ETV Bharat / state

ಮಗನಿಂದಲೇ ತಂದೆ-ತಾಯಿ ಕೊಲೆಗೆ ಸುಪಾರಿ: ಗದಗಿನ ನಾಲ್ವರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, 8 ಮಂದಿ ಬಂಧನ - Gadag Family Murder

author img

By ETV Bharat Karnataka Team

Published : Apr 22, 2024, 3:39 PM IST

Updated : Apr 23, 2024, 4:17 PM IST

ಗದಗದಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್​ ಬಾಕಳೆ ಹಿರಿಯ ಮಗ ತಂದೆ, ತಾಯಿ ಮತ್ತು ಸಹೋದರನ ಹತ್ಯೆಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

8-accused-arrested-in-gadag-family-murder-case
ಮನೆ ಮಗನಿಂದಲೇ ಕೊಲೆಗೆ ಸುಪಾರಿ: ಗದಗದ ನಾಲ್ವರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು, 8 ಮಂದಿ ಬಂಧನ

ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಮಾಧ್ಯಮಗೋಷ್ಟಿ

ಗದಗ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣ ಸಂಬಂಧ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ಮಾರಾಟ ವಿಚಾರವಾಗಿ ಕಲಹ ಉಂಟಾಗಿ ಮನೆಯ ಮಗನೇ ತನ್ನ ತಂದೆ ಹಾಗೂ ಮಲತಾಯಿ ಕೊಲೆಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕರು ತಪ್ಪಾಗಿ ಭಾವಿಸಿ ಮನೆಗೆ ಬಂದಿದ್ದ ಸಂಬಂಧಿಗಳು ಮತ್ತು ಕಿರಿಯ ಸಹೋದರನನ್ನು ಕೊಲೆ ಮಾಡಿದ್ದರು. ಏಪ್ರಿಲ್​ 19ರಂದು ಬೆಳಗಿನಜಾವ ಗದಗ ನಗರದ ದಾಸರ ಗಲ್ಲಿಯಲ್ಲಿ ನಡೆದಿದ್ದ ಈ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು.

ಪ್ರಕರಣದ ಬಗ್ಗೆ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮೂರು ದಿನಗಳೊಳಗೆ ಗದಗ ಎಸ್​​ಪಿ ‌ಬಿಎಸ್ ನೇಮಗೌಡ ನೇತೃತ್ವದ ತನಿಖಾ ತಂಡವು ಪ್ರಕರಣವನ್ನು ಭೇದಿಸಿದೆ. 8 ಜನರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಪ್ರಕಾಶ್ ಬಾಕಳೆ ಪುತ್ರ ವಿನಾಯಕ್ ಬಾಕಳೆ (31) ಪ್ರಮುಖ ಆರೋಪಿಯಾಗಿದ್ದು, ಈತನೇ ಕೊಲೆಗೆ ಸುಪಾರಿ ನೀಡಿದ್ದ. ಇನ್ನುಳಿದಂತೆ, ಗದಗ ನಗರದ ಫೈರೋಜ್ ಖಾಜಿ (29), ಗದಗನ ಜಿಶಾನ್ ಖಾಜಿ (24), ಮೀರಜ್​ನ ಸಾಹಿಲ್ ಖಾಜಿ (19), ಸೋಹೆಲ್ ಖಾಜಿ (19), ಮೀರಜ್ ಮೂಲದ ಸುಲ್ತಾನ್ ಶೇಖ್ (23), ಮಹೇಶ್ ಸಾಳೊಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬುವರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ತಿಳಿಸಿದ್ದಾರೆ.

ಮಗನಿಂದಲೇ ಸುಪಾರಿ ಡೀಲ್: ತಂದೆ ಪ್ರಕಾಶ್​ ಬಾಕಳೆ, ಮಲತಾಯಿ ಸುನಂದಾ ಅವರನ್ನು ಕೊಲೆ ಮಾಡಲೆಂದು ವಿನಾಯಕ್ ಬಾಕಳೆಯು ಆರೋಪಿ ಫೈರೋಜ್ ಖಾಜಿಗೆ 65 ಲಕ್ಷ ರೂಪಾಯಿಗೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ ಎರಡು ಲಕ್ಷ ರೂಪಾಯಿ ನೀಡಿದ್ದ. ಇತ್ತೀಚೆಗೆ ತಂದೆ ಪ್ರಕಾಶ್ ಬಾಕಳೆ ಹಾಗೂ ಪುತ್ರ ವಿನಾಯಕ್​ ನಡುವೆ ವ್ಯವಹಾರಿಕವಾಗಿ ವೈಮನಸ್ಸು ಉಂಟಾಗಿತ್ತು. ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ತಂದೆ ಪ್ರಕಾಶ್ ಗಮನಕ್ಕೆ ತಾರದೆ ಕೆಲ ಆಸ್ತಿಯನ್ನು ವಿನಾಯಕ್ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ವಿನಾಯಕ್ ವರ್ತನೆಗೆ ಬೇಸತ್ತು ಪ್ರಕಾಶ್ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಂದೆ ಪ್ರಕಾಶ್, ಮಲತಾಯಿ ಸುನಂದಾ, ಸಹೋದರ ಕಾರ್ತಿಕ್​ನನ್ನು ಹತ್ಯೆ ಮಾಡಲು ವಿನಾಯಕ್ ಪ್ಲಾನ್ ಮಾಡಿದ್ದ ಎಂದು ಐಜಿಪಿ ಮಾಹಿತಿ ನೀಡಿದರು.

ಅದರಂತೆ, ಮೀರಜ್ ಮೂಲದ ಸಾಹಿಲ್ ಸೇರಿ ಐವರ ತಂಡಕ್ಕೆ ಕೊಲೆ ಮಾಡಲು ವಿನಾಯಕ್ ಬಾಕಳೆ ಸುಪಾರಿ ನೀಡಿದ್ದ. ಕೃತ್ಯ ನಡೆದು 72 ಗಂಟೆಯಲ್ಲೇ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ್ದಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್​ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಆತನ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಅವರನ್ನು ಏ.19 ರಂದು ಬೆಳಗಿನಜಾವ ಕೊಲೆ ಮಾಡಲಾಗಿತ್ತು. ಮೃತರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು. ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಕ್ಕಳು ಹತ್ಯೆಗೀಡಾಗಿದ್ದರು. ಮೃತರಲ್ಲಿ ಮೂವರು ಕೊಪ್ಪಳ ಮೂಲದವರಾಗಿದ್ದರು. ನಿಶ್ಚಿತಾರ್ಥ ಕಾರ್ಯಕ್ಕೆ ಕೊಪ್ಪಳದಿಂದ ಪರಶುರಾಮ ಕುಟುಂಬದ ಸದಸ್ಯರು ಆಗಮಿಸಿದ್ದರು. ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್​​ ಮದುವೆ ಫಿಕ್ಸ್ ಮಾಡಲು ಏಪ್ರಿಲ್ 17 ರಂದು ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಸಂಬಂಧಿಕರು ಬಂದಿದ್ದರು. ನಾಲ್ವರ ಕೊಲೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದರು.

ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಹಂತಕರು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ - KILLERS WAS CAUGHT ON CCTV

Last Updated :Apr 23, 2024, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.