ETV Bharat / state

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 1069.34 ಕೋಟಿ ಆದಾಯ ಗಳಿಕೆ: ಶಿಲ್ಪಿ ಅಗರ್ವಾಲ್

author img

By ETV Bharat Karnataka Team

Published : Jan 26, 2024, 8:37 PM IST

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

75th Republic Day Celebration
ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಗೌರವ ವಂದನೆ ಸ್ವೀಕರಿಸಿದರು.

ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 75ನೇ ಗಣರಾಜ್ಯೋತ್ಸವವನ್ನು ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮೈಸೂರು ರೈಲ್ವೆ ವಿಭಾಗವು ವರ್ಷದಿಂದ ವರ್ಷಕ್ಕೆ ಒಟ್ಟು ಆದಾಯದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. 2023ರ ವರ್ಷದಲ್ಲಿ 1069.34 ಕೋಟಿ ಒಟ್ಟು ಆದಾಯ ಗಳಿಸಿದೆ. ಕಳೆದ ವರ್ಷ ಡಿಸೆಂಬರ ವರೆಗಿನ ಆದಾಯ 886.24 ಕೋಟಿ ಇದ್ದು 2023ಕ್ಕೆ ಹೋಲಿಸಿದರೆ, ಶೇ.20.66 ಹೆಚ್ಚಳ ಆಗಿದೆ ಎಂದು ತಿಳಿಸಿದರು.

ಸರಕು ಸಾಗಣೆ ಆದಾಯವು 711.15 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.27.60 ರಷ್ಟು ಆರೋಗ್ಯಕರ ಬೆಳವಣಿಗೆ ಸಾಧಿಸಿದೆ ಎಂದು ಮಾಹಿತಿ ನೀಡಿದರು. ಮೈಸೂರು ವಿಭಾಗವು 2023 ವರ್ಷದ ಡಿಸೆಂಬರ್‌ ವರೆಗೆ 2405 ರೇಕ್‌ಗಳೊಂದಿಗೆ 8.367 ಎಂಟಿ (ದಶಲಕ್ಷ ಟನ್) ಲೋಡ್ ಮಾಡಿದೆ. ಇದು ಹಿಂದಿನ ವರ್ಷ 2022 ರಲ್ಲಿನ 1996 ರೇಕ್‌ಗಳೊಂದಿಗೆ 6.525 ಎಂಟಿ ಲೋಡಿಂಗ್ ಮಾಡಿತು. ಇದಕ್ಕೆ ಹೋಲಿಸಿದರೆ ಶೇ.28.2 ಹೆಚ್ಚಳವನ್ನು ಸೂಚಿಸುತ್ತದೆ. 2023 ಡಿಸೆಂಬರ್ ಮಾಸಿಕದಲ್ಲಿ ಮೈಸೂರು ವಿಭಾಗವು 319 ರೇಕ್‌ಗಳೊಂದಿಗೆ 1.125 ಮಿಲಿಯನ್ ಟನ್‌ಗಳಷ್ಟು (ಎಂಟಿ) ಅತ್ಯಧಿಕ ಲೋಡ್​ಗಳನ್ನು ಸಾಗಿಸಿ ಹೊಸ ದಾಖಲೆ ನಿರ್ಮಿಸಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಈ ವಿತ್ತೀಯ ವರ್ಷದಲ್ಲಿ ಸುಮಾರು 111 ಟ್ರ್ಯಾಕ್ ಕಿಮೀ ಗಳಿಗೆ ವಿಭಾಗದ ವೇಗವನ್ನು 100 ಕಿ.ಮೀ. ನಿಂದ 110 ಕಿ.ಮೀ. ಗೆ ಹೆಚ್ಚಿಸಲಾಗುವುದು. ಬಿಸಿನೆಸ್ ಡೆವಲಪ್ಮೆಂಟ್ ಯುನಿಟ್ (ವ್ಯಾಪಾರ ಅಭಿವೃಧಿ ಘಟಕ)ದ ಪ್ರಯತ್ನದಿಂದ ವಿಭಾಗವು ಹಾವೇರಿಯಿಂದ ಮೇವನ್ನು ಲೋಡ್ ಮಾಡಿದೆ. ಈಶಾನ್ಯ ಗಡಿ ರೈಲ್ವೆಯ ಲುಮ್ಡಿಂಗ್ ವಿಭಾಗದ ಭಂಗಾಗೆ ಹಾವೇರಿಯಿಂದ ಸಕ್ಕರೆಯನ್ನು ಲೋಡ್ ಮಾಡಿದೆ ಎಂದು ತಿಳಿಸಿದರು.

ಪ್ರಯಾಣಿಕರ ವಿಭಾಗ: ಮೈಸೂರ ವಿಭಾಗದ ವ್ಯಾಪ್ತಿಯಲ್ಲಿ ಡಿಸೆಂಬರ್ 2023 ರ ವರೆಗೆ 25.28 ದಶಲಕ್ಷ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸಿದ್ದಾರೆ. ವಿಭಾಗದ ಮೇಲ್/ಎಕ್ಸ್ಪ್ರೆಸ್ ರೈಲುಗಳು ಸುಮಾರು ಶೇ.98 ರಷ್ಟು ಸಮಯ ಪಾಲನೆಯಲ್ಲಿ ಚಲಿಸುತ್ತಿವೆ. ಸಮಯಪಾಲನೆ ವಿಷಯದಲ್ಲಿ ನೈಋತ್ಯ ರೈಲ್ವೆಯಲ್ಲಿ ಅತ್ಯಂತ ಹೆಚ್ಚು ಕಾರ್ಯಶೀಲತೆ ರೂಢಿಸಿಕೊಂಡಿದೆ ಎಂದರು. ಹೆಚ್ಚುವರಿ ಪ್ಲಾಟ್​ಪಾರ್ಮ್​ಗಳು ಮತ್ತು ಇತರ ಕಾರ್ಯಾಚರಣೆ ಸೌಲಭ್ಯಗಳೊಂದಿಗೆ ಮೈಸೂರು ನಿಲ್ದಾಣಕ್ಕೆ ಪರ್ಯಾಯ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುವ ಅಶೋಕಪುರಂ ಯಾರ್ಡ್​ ಮರು ರೂಪಿಸಲಾಗುತ್ತಿದೆ. ಕಡಕೊಳದಲ್ಲಿ ಎಂ.ಎಸ್ ಕಂಟೈನರ್ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್, ಎಂಎಂಪಿಎಲ್ (ಜಿಸಿಸಿಕೆ) ರವರ ಒಂದು ಗತಿ ಶಕ್ತಿ-ಮಲ್ಟಿ-ಮಾಡೆಲ್ ಕಾರ್ಗೋ ಟರ್ಮಿನಲ್’ ಹೊಸದಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

27.09 ಲಕ್ಷ ರೂ.ದಂಡವನ್ನು ಅನಧಿಕೃತ ಟಿಕೆಟ್ ಹಸ್ತಾಂತರ ಮತ್ತು ಇತರ ಪ್ರಕರಣಗಳಿಂದ ವಸೂಲಿ ಮಾಡಲಾಗಿದೆ. 45 ಹುಡುಗರು ಮತ್ತು 6 ಹುಡುಗಿಯರನ್ನು ರೈಲ್ವೆ ಸುರಕ್ಷತಾ ಸಿಬ್ಬಂದಿ ರಕ್ಷಿಸಿದ್ದಾರೆ. ಅವರನ್ನು ಸಂಬಂಧಪಟ್ಟ ಸಂಸ್ಥೆ,ಎನ್‌ಜಿಒ, ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಗಣರಾಜ್ಯೋತ್ಸವ ಕಾಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂಓದಿ:ಸುತ್ತೂರು ಶ್ರೀಗಳಿಗೆ ಬಾಲಕರಾಮನ ಮೂರ್ತಿ ತೋರಿಸಿದ ಶಿಲ್ಪಿ ಅರುಣ್ ಯೋಗಿರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.