ETV Bharat / state

ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಚಿಕ್ಕಮಗಳೂರಿಗೆ ಬಂದ ಅಭಿಮನ್ಯು ತಂಡ

author img

By ETV Bharat Karnataka Team

Published : Jan 30, 2024, 9:17 PM IST

Updated : Jan 30, 2024, 9:48 PM IST

ಕಾಡಾನೆ
ಕಾಡಾನೆ

ಮಲೆನಾಡು ಭಾಗಕ್ಕೆ ಧಾವಿಸಿ ಜನರ ನಿದ್ದೆಗೆಡಿಸಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ.

ಚಿಕ್ಕಮಗಳೂರಿಗೆ ಬಂದ ಅಭಿಮನ್ಯು ತಂಡ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಗರದ ಸಮೀಪವೇ 27ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ಚಿಕ್ಕಮಗಳೂರಿನ ಹಲವು ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಹೆಚ್ಚಳಗೊಂಡಿದೆ.

ಬೆಳೆ ನಾಶ
ಬೆಳೆ ನಾಶ

ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಎಂಟ್ರಿ ಕೊಟ್ಟಿರೋ ಕಾಡಾನೆಗಳನ್ನ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೂ ಚಿಕ್ಕಮಗಳೂರಿನ ವಸತಿ ಶಾಲೆಯ ಬಳಿಯಿದ್ದ ಗ್ಯಾಂಗ್ ಅಲ್ಲೇ ವಾಸ್ತವ್ಯ ಹೂಡಿದೆ. ಕಳೆದ ರಾತ್ರಿ 100ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿದ್ದರೂ ಕೂಡಾ ಆನೆಯನ್ನು ಕಾಡಿಗಟ್ಟುವ ಪ್ರಯತ್ನ ವಿಫಲವಾಗಿತ್ತು.

ಕಾಡಾನೆ ದಾಳಿಯಿಂದ ಬೆಳೆಹಾನಿ
ಕಾಡಾನೆ ದಾಳಿಯಿಂದ ಬೆಳೆಹಾನಿ

ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಒಂಭತ್ತು ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುತ್ತಾಡುತ್ತಿರುವ ಬೀಟಮ್ಮ ಟೀಮ್​ನಿಂದ ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹಲವು ಗ್ರಾಮಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಅಡಿಕೆ ಬೆಳೆ ಹಾನಿಯಾಗಿರುವುದು
ಅಡಿಕೆ ಬೆಳೆ ಹಾನಿಯಾಗಿರುವುದು

ಕಾಡಾನೆಗಳನ್ನ ಹಿಮ್ಮೆಟ್ಟಿಸಲಿದೆ ಅಭಿಮನ್ಯು ತಂಡ: ಕುಮ್ಕಿ ಆನೆಗಳ ಮೂಲಕ ಕಾಡಿಗಟ್ಟುವ ಕಾರ್ಯಾಚರಣೆ ಇಂದಿನಿಂದ ಪ್ರಾರಂಭವಾಗಿದೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ ಆಗಮಿಸಿದ್ದು, ಅಭಿಮನ್ಯು ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ಸಾಕಾನೆಗಳು ಬಂದು ಇಳಿದಿದ್ದು, ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ, ಅಶ್ವತ್ಥಾಮ, ಸುಗ್ರೀವ ಸೇರಿ 8 ಆನೆಗಳು ಬಂದಿವೆ.

ನಿಷೇದಾಜ್ಞೆ ಜಾರಿಗೊಳಿಸಿರುವುದು
ನಿಷೇದಾಜ್ಞೆ ಜಾರಿಗೊಳಿಸಿರುವುದು

ನಾಗರಹೊಳೆ ಹಾಗೂ ದುಬಾರೆಯಿಂದ ಎಂಟು ಆನೆಗಳು ಬಂದಿವೆ. ನಿನ್ನೆ ಇಡೀ ದಿನ ಚಿಕ್ಕಮಗಳೂರು ನಗರದ ವಸತಿ ಶಾಲೆಯ ಬಳಿ ಆನೆಗಳ ಹಿಂಡು ಬೀಡುಬಿಟ್ಟಿದ್ದವು. ಇದೀಗ ಕೆ ಆರ್ ಪೇಟೆ, ನೀಲಗಿರಿ ಪ್ಲಾಂಟೇಶನ್ ಬಳಿ ಬಂದಿರುವ 30 ಕಾಡಾನೆಗಳನ್ನು ಹಿಮ್ಮೆಟ್ಟಿಸಲು ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಿಷೇದಾಜ್ಞೆ ಜಾರಿಗೊಳಿಸಿರುವುದು
ನಿಷೇದಾಜ್ಞೆ ಜಾರಿಗೊಳಿಸಿರುವುದು

ಮಲೆನಾಡು ಭಾಗದ ರೈತರಲ್ಲಿ ಹೆಚ್ಚಿದ ಆತಂಕ : ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಇಲ್ಲದೆ ರೈತರು ಹಾಗೂ ಕಾಫಿ ಬೆಳಗಾರರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಆದರೆ, ಇಂದಿನಿಂದ ಮತ್ತೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಪ್ರಾರಂಭವಾಗಿದೆ. ಇದರಿಂದಾಗಿ ಮತ್ತೆ ಜನರಲ್ಲಿ ಆತಂಕ ಹೆಚ್ಚಿದೆ.

ರಾತ್ರೋರಾತ್ರಿ ಜಮೀನಿಗೆ ಲಗ್ಗೆ ಇಟ್ಟು ಹತ್ತಾರು ಎಕರೆ ಬೆಳೆಹಾನಿ ಮಾಡಿದ್ದು, 40 ಕ್ಕೂ ಹೆಚ್ಚು ಅಡಕೆ ಮರ ಹಾಗೂ ಕಾಫಿ ತೋಟ, ಬೇಲಿಗಳನ್ನು ಹಾನಿ ಮಾಡುವುದರ ಮೂಲಕ ಸಂಪೂರ್ಣ ದಾಂಧಲೆ ನಡೆಸಿವೆ. ಅನಂತ ಭಟ್ಟ ಎಂಬುವವರ ಅಡಕೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಕರಾಗಣೆ, ಹುಯಿಗೆರೆ, ಬಿದರೆ, ಅರಿಗೆಗಳಲ್ಲಿ ಕಾಡಾನೆ ದಾಳಿ ಮುಂದುವರೆದಿದೆ.

ಇದನ್ನೂ ಓದಿ: ರಾಮನಗರದಲ್ಲಿ ಮಹಿಳೆಯರಿಬ್ಬರ ಮೇಲೆ ಕಾಡಾನೆ ದಾಳಿ: ಒಬ್ಬರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Last Updated :Jan 30, 2024, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.