ETV Bharat / state

ಚಾಮರಾಜನಗರದಲ್ಲಿ ಗಜ ಗಣತಿ: 2ನೇ ದಿನವಾದ ಇಂದು ಲದ್ದಿ ಮೂಲಕ ಆನೆ ಲೆಕ್ಕಾಚಾರ - ELEPHANT CENSUS 2ND DAY

author img

By ETV Bharat Karnataka Team

Published : May 24, 2024, 5:15 PM IST

ಆನೆ ಗಣತಿಯ ಎರಡನೇ ದಿನವಾದ ಇಂದು ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಇತರೆಡೆ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.

ಚಾಮರಾಜನಗರದಲ್ಲಿ ಗಜ ಗಣತಿ
ಚಾಮರಾಜನಗರದಲ್ಲಿ ಗಜ ಗಣತಿ (ETV Bharat)

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಆನೆ ಗಣತಿ ಎರಡನೇ ದಿನವೂ ಮುಂದುವರೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ ಮತ್ತು ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಗಜ ಗಣತಿ ನಡೆದಿದೆ. ಮೊದಲ ದಿನ 15 ಕಿ.ಮೀ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.

ಪ್ರತಿ ಬೀಟ್​ನ ಎರಡು ಕಿ.ಮೀಗಳ ವ್ಯಾಪ್ತಿಯಲ್ಲಿ ಆನೆ ಹಾಕಿರುವ ಲದ್ದಿ ಪರಿಶೀಲಿಸಿ ಆನೆಯ ಗಾತ್ರ, ಮರಿಯಾನೆಯಾ, ಗುಂಪಿನಲ್ಲಿರುವ ಆನೆಗಳಾ ಎಂಬುದರ ಅಂದಾಜು ಮಾಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್​ಗಳು, ಕಾವೇರಿ ವನ್ಯಜೀವಿಧಾಮದ 43 ಬೀಟ್​ಗಳು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಶನಿವಾರದಂದು ಅಂತ್ಯವಾಗಲಿದೆ.

ಜಿಲ್ಲೆಯಲ್ಲಿ ನಿನ್ನೆಯಿಂದ ಗಜ ಗಣತಿ ಆರಂಭ: ಇನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ನಿನ್ನೆಯಿಂದ(ಗುರುವಾರ) ಮೂರು ದಿನಗಳ ಗಜ ಗಣತಿ ಆರಂಭಿಸಿತ್ತು. ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದರು.

ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್​ಗಳು, ಕಾವೇರಿ ವನ್ಯಜೀವಿಧಾಮದ 43 ಗಸ್ತುಗಳ‌ 72 ಬ್ಲಾಕ್​ಗಳಲ್ಲಿ 162 ಸಿಬ್ಬಂದಿ ಮತ್ತು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಸಿಬ್ಬಂದಿ ಆನೆ ಗಣತಿ ಕೈಗೊಂಡಿದ್ದರು. ಗಜ ಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

4 ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ: ಇದು ಎರಡನೇ ಆನೆ ಗಣತಿಯಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ ನಡೆಯುತ್ತಿದೆ. ಆನೆಗಳ ಬಾಹ್ಯ ಗಾಯಗಳು, ದಂತದ ಗಾತ್ರ ಮತ್ತು ಅದರ ದಂತವಿಲ್ಲದ ಗಂಡು ಆನೆ ಸಂಖ್ಯೆಯನ್ನೂ ಪತ್ತೆ ಮಾಡಲಾಗುತ್ತದೆ. ಆನೆಗಳ ನಡವಳಿಕೆ ಮತ್ತು ಚಲನವಲನಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.

ಇದನ್ನೂ ಓದಿ: ಕೊಕ್ಕರೆ ಬೆಳ್ಳೂರು ಪಕ್ಷಿಗಳಿಗೆ ತಟ್ಟಿದ ಬಿಸಿಲ ತಾಪ.. ರಾಜ್ಯದೆಲ್ಲೆಡೆ ಮಳೆಯಾಗ್ತಿದ್ರೂ ಬತ್ತಿದ ಶಿಂಷಾ ನದಿ - Birds suffered by heat wave

ETV Bharat Logo

Copyright © 2024 Ushodaya Enterprises Pvt. Ltd., All Rights Reserved.