆಟ್​ ಪ್ರಕಟಿಸಲಾಗಿದೆ. ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಾವು ಸ್ಪರ್ಧಿಸುವುದಿಲ್ಲಎಂದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಇದರ ನಂತರ ಗೋವಿಂದ ಕಾರಜೋಳ ಹೆಸರು ಮುಂಚೂಣಿಗೆ ಬಂದಿತ್ತು. ನಾರಾಯಣಸ್ವಾಮಿ ತಾವು ಸ್ಫರ್ಧಿಸದಿದ್ದರೂ, ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂದು ಪಕ್ಷದ ಮೇಲೆ ಒತ್ತಡ ಹಾಕಿದ್ದರು. ಇದರ ಫಲವಾಗಿಯೇ ಕಾರಜೋಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾದಾರ ಚೆನ್ನಯ್ಯ ಸ್ವಾಮೀಜಿಗಳನ್ನು ರಾಜಕೀಯಕ್ಕೆ ತರಬೇಕು. ಅವರಿಗೆ ಚಿತ್ರದುರ್ಗ ಲೋಕಸಭಾ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಬಿಜೆಪಿಯಲ್ಲಿ ನಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಇಂತಹ ಚರ್ಚೆ ಆರಂಭವಾಗಿತ್ತು. ಈಗ ಮತ್ತೆ ಅಂತಹದ್ದೇ ಚರ್ಚೆ ಆರಂಭಗೊಂಡಿತ್ತು. ಆದರೆ, ಅವರು ರಾಜಕೀಯ ಪ್ರವೇಶಕ್ಕೆ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.

ಮಾದಾರ ಚೆನ್ನಯ್ಯ ಶ್ರೀಗಳನ್ನು ಕರ್ನಾಟಕದ ಯೋಗಿಯಾಗಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುವ ಚಿಂತನೆ ನಡೆಸಿತ್ತು. ಆದ್ದರಿಂದ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬರಲು ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನಿಸಿದ್ದರು. ಅದರಲ್ಲೂ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗಿದೆ. ಮಧ್ಯ ಕರ್ನಾಟಕದಲ್ಲಿ ಮಾದಿಗ ಸಮುದಾಯ ವಿಸ್ತ್ರತವಾಗಿ ಹರಡಿರುವುದರಿಂದ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವೂ ಇತ್ತು.

ಚಿತ್ರದುರ್ಗ ಲೋಕಸಭೆ ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್‌ ಅವರಿಗೆ ನಿರಾಶೆಯಾಗಿದೆ. ಸ್ಥಳೀಯ ಮಾನದಂಡದ ಮೇಲೆ ತಮಗೆ ಟಿಕೆಟ್‌ ನೀಡಬೇಕು ಎಂದು ರಾಜ್ಯ ಮುಖಂಡರ ಮೇಲೆ ಒತ್ತಡ ತಂದಿದ್ದರು. ಈ ಸಂಬಂಧ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ರಾಜ್ಯ, ಕೇಂದ್ರದ ನಾಯಕರನ್ನು ಭೇಟಿ ಮಾಡಿ ತಮಗೆ ಸ್ಫರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ರಂಗೇರಿದ ಲೋಕಸಭೆ ಚುನಾವಣೆ : ಹೆಚ್​ಡಿಕೆಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಿಜೆಪಿ ನಾಯಕರು

Last Updated : Mar 27, 2024, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.