ETV Bharat / sports

ಕ್ರೀಡಾಂಗಣಕ್ಕೆ ಪವರ್​ ಕಟ್​: ಐಪಿಎಲ್​ ಪಂದ್ಯಕ್ಕೂ ಮುನ್ನ ಹೈದರಾಬಾದ್​ ಕ್ರಿಕೆಟ್​ ಸಂಸ್ಥೆಗೆ ಶಾಕ್​! - Power Cut

author img

By ETV Bharat Karnataka Team

Published : Apr 5, 2024, 12:13 PM IST

ಬಿಲ್​ ಪಾವತಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್​ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗಿತ್ತು.

tsspdcl-disconnected-power-supply
ಕ್ರೀಡಾಂಗಣಕ್ಕೆ ಪವರ್​ ಕಟ್

ಹೈದರಾಬಾದ್: ಇಲ್ಲಿನ ಉಪ್ಪಲ್​ನಲ್ಲಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಿಯ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಸನ್​ರೈಸರ್ಸ್ ಹೈದರಾಬಾದ್​​ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಪಂದ್ಯದ ಆರಂಭಕ್ಕೂ ಮುನ್ನವೇ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (TSSPDCL) ಶಾಕ್​ ನೀಡಿದೆ. ಬಿಲ್​ ಪಾವತಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಕ್ರೀಡಾಂಗಣದ ವಿದ್ಯುತ್​ ಸಂಪರ್ಕ್​ ಕಡಿತಗೊಳಿಸಲಾಗಿದೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು (HCA) 1.63 ಕೋಟಿ ವಿದ್ಯುತ್ ಬಿಲ್​​ ಪಾವತಿಸದೇ ಬಾಕಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಟಿಎಸ್‌ಎಸ್‌ಪಿಡಿಸಿಎಲ್ ಫೆಬ್ರವರಿ 20 ರಂದು ನೋಟಿಸ್​ ಜಾರಿ ಮಾಡಿತ್ತು. ಆದರೆ, ನೋಟಿಸ್‌ಗೆ ಕ್ರಿಕೆಟ್​ ಸಂಸ್ಥೆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಕ್ರಮಕ್ಕೆ ಮುಂದಾದ ಅಧಿಕಾರಿಗಳು, ಮೈದಾನದ ವಿದ್ಯುತ್​ ಸಂಪರ್ಕ ಕಟ್​​ ಮಾಡಿದ್ದಾರೆ.

ಐಪಿಎಲ್​ ಕ್ರಿಕೆಟ್​ ಪಂದ್ಯಕ್ಕೂ ಮುನ್ನಾ ದಿನವೇ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್‌ಸಿಎ ಆಸ್ತಿ ತೆರಿಗೆಯನ್ನೂ ಪಾವತಿಸುತ್ತಿಲ್ಲ. ಕ್ರೀಡಾಂಗಣವು ಉಪ್ಪಲ್ ಐಡಿಎ ಅಡಿಯಲ್ಲಿದ್ದು, ಹೆಚ್‌ಸಿಎಯು ಐಎಲ್​ಎಗೆ ಸುಮಾರು 33 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಅದರಲ್ಲಿ ಐಎಲ್​ಎ ಕಡೆಯಿಂದ ಹೈದರಾಬಾದ್ ಮಹಾನಗರ ಪಾಲಿಕೆಗೆ (ಜಿಹೆಚ್​ಎಂಸಿ) 11 ಕೋಟಿ ರೂ.ವರೆಗೆ ಬರಬೇಕು ಎಂದು ಉಪ್ಪಲ್​ ಡಿಸಿ ಆಂಜನೇಯು ತಿಳಿಸಿದ್ದಾರೆ.

ಪವರ್​ ಕಟ್​ ಆಗಿದ್ದರಿಂದ ಎರಡು ತಂಡಗಳ ಅಭ್ಯಾಸವು ಕೆಲಕಾಲ ಜನರೇಟರ್‌ಗಳಿಂದ ಚಾಲಿತ ದೀಪಗಳ ಅಡಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪಾವಧಿಗೆ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಹೆಚ್‌ಸಿಎ ಮೂಲಗಳು ತಿಳಿಸಿವೆ. ಬಳಿಕ ಗುರುವಾರ ರಾತ್ರಿ ವೇಳೆಗೆ ವಿದ್ಯುತ್​ ಸಂಪರ್ಕವನ್ನು ಮರಳಿ ನೀಡಲಾಗಿದೆ. ಹೀಗಾಗಿ, ಇಂದು ನಡೆಯುವ ಪಂದ್ಯಕ್ಕೆ ಯಾವುದೇ ಅಡ್ಡಿ ಇಲ್ಲ.

ಪಂದ್ಯಕ್ಕೆ ವಿಶೇಷ ಬಸ್ ವ್ಯವಸ್ಥೆ​: ಉಪ್ಪಲ್​​ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಹೆಚ್ಚುವರಿ ಬಸ್ ಸಂಚಾರ​ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ರಿಂದ ರಾತ್ರಿ 11.30 ರವರೆಗೆ ವಿವಿಧ ಕಡೆಗಳಿಂದ ಸುಮಾರು 60 ಬಸ್​​ಗಳು ಸಂಚರಿಸಲಿವೆ ಎಂದು ಟಿಎಸ್​​ಆರ್​ಟಿಸಿ ಪ್ರಕಟಿಸಿದೆ.

ಪಂದ್ಯವು ಎಂದಿನಂತೆ ಸಾಯಂಕಾಲ 7.30ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು, ಚೆನ್ನೈ ಸೂಪರ್​ ಕಿಂಗ್ಸ್ 2ರಲ್ಲಿ ಗೆದ್ದು ಒಂದು ಹಣಾಹಣಿ ಸೋತರೆ, ಸನ್​ರೈಸರ್ಸ್ ಹೈದರಾಬಾದ್ ಕೇವಲ 1ರಲ್ಲಿ ಜಯ ಸಾಧಿಸಿ, 2ರಲ್ಲಿ ಸೋಲು ಕಂಡಿದೆ.

ಇದನ್ನೂ ಓದಿ: ಶಶಾಂಕ್, ಅಶುತೋಷ್ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದು ಬೀಗಿದ ಪಂಜಾಬ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.