ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ಗೆ ರಾಹುಲ್ ಅಲಭ್ಯ; ದೇವದತ್ ಪಡಿಕ್ಕಲ್‌ಗೆ ಅವಕಾಶ

author img

By PTI

Published : Feb 12, 2024, 10:30 PM IST

kl-rahul

ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಭಾರತದ ಮತ್ತೊಬ್ಬ ಸ್ಟಾರ್​ ಬ್ಯಾಟರ್ ಹೊರಬಿದ್ದಿದ್ದಾರೆ.​

ರಾಜ್​ಕೋಟ್​: ಫೆಬ್ರವರಿ 15ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ಗೂ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊದಲ ಟೆಸ್ಟ್​ನಲ್ಲಿ ಬಲ ತೊಡೆಯ ನೋವಿಗೆ ತುತ್ತಾಗಿದ್ದ ಕೆ.ಎಲ್.ರಾಹುಲ್​ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮೂರನೇ ಟೆಸ್ಟ್‌ನಿಂದಲೂ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್,​ ನಾಲ್ಕನೇ ದಿನದಾಟದಂದು ಬಲ ತೊಡೆಯ ನೋವಿಗೊಳಗಾಗಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್‌ನಿಂದಲೂ ಹೊರಗುಳಿದಿದ್ದರು. ಇತ್ತೀಚೆಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ವಿರುದ್ಧದ ಉಳಿದ 3 ಟೆಸ್ಟ್ ಪಂದ್ಯಗಳಿಗೆ 17 ಸದಸ್ಯರ ತಂಡ ಪ್ರಕಟಿಸಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮೊದಲೆರಡು ಟೆಸ್ಟ್​ನಿಂದ ಹೊರಗಿದ್ದ ವಿರಾಟ್​ ಕೊಹ್ಲಿ, ಉಳಿದ ಮೂರು ಪಂದ್ಯಗಳಲ್ಲೂ ಕಣಕ್ಕಿಳಿಯುತ್ತಿಲ್ಲ ಎಂದು ತಿಳಿಸಿರುವ ಬಿಸಿಸಿಐ ತಂಡದಿಂದ ಅವರ ಹೆಸರು ಕೈಬಿಟ್ಟಿತ್ತು.

ದೇವದತ್ ಪಡಿಕ್ಕಲ್‌ಗೆ ಅವಕಾಶ: ಅಲ್ಲದೇ ರಾಹುಲ್ ಮತ್ತು ರವೀಂದ್ರ ಜಡೇಜಾ 3ನೇ ಪಂದ್ಯಕ್ಕೆ ಮರಳುವರು ಎಂದೂ ತಿಳಿಸಿತ್ತು. ಇದೀಗ ರಾಹುಲ್​ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಪಂದ್ಯದಿಂದ ಹೊರಗುಳಿಯಲಿದ್ದು ತಂಡಕ್ಕೆ ಮತ್ತೊಂದು ಆಘಾತವಾಗಿದೆ. ರಾಹುಲ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 193 ರನ್ ಗಳಿಸಿದ ಅವರು ಗೋವಾ ವಿರುದ್ಧ 103 ರನ್ ಗಳಿಸಿದ್ದರು. ರಣಜಿ ಹೊರತುಪಡಿಸಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ಭಾರತ ಎ ಪರ ತನ್ನ ಮೂರು ಇನ್ನಿಂಗ್ಸ್‌ಗಳಲ್ಲಿ ಪಡಿಕ್ಕಲ್ 105, 65 ಮತ್ತು 21 ರನ್ ಗಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ.

ಮೂರನೇ ಟೆಸ್ಟ್​- ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್​ ಪಡಿಕ್ಕಲ್​, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್.

ಇದನ್ನೂ ಓದಿ: ಇಂಗ್ಲೆಂಡ್​ ಸರಣಿ: ಉಳಿದ ಪಂದ್ಯಗಳಿಗೂ ಕೊಹ್ಲಿ ಅಲಭ್ಯ, ಅಯ್ಯರ್​ ಔಟ್​, ಆಕಾಶ್​ ದೀಪ್​, ಸಿರಾಜ್​ ಇನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.