ETV Bharat / state

ನಕಲಿ ಕೀ ಬಳಸಿ ವಾಹನ ಕಳ್ಳತನ: ಮೂವರು ಸೆರೆ, ₹10 ಲಕ್ಷದ ಮಾಲು ವಶಕ್ಕೆ

author img

By ETV Bharat Karnataka Team

Published : Feb 6, 2024, 3:24 PM IST

Updated : Feb 6, 2024, 6:05 PM IST

ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

vehicle theft case
vehicle theft case

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದರು.

ಬೆಂಗಳೂರು: ಮನೆ ಎದುರು ಹಾಗೂ ಇತರೆಡೆ ಪಾರ್ಕ್​ ಮಾಡಲಾಗುತ್ತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಮೂವರನ್ನು ಕೋರಮಂಗಲ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ದೀಪಕ್, ತೇಜಸ್ ಹಾಗೂ ಭರತ್ ಬಂಧಿತರು. ಈ ಆರೋಪಿಗಳು ನಕಲಿ ಕೀ ಬಳಸಿ ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದರು. ಆಗ್ನೇಯ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಪ್ರಕರಣಗಳ ತನಿಖೆ ಕೈಗೊಂಡಿದ್ದರು.

ಕೋರಮಂಗಲ ಠಾಣಾ ವ್ಯಾಪ್ತಿಯ ಒಂದು ಕಾರು ಕಳ್ಳತನ ಮತ್ತು ಒಂದು ಕಳವು ಯತ್ನ, ರಾಜರಾಜೇಶ್ವರಿ ನಗರ, ಜಯನಗರ, ಹನುಮಂತನಗರ, ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ತಲಾ ಒಂದೊಂದು ಕಾರು‌ ಕಳ್ಳತನ ಪ್ರಕರಣಗಳು, ಬನಶಂಕರಿ ಹಾಗೂ ಕೆಂಗೇರಿ ಠಾಣೆಯಲ್ಲಿ ದಾಖಲಾದ ತಲಾ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಆರೋಪಿಗಳ ಬಂಧನದಿಂದ ಬೆಳಕಿಗೆ ಬಂದಿವೆ. 10.65 ಲಕ್ಷ ರೂ ಮೌಲ್ಯದ 5 ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಧವಾ ವೇತನ, ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳು ಅಂದರ್

ಮತ್ತೊಂದು ಘಟನೆ: ಕೆಲಸದ ಭರದಲ್ಲಿ ನೀವೇನಾದರೂ ಬೈಕ್​​ನಲ್ಲಿ‌ ಕೀ ಇಟ್ಟರೆ ಎಚ್ಚರ! ಹೀಗೆ ಮಾಡಿದರೆ ನಿಮ್ಮ ವಾಹನ ಖದೀಮರ ಪಾಲಾಗುವುದು ಗ್ಯಾರಂಟಿ. ಇದಕ್ಕೆ‌ ಉದಾಹರಣೆ ಎಂಬಂತೆ ಬೈಕ್​ನಲ್ಲಿ ಕೀ ಬಿಟ್ಟು ಹೋದ ಮಾಲೀಕನನ್ನು ಗಮ‌ನಿಸಿದ ಕಿಲಾಡಿ ಖದೀಮನೋರ್ವ ಕ್ಷಣಾರ್ಧದಲ್ಲಿ ಬೈಕ್​ ಸಹಿತ ಎಸ್ಕೇಪ್ ಆಗಿದ್ದಾನೆ. ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಘಟನೆ ನಡೆದಿದೆ.

ಬೈಕ್ ಮಾಲೀಕ ಪಾರ್ಕ್ ಮಾಡುವ ಭರದಲ್ಲಿ ಬೈಕ್​ನ ಕೀಯನ್ನು ಅದರಲ್ಲೇ ಬಿಟ್ಟು ತೆರಳಿದ್ದ. ಇದನ್ನು ಗಮನಿಸಿದ ಖದೀಮ, ತನ್ನದೇ ಬೈಕ್ ಎಂಬಂತೆ ಬ್ಯಾಗ್ ಹಾಕಿಕೊಂಡು ಬೈಕ್ ಸ್ಟಾರ್ಟ್ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.‌ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ದಾಖಲಾಗಿದೆ‌. ಸದ್ಯ ಬೈಕ್ ಮಾಲೀಕರು ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Last Updated : Feb 6, 2024, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.