ETV Bharat / sports

'ನನ್ನ ತಪ್ಪು ನಿರ್ಧಾರದಿಂದ ಸರ್ಫರಾಜ್​ ರನೌಟ್​': ಯುವ ಬ್ಯಾಟರ್​ ಕ್ಷಮೆ ಕೋರಿದ ರವೀಂದ್ರ ಜಡೇಜಾ

author img

By ETV Bharat Karnataka Team

Published : Feb 16, 2024, 9:11 AM IST

ಭರ್ಜರಿಯಾಗಿ ಬ್ಯಾಟ್​ ಮಾಡುತ್ತಿದ್ದ ಸರ್ಫರಾಜ್​ ಖಾನ್​​ ರನೌಟ್​ ಆಗಲು ಕಾರಣವಾದ ರವೀಂದ್ರ ಜಡೇಜಾ ಮೊದಲ ದಿನದಾಟ ಮುಗಿದ ಬಳಿಕ ಯುವ ಆಟಗಾರನ ಕ್ಷಮೆ ಕೋರಿದ್ದಾರೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ರಾಜ್​ಕೋಟ್​​(ಗುಜರಾತ್​) : ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಒಂದೇ ದಿನ ಭಾವುಕ ಮತ್ತು ನಿರಾಸೆ ಘಟನೆಗಳು ಕಂಡುಬಂದವು. ಯುವ ಕ್ರಿಕೆಟರ್​ ಸರ್ಫರಾಜ್​ ಖಾನ್​ ಹಲವು ವರ್ಷಗಳ ಕಾಯುವಿಕೆಯ ನಂತರ ಟೀಂ ಇಂಡಿಯಾದ ಕ್ಯಾಪ್​ ಧರಿಸಿದರು. ಪುತ್ರನ ಸಾಧನೆಗೆ ತಂದೆ ಮತ್ತು ಪತ್ನಿ ಭಾವುಕರಾಗಿ ಕಣ್ಣೀರು ಹಾಕಿದರು.

ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಸರ್ಫರಾಜ್​ ಖಾನ್​ ಇಂಗ್ಲೆಂಡ್​ ಬೌಲರ್​ಗಳನ್ನು ಬೆಂಡೆತ್ತಿ ಕೇವಲ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮ ತಾಕತ್ತು ಪ್ರದರ್ಶಿಸಿದರು. ಆದರೆ, ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದಾಗಿ ಯುವ ಬ್ಯಾಟರ್​ ರನೌಟ್​ ಆಗಬೇಕಾಯಿತು. ಇದು ನಾಯಕ ರೋಹಿತ್​ ಶರ್ಮಾ ಸೇರಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆ ತಂದಿತು. ದಿನದಾಟ ಮುಗಿದ ನಂತರ ಈ ಬಗ್ಗೆ ಸ್ವತಃ ಜಡೇಜಾ ಬೇಸರ ವ್ಯಕ್ತಪಡಿಸಿ, ತನ್ನ ತಪ್ಪಿಗೆ ಸರ್ಫರಾಜ್​ ಬಳಿ ಕ್ಷಮೆ ಕೋರಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಶತಕವೀರ ಜಡೇಜಾ, "ಸರ್ಫರಾಜ್​ ಖಾನ್​ ರನೌಟ್​ ಆಗಿದ್ದು ಬೇಸರ ತಂದಿದೆ. ಅದು ನನ್ನದೇ ತಪ್ಪು. ಉತ್ತಮವಾಗಿ ಆಡಿದಿರಿ" ಎಂದು ಬರೆದುಕೊಂಡಿದ್ದಾರೆ. ಶತಕ ಬಾರಿಸಿದಾಗಲೂ ಸ್ಪಿನ್​ ಮಾಂತ್ರಿಕ ದೊಡ್ಡದಾಗಿ ಸಂಭ್ರಮಾಚರಣೆ ಮಾಡದೆ, ತಮ್ಮ ವಿಶೇಷ ಶೈಲಿಯಾದ 'ಕತ್ತಿವರಸೆ'ಯನ್ನು ಪ್ರದರ್ಶಿಸಿದರು. ಆದರೆ, ಅವರ ಮುಖದಲ್ಲಿ ಬೇಸರದ ಭಾವ ಇರುವುದು ಕಂಡುಬಂದಿತ್ತು.

ಚೊಚ್ಚಲ ಪಂದ್ಯದಲ್ಲೇ ಗುಡುಗಿದ ಸರ್ಫರಾಜ್​: ಯುವ ಬ್ಯಾಟರ್ ಸರ್ಫರಾಜ್​ ದೇಶಿ ಕ್ರಿಕೆಟ್​ನಲ್ಲಿ ರಾಶಿ ರಾಶಿ ರನ್​ ಕಲೆ ಹಾಕಿ ಕೊನೆಗೂ ಭಾರತ ತಂಡದ ಕದ ತಟ್ಟಿದರು. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯಕ್ಕೆ ಆಯ್ಕೆಯಾಗಿದ್ದರೂ, ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿರಲಿಲ್ಲ. 3ನೇ ಟೆಸ್ಟ್​ನಲ್ಲಿ ಕೆ.ಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಖಾನ್​, ರಾಜ್​​ಕೋಟ್​​ ಮೈದಾನದಲ್ಲಿ ಮೆರೆದಾಡಿದರು. ಪ್ರಮುಖ ನಾಲ್ಕು ವಿಕೆಟ್​ ಬಿದ್ದಿದ್ದರೂ ಲೆಕ್ಕಿಸದೇ, ಜಡೇಜಾ ಜೊತೆಗೂಡಿ ಭರ್ಜರಿ ಇನಿಂಗ್ಸ್​ ಕಟ್ಟಿದರು.

ಕೇವಲ 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಜಡೇಜಾ 99 ರನ್​ ಗಳಿಸಿದ್ದ ವೇಳೆ ಒಂಟಿ ರನ್​ ಕದಿಯುವಾಗ ಸಮನ್ವಯದ ಕೊರತೆಯಿಂದ ಸರ್ಫರಾಜ್​ ರನೌಟ್​ ಆದರು. ಇಂಗ್ಲೆಂಡ್​ ಬೌಲರ್​ಗಳನ್ನು ಲೀಲಾಜಾಲವಾಗಿ ಬೆಂಡೆತ್ತುತ್ತಿದ್ದ ಖಾನ್​ (66 ರನ್​) ಔಟಾಗಿದ್ದು, ನಾಯಕ ರೋಹಿತ್​ ಸೇರಿ ತಂಡದ ಆಟಗಾರರಲ್ಲಿ ಬೇಸರ ತರಿಸಿತು. ದಿನದಾಟ ಮುಗಿದ ಬಳಿಕ ಮಾತನಾಡಿದ ಸರ್ಫರಾಜ್​ ಖಾನ್​, ಜಡೇಜಾ ಅವರು ನನ್ನ ಬಳಿ ಬೇಸರ ವ್ಯಕ್ತಪಡಿಸಿದರು. ಆಟದಲ್ಲಿ ಇದೆಲ್ಲಾ ಸಹಜ. ಸಂವಹನ ತಪ್ಪಿನಿಂದ ಔಟಾದೆ, ಪರವಾಗಿಲ್ಲ ಎಂದರು.

ಇದನ್ನೂ ಓದಿ: ಬೆಳಗ್ಗೆ ಭಾರತ ತಂಡಕ್ಕೆ ಪಾದಾರ್ಪಣೆಯ ಆನಂದ ಭಾಷ್ಪ; ಸಂಜೆ ದಾಖಲೆಯ ಅರ್ಧಶತಕ ಸಿಡಿಸಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.