ETV Bharat / sports

ಅಂಡರ್​-19 ವಿಶ್ವಕಪ್​: ದಕ್ಷಿಣ ಆಫ್ರಿಕಾ ಮಣಿಸಿ 9ನೇ ಸಲ ಫೈನಲ್​ಗೇರಿದ ಭಾರತ

author img

By ETV Bharat Karnataka Team

Published : Feb 6, 2024, 10:15 PM IST

Updated : Feb 6, 2024, 10:59 PM IST

19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನಲ್ಲಿ ಭಾರತ ದಿಗ್ವಿಜಯ ಸಾಧಿಸಿ ಪ್ರಶಸ್ತಿ ಹಂತಕ್ಕೇರಿದೆ. ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ 244 ರನ್​ ಗಳಿಸಿತು. ಗುರಿ ಬೆನ್ನತ್ತಿದ್ದ ಭಾರತ 48.5 ಓವರ್​ಗಳಲ್ಲಿ 248 ರನ್​ ಗಳಿಸಿ ವಿಜಯದ ನಗೆ ಬೀರಿತು.

ಅಂಡರ್​-19 ವಿಶ್ವಕಪ್​
ಅಂಡರ್​-19 ವಿಶ್ವಕಪ್​

ಬೆನೋನಿ(ದಕ್ಷಿಣ ಆಫ್ರಿಕಾ): ಅಂಡರ್​-19 ಏಕದಿನ ವಿಶ್ವಕಪ್​ ಕ್ರಿಕೆಟ್‌ನಲ್ಲಿ ಭಾರತ ಯುವ ಕ್ರಿಕೆಟ್​ ತಂಡ ಮತ್ತೊಮ್ಮೆ ಪ್ರಾಬಲ್ಯ ಮೆರೆಯಿತು. ಮಂಗಳವಾರ ನಡೆದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ತವರಿನ ತಂಡ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್​ಗಳಿಂದ ಬಗ್ಗುಬಡಿದು 9ನೇ ಬಾರಿಗೆ ಫೈನಲ್​ ತಲುಪಿತು.

ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್​ ನೀಡಿದ 244 ರನ್​ಗಳ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್​ ಭಾರತ ಆರಂಭಿಕ ಆಘಾತ ಅನುಭವಿಸಿತು. 32 ರನ್​ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ, ನಾಯಕ ಉದಯ್​ ಸಹರನ್​ ಮತ್ತು ಸಚಿನ್​ ದಾಸ್​ ಗಟ್ಟಿಯಾಗಿ ನೆಲೆಯೂರಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಉದಯ್​ ಸಹರನ್​ ತಂಡಕ್ಕೆ ಆರಂಭಿಕ ಪೆಟ್ಟು ನೀಡಿದ್ದು, ಹರಿಣಗಳ ತಂಡದ ವೇಗಿ ಟ್ರಿಸ್ಟಾನ್ ಲೂಸ್. ಓಪನರ್​ ಅರ್ಶಿನ್​ ಕುಲಕರ್ಣಿ (12), ಮುಶೀರ್​ ಖಾನ್​ (4), ಪ್ರಿಯಾಂಶು ಮೋಲಿಯಾರನ್ನು (5) ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​​ಗೆ ಅಟ್ಟಿದರು. ಕ್ವೆನ ಮಪಾಕರ ಮೊದಲ ಎಸೆತದಲ್ಲಿ ಆರಂಭಿಕ ಆದರ್ಶ್​ ಸಿಂಗ್​ ವಿಕೆಟ್​ ನೀಡಿದರು. ಇದು 6ನೇ ಸಲ ವಿಶ್ವಕಪ್​ ಎತ್ತಿಹಿಡಿಯುವ ಭಾರತದ ಕನಸು ಕಮರುವ ಭೀತಿ ತಂದಿತ್ತು.

ಗುಡುಗಿದ ಮರಿ ಸಚಿನ್​: 9.2 ಓವರ್​ಗಳಲ್ಲಿ 32 ರನ್​ಗೆ 4 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ತಂಡವನ್ನು ನಾಯಕ ಉದಯ್​ ಸಹರನ್​ ಮತ್ತು ಸಚಿನ್​ ದಾಸ್​ ಕೆಚ್ಚೆದೆಯ ಆಟವಾಡಿ ಮೇಲೆತ್ತಿದರು. ನಾಯಕ ಉದಯ್​ ತಾಳ್ಮೆಯ ಆಟವಾಡಿದರೆ, ಇನ್ನೊಂದು ತುದಿಯಲ್ಲಿ ಎಚ್ಚರಿಕೆಯೊಂದಿಗೆ ಹರಿಣಗಳ ಬೌಲಿಂಗ್​ ಪಡೆಯನ್ನು ಸಚಿನ್​ ಬೆಂಡೆತ್ತಿದರು. ಮರಿ ಸಚಿನ್​ 95 ಎಸತೆಗಳಲ್ಲಿ 96 ರನ್​ ಚಚ್ಚಿದರು. ಇದರಲ್ಲಿ 11 ಬೌಂಡರಿ 1 ಭರ್ಕರಿ ಸಿಕ್ಸರ್​ ಇತ್ತು. ಶತಕದ ಅಂಚಿನಲ್ಲಿದ್ದ ಸಚಿನ್​, ಟ್ರಿಸ್ಟಾನ್ ಲೂಸ್​​ರ ಲೂಸ್​ ಬೌಲಿಂಗ್​ಗೆ ವಿಕೆಟ್​ ಕಳೆದುಕೊಂಡರು.

  • " class="align-text-top noRightClick twitterSection" data="">

ಅಷ್ಟೊತ್ತಿಗಾಗಲೇ ತಂಡದ ಮೊತ್ತ 203 ರನ್​ ಆಗಿತ್ತು. ಸೋಲಿನ ಸುಳಿಯಲ್ಲಿದ್ದ ಭಾರತವನ್ನು ಗೆಲುವಿನ ಅಂಚಿಗೆ ತಂದು ಸಚಿನ್​ ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕಿದರು. ಆದರೆ, ತಂಡದ ಪರವಾಗಿ ಆವೇಶದಿಂದ ಹೋರಾಡಿದ ಸಚಿನ್​ರ ಶತಕ ಮಿಸ್​ ಆಗಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ದಾಸ್​ ಔಟಾದ ಬಳಿಕ ತಂಡ ಮತ್ತೆ ವಿಕೆಟ್​ ಕಳೆದುಕೊಳ್ಳಲಾರಂಭಿಸಿತು. ಅರವೆಲ್ಲಿ ಅವಿನಾಶ್​​ (10), ಮುರುಗನ್​​ ಅಭಿಷೇಕ್​ (0) ವಿಕೆಟ್​ ನೀಡಿದರು. ಗೆಲುವಿಗೆ 1 ರನ್​ ಅಗತ್ಯವಿದ್ದಾಗ ಅವರಸಕ್ಕೆ ಬಿದ್ದು ಉದಯ್​ ರನೌಟ್​ ಆದರು. ರಾಜ್​ ಲಂಬಾನಿ 13 ರನ್​ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು.

ತವರಿನಲ್ಲಿ ಹರಿಣಗಳಿಗೆ ನಿರಾಸೆ: ತವರಿನ ಲಾಭ ಎತ್ತಲು ವಿಫಲವಾದ ದಕ್ಷಿಣ ಆಫ್ರಿಕಾ ನಿರಾಸೆ ಅನುಭವಿಸಿತು. 4ನೇ ಸಲ ಪ್ರಶಸ್ತಿ ಸುತ್ತಿಗೇರುವ ಅವಕಾಶದಿಂದ ತಪ್ಪಿಸಿಕೊಂಡಿತು. ಆರಂಭಿಕ ಬ್ಯಾಟರ್​ 76, ರಿಚರ್ಡ್​ 64, ಓಲಿವರ್​ ವೈಟ್​ಹೆಡ್​ 22, ಜುವಾನ್​ ಜೇಮ್ಸ್​ 24 ರನ್​ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ನಾಳೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವೆ 2ನೇ ಸೆಮಿಫೈನಲ್​ ನಡೆಯಲಿದ್ದು, ಗೆದ್ದ ತಂಡ ಫೆಬ್ರವರಿ 11 ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಇದನ್ನೂ ಓದಿ: ಮೂರನೇ ಟೆಸ್ಟ್​ಗೆ ವಿರಾಟ್​ ಬರುವರೇ?: ದ್ರಾವಿಡ್​ ಹೀಗೇಕೆ ಹೇಳಿದ್ರು!?

Last Updated : Feb 6, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.