ETV Bharat / state

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಮರಳಿಗೂಡಿಗೆ: ಬಂಡಾಯ ಶಮನ

author img

By ETV Bharat Karnataka Team

Published : Mar 15, 2024, 7:27 PM IST

Updated : Mar 15, 2024, 7:43 PM IST

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿಯಾಗಿ ಕ್ಯಾಪ್ಟನ್​ ಬೃಜೇಶ್ ಚೌಟ ಅವರನ್ನು ಘೋಷಿಸಿದ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಅವರ ಬಂಡಾಯ ಶಮನಗೊಂಡಿದೆ.

arun-kumar-puttila-joined-bjp-after-announcing-mp-ticket-to-capt-brijesh-chowta
ದ.ಕ. ಜಿಲ್ಲೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಮರಳಿಗೂಡಿಗೆ: ಬಂಡಾಯ ಶಮನ

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಮರಳಿಗೂಡಿಗೆ: ಬಂಡಾಯ ಶಮನ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ‌ ಬಿಸಿ ತುಪ್ಪವಾಗಬಹುದು ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಬಿಜೆಪಿ‌ ಅಭ್ಯರ್ಥಿಯಾಗಿ ಕ್ಯಾಪ್ಟನ್​ ಬೃಜೇಶ್ ಚೌಟ ಅವರನ್ನು ಘೋಷಿಸಿದ ಬೆನ್ನಲ್ಲೇ ಪುತ್ತಿಲ ಬಂಡಾಯ ಶಮನವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಸ್ಪರ್ಧೆಗೆ ಅಲ್ಲಲ್ಲಿ ವಿರೋಧ ವ್ಯಕ್ತವಾಗಿತ್ತು. ಕಟೀಲ್​ ವಿರುದ್ಧ ಪುತ್ತಿಲ ಪರಿವಾರ ಹೆಚ್ಚು ಅಸಮಾಧಾನ ಹೊಂದಿತ್ತು.

ಬಿಜೆಪಿ ಅಭ್ಯರ್ಥಿಗೆ ಬಂಡಾಯವಾಗಿ ಅರುಣ್ ಕುಮಾರ್ ಪುತ್ತಿಲ ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಇತ್ತೀಚೆಗೆ ಪುತ್ತಿಲ ಪರಿವಾರ ಘೋಷಿಸಿತ್ತು. ಅರುಣ್ ಕುಮಾರ್ ಪುತ್ತಿಲ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿತ್ತು. ಪುತ್ತಿಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪ್ರಭಾವ ತೋರಿಸಿದ್ದರು. ಪುತ್ತೂರು‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಇದರಿಂದ ಬಂಡಾಯ ಎದ್ದಿದ್ದ ಅವರು ಪುತ್ತಿಲ ಪರಿವಾರ ಎಂಬ ಸಂಘಟನೆಯಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಕಡಿಮೆ‌ ಅಂತರದಲ್ಲಿ ಸೋಲನ್ನಪ್ಪಿದ್ದರು. ತನ್ನದೇ ಭದ್ರಕೋಟೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿತ್ತು. ಈ ಮೂಲಕ ತನ್ನ ಶಕ್ತಿಯನ್ನು ಪುತ್ತಿಲ ತೋರಿಸಿದ್ದರು. ಆ ಬಳಿಕ ಪುತ್ತಿಲರನ್ನು ಬಿಜೆಪಿಗೆ ಕರೆ ತರುವ ಹಲವು ಪ್ರಯತ್ನಗಳು ನಡೆದರೂ ಯಶಸ್ವಿಯಾಗಿರಲಿಲ್ಲ. ತನ್ನ ಬೇಡಿಕೆಗೆ ಒಪ್ಪದೇ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ, ಬಿಜೆಪಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಕ್ಯಾ.ಬೃಜೇಶ್ ಚೌಟ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಅರುಣ್ ಕುಮಾರ್ ಪುತ್ತಿಲ ನಿರ್ಧಾರ ಬದಲಾಗಿದೆ. ಪುತ್ತಿಲ ಗುರುವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರಲು‌ ನಿರ್ಧರಿಸಿದ್ದರು. ಈ ಮೂಲಕ ಪಕ್ಷೇತರ ಸ್ಪರ್ಧಿಸುವ ನಿರ್ಧಾರವನ್ನು ಕೈ ಬಿಟ್ಟಿದ್ದರು.

ಈ ಬಗ್ಗೆ ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ‌ ಸತೀಶ್ ಕುಂಪಲ, ಅರುಣ್ ಕುಮಾರ್ ಪುತ್ತಿಲ ಅವರು ಈಗಾಗಲೇ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿದ್ದಾರೆ. ಇಂದು ದಕ್ಷಿಣ ಕನ್ನಡ ಬಿಜೆಪಿ‌ ಕಚೇರಿಗೂ ಭೇಟಿ ನೀಡಲಿದ್ದಾರೆ ಎಂದಿದ್ದರು.

ಮೋದಿ ನೇತೃತ್ವದ ಸದೃಢ ಸರ್ಕಾರ ಆಡಳಿತಕ್ಕೆ ಬರಬೇಕು - ಅರುಣ್ ಕುಮಾ‌ರ್ ಪುತ್ತಿಲ: ಮತ್ತೊಂದೆಡೆ, ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರನ್ನು ನಾಲ್ಕು ಲಕ್ಷ ಅಂತರಗಳಿಂದ ಈ ಬಾರಿ ಗೆಲ್ಲಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸದೃಢ ಸರ್ಕಾರ ಆಡಳಿತಕ್ಕೆ ಬರಬೇಕಾದ ಅವಶ್ಯಕತೆಯಿದೆ ಎಂದು ಅರುಣ್ ಕುಮಾ‌ರ್ ಪುತ್ತಿಲ ತಿಳಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಪುತ್ತೂರಿಗೆ ಆಗಮಿಸಿದ್ದ ಪುತ್ತಿಲ ಇಂದು ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಾವಿದ್ದೇವೆ. ಈ ರಾಷ್ಟ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಸದೃಢ ಸರ್ಕಾರ ಬರಬೇಕು. ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಿ, ಸಾರ್ವಭೌಮತೆಗೆ ಧಕ್ಕೆಯಾಗದ ರೀತಿಯಲ್ಲಿ ದೇಶದ ಎಲ್ಲ ಜನತೆ ಅವರ ಪರವಾಗಿ ನಿಲ್ಲಬೇಕು ಎಂದು ಹೇಳಿದರು.

ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂಬ ಯೋಚನೆಯಡಿ ಹೆಜ್ಜೆಯನ್ನಿಟ್ಟಿದ್ದೇವೆ. ಮೋದಿ ಪರಿವಾರ ಮತ್ತು ಪುತ್ತಿಲ ಪರಿವಾರ ಜಂಟಿಯಾಗಿ ಕೆಲಸ ಮಾಡಲಿದೆ. ಜತೆಯಾಗಿ ಕೆಲಸ ಮಾಡೋಣ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ವ್ಯವಸ್ಥೆಯನ್ನು ಮಾಡೋಣ ಎಂದರು. ಇದಕ್ಕೂ ಮೊದಲು ಅರುಣ್ ಪುತ್ತೂರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ನನ್ನ ಮಗನಿಗೆ ಟಿಕೆಟ್ ತಪ್ಪಲು ಯಡಿಯೂರಪ್ಪ-ವಿಜಯೇಂದ್ರ ಕಾರಣ: ಈಶ್ವರಪ್ಪ ಆರೋಪ

Last Updated : Mar 15, 2024, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.