ETV Bharat / sports

ನ್ಯೂಜಿಲ್ಯಾಂಡ್​ ವಿರುದ್ಧ ನಾಲ್ಕನೇ ಪಂದ್ಯವನ್ನೂ ಸೋತ ಪಾಕಿಸ್ತಾನ

author img

By ETV Bharat Karnataka Team

Published : Jan 20, 2024, 8:03 AM IST

PAK vs NZ: ನ್ಯೂಜಿಲ್ಯಾಂಡ್​ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ 3-0 ಅಂತರದಲ್ಲಿ ಕಳೆದುಕೊಂಡಿದ್ದ ಪಾಕ್​ ಕ್ರೈಸ್ಟ್‌ಚರ್ಚ್ ನಡೆದ 4ನೇ ಪಂದ್ಯದಲ್ಲೂ 7 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ.

New Zealand beat Pakistan by 7 wickets in 4th t20i
New Zealand beat Pakistan by 7 wickets in 4th t20i

ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್​ ): ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್​ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್​ ಎರಡರಲ್ಲೂ ಮೊನಚು ಕಳೆದುಕೊಂಡ ಪಾಕ್,​ ಕಳಪೆ ಪ್ರದರ್ಶನದ ಆಟದಿಂದ ದಂಡ ತೆತ್ತಿದೆ. ನ್ಯೂಜಿಲ್ಯಾಂಡ್​ ಇದುವರೆಗೆ ಆಡಿದ ನಾಲ್ಕೂ ಟಿ20 ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 158ರನ್​ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್​ ತಂಡ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಆರಂಭಿಕ ಆಘಾತ ಎದುರಿಸಿದ ಕಿವೀಸ್​, 2.4 ಓವರ್​​ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆದರೆ, ಇದರ ನಂತರ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅಜೇಯ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 44 ಎಸೆತಗಳನ್ನು ಎದುರಿಸಿದ ಡೇರಿಲ್ ಮಿಚೆಲ್ 7 ಬೌಂಡರಿ ಮತ್ತು 2 ಸಿಕ್ಸ್​ ಸಹಿತ 72 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ 52 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸ್​ ನೆರವಿನಿಂದ 70 ರನ್ ಗಳಿಸಿದರು. ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿಯು 4ನೇ ವಿಕೆಟ್​ಗೆ ಅಜೇಯ 139 ರನ್‌ಗಳ ಜೊತೆಯಾಟ ತಂಡಕ್ಕೆ ಗೆಲುವು ನೀಡಿತು. ಗೆಲುವಿನ ದಡ ಸೇರಿಸಿದ ಮಿಚೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಾಕ್ ಪರ ವೇಗಿ ಶಾಹೀನ್ ಅಫ್ರಿದಿ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಗರಿಷ್ಠ 90 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಆದರೆ, ಅವರನ್ನು ಹೊರತುಪಡಿಸಿ ತಂಡದ ಉಳಿದ ಯಾವುದೇ ಬ್ಯಾಟರ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಹೋರಾಡಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಬಾಬರ್ ಅಜಂ, ಈ ಪಂದ್ಯದಲ್ಲಿ 19 ರನ್ ಗಳಿಸಿ ಔಟಾದರೆ, ಮೊಹಮ್ಮದ್ ನವಾಜ್ ಕೂಡ 9 ಎಸೆತಗಳಲ್ಲಿ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲ ಒಬ್ಬರ ನಂತರ ಮತ್ತೊಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು. ಕಿವೀಸ್‌ ಪರ ಸೀಮರ್‌ಗಳಾದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್‌ ಪಡೆದರು.

ಉಭಯ ತಂಡಗಳು ಮುಂದೆ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆದ್ದರೆ ನ್ಯೂಜಿಲ್ಯಾಂಡ್ ಸರಣಿಯಲ್ಲಿ 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸಲಿದೆ. ಅದಕ್ಕೆ ಪಾಕ್​ ಅವಕಾಶ ಮಾಡಿಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಗಬ್ಬಾ ಕೋಟೆ ಭೇದಿಸಿ ಆಸೀಸ್‌ ಬಗ್ಗುಬಡಿದ ಭಾರತ: ಐತಿಹಾಸಿಕ ಗೆಲುವಿಗೆ 3 ವರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.