ETV Bharat / state

ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ?; ಸಿಸಿಬಿಯಿಂದ ಸಬ್ ಇನ್ಸ್‌ಪೆಕ್ಟರ್ ವಿಚಾರಣೆ

author img

By ETV Bharat Karnataka Team

Published : Jan 20, 2024, 11:30 AM IST

Updated : Jan 20, 2024, 1:21 PM IST

ಶುಕ್ರವಾರದಂದು ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಬ್ ಇನ್ಸ್‌ಪೆಕ್ಟರ್ ಅನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಸಿಸಿಬಿ
ಸಿಸಿಬಿ

ಬೆಂಗಳೂರು : ಪಿಎಸ್ಐ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಸಬ್ ಇನ್ಸ್‌ಪೆಕ್ಟರ್ ಅನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಚಂದ್ರಾಲೇಔಟ್ ಪೊಲೀಸರು ಸಬ್ ಇನ್ಸ್‌ಪೆಕ್ಟರ್​ನನ್ನು ವಶಕ್ಕೆ ಪಡೆದಿದ್ದು, ತನಿಖೆ ಭಾಗವಾಗಿ ಸಿಸಿಬಿ ಪೊಲೀಸರ ವಶಕ್ಕೊಪ್ಪಿಸಿದ್ದರು.

ವಿಚಾರಣೆ ನಡೆಸುತ್ತಿರುವ ಪೊಲೀಸರು, ಇಬ್ಬರು ಅಭ್ಯರ್ಥಿಗಳ ಬಳಿ ಅಡ್ವಾನ್ಸ್ ರೂಪದಲ್ಲಿ 10 ಲಕ್ಷ ರೂ. ಪಡೆದಿರುವ ಕುರಿತು ಸಹ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ವೈರಲ್ ಆಗಿರುವ ವಾಟ್ಸ್ಯಾಪ್ ಚಾಟ್ ಹಾಗೂ ಆಡಿಯೋ ಮೆಸೇಜ್ ಪೊಲೀಸ್​ ಅಧಿಕಾರಿಗೆ ಸಂಬಂಧಪಟ್ಟಿದೆಯಾ? ನಿಜವಾಗಿದ್ದರೆ ಯಾರೊಂದಿಗೆ ಚಾಟಿಂಗ್ ಮಾಡಲಾಗಿದೆ? ಹಣದ ಬಗ್ಗೆಯೂ ಚರ್ಚೆ ಮಾಡಲಾಗಿರುವುದರಿಂದ ಯಾರಿಂದಲಾದರೂ ಹಣ ಪಡೆಯಲಾಗಿತ್ತಾ? ಯಾರಿಗೆ ಪ್ರಶ್ನೆ ಪತ್ರಿಕೆ ಕೊಡಲಾಗಿದೆ? ನಿಜವಾಗಿಯೂ ಇದೇ 23 ರಂದು ನಡೆಯಲಿರುವ ಪಿಎಸ್ಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯಾ ಎಂದು ತೀವ್ರ ವಿಚಾರಣೆ ಆರಂಭಿಸಿದ್ದಾರೆ. ಇದರ ಜೊತೆ ಜೊತೆಗೆ ಸಬ್ ಇನ್ಸ್‌ಪೆಕ್ಟರ್ ಜೊತೆ ಚಾಟಿಂಗ್ ಮಾಡಿದವರ ಮಾಹಿತಿಯನ್ನೂ ಸಹ ಕಲೆಹಾಕಲು ಮುಂದಾಗಿರುವ ಸಿಸಿಬಿ ಪೊಲೀಸರು ಅವರಿಗೂ ನೋಟಿಸ್​ ಕೊಟ್ಟಿದ್ದು, ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಪಿಎಸ್ಐ ಮರು ಪರೀಕ್ಷೆಗೆ ಇದೇ ಜನವರಿ 23ರಂದು ಮರು ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಈಗ ಪಿಎಸ್‌ಐ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂಟೆಲಿಜೆನ್ಸ್ ವಿಭಾಗದ ಸಬ್​ ಇನ್ಸ್​ಪೆಕ್ಟರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಬಳಿಕ ಸಿಸಿಬಿ ಪೊಲೀಸರು, ಇನ್ಸ್​ಪೆಕ್ಟರ್ ಅನ್ನು​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮತ್ತೆ ಸೋರಿಕೆ ಆಯ್ತೇ ಪ್ರಶ್ನೆಪತ್ರಿಕೆ?: ಪೊಲೀಸ್ ಠಾಣೆ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ

Last Updated : Jan 20, 2024, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.