ETV Bharat / sports

ಅಂಡರ್​19 ವಿಶ್ವಕಪ್​​: ಭಾರತ ಯುವ ತಂಡಕ್ಕೆ ನಿರಾಸೆ; ಆಸ್ಟ್ರೇಲಿಯಾಗೆ ಚಾಂಪಿಯನ್​ ಪಟ್ಟ

author img

By ETV Bharat Karnataka Team

Published : Feb 11, 2024, 9:54 PM IST

Updated : Feb 11, 2024, 10:52 PM IST

ಅಂಡರ್​19 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 79 ರನ್​ಗಳ ಗೆಲುವು ಸಾಧಿಸಿದೆ.

Eಅಂಡರ್​19 ವಿಶ್ವಕಪ್​ ಫೈನಲ್​: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು
ಅಂಡರ್​19 ವಿಶ್ವಕಪ್​ ಫೈನಲ್​: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು

ಬೆನೋನಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್​​ ಹಾಗೂ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಆಸ್ಟ್ರೇಲಿಯಾ, ಇದೀಗ ಅಂಡರ್​19 ವಿಶ್ವಕಪ್​ನಲ್ಲೂ ಟೀಮ್​ ಇಂಡಿಯಾಗೆ ಮುಳುವಾಗಿದೆ. ಅಂತಿಮ ಹಣಾಹಣಿಯಲ್ಲಿ ಭಾರತ ತಂಡವನ್ನು ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ಭಾನುವಾರ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಭಾರತವನ್ನು 79 ರನ್‌ಗಳಿಂದ ಸೋಲಿಸಿ ಕಾಂಗರೂ ಪಡೆ ವಿಶ್ವಕಪ್​ ಮುಡಿಗೇರಿಸಿಕೊಂಡಿದೆ.

ಇದಕ್ಕೂ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ​ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇದು ಈವರೆಗಿನ ಅತಿ ದೊಡ್ಡ ಮೊತ್ತದ ಸ್ಕೋರ್ ಆಗಿದೆ. 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗಳಿಸಿದ್ದ 242 ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು. ಆಸಿಸ್​ ಪರ ಹರ್ಜಸ್ ಸಿಂಗ್ (55) ಅರ್ಧಶತಕ ಸಿಡಿಸಿದರೆ, ನಾಯಕ ಹಗ್ ವೆಬ್ಬೆನ್ (48) ಮತ್ತು ಆರಂಭಿಕ ಬ್ಯಾಟರ್​ ಹ್ಯಾರಿ ಡಿಕ್ಸನ್ (42), ರಿಯಾನ್ ಹಿಕ್ಸ್ (20), ಚಾರ್ಲಿ ಆಂಡರ್ಸನ್ (13) ಮತ್ತು ರಾಫ್ ಮೆಕ್‌ಮಿಲನ್ 2 ರನ್​ಗಳ ಕೊಡುಗೆ ನೀಡಿದರು. ಆಲಿವರ್ ಪೀಕ್ (46) ಮತ್ತು ಟಾಮ್ ಸ್ಟ್ರೇಕರ್ (8) ಅಜೇಯರಾಗಿ ಉಳಿದು ತಂಡದ ಸ್ಕೋರ್​ 253ಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಬೌಲಿಂಗ್​ನಲ್ಲಿ ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಪಡೆದರೆ ನಮನ್ ತಿವಾರಿ 2 ವಿಕೆಟ್ ಪಡೆದರು. ಉಳಿದಂತೆ ಮುಶೀರ್ ಖಾನ್ ಮತ್ತು ಸೌಮ್ಯಾ ಪಾಂಡೆ ತಲಾ 1 ವಿಕೆಟ್​ ಪಡೆದರು.

ಆಸೀಸ್​ ನೀಡಿದ್ದ 253 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ 43.5 ಓವರ್‌ಗಳಲ್ಲಿ 174 ರನ್​ಗಳಿಗೆ ಸರ್ವಪತನ ಕಂಡು ವಿಶ್ವಕಪ್ ಕೈಚೆಲ್ಲಿತು​. ಭಾರತದ ಪರ ಆದರ್ಶ್ ಸಿಂಗ್ (47) ಮತ್ತು ಮುರುಗನ್ ಅಭಿಷೇಕ್ (42) ಹೊರತುಪಡಿಸಿ ಉಳಿದ ಆಟಗಾರರು ಕಾಂಗರೂ ಬೌಲರ್‌ಗಳ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಎರಡನೇ ಹೈಸ್ಕೋರರ್​ ಆಗಿರುವ ಮುಶೀರ್ ಖಾನ್ (22) ಈ ಪಂದ್ಯದಲ್ಲಿ ಬಹುಬೇಗ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ಉಳಿದಂತೆ ಅರ್ಶಿನ್ ಕುಲಕರ್ಣಿ (3), ನಾಯಕ ಉದಯ್ ಸಹರಾನ್ (8), ಪ್ರಿಯಾಂಶು ಮೊಲಿಯಾ (9), ಸಚಿನ್ ದಾಸ್ (8) ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಮಹಾಲಿ ಬಿಯರ್ಡ್‌ಮನ್ ಮತ್ತು ರಾಫೆ ಮೆಕ್‌ಮಿಲನ್ ತಲಾ 3 ವಿಕೆಟ್, ಕ್ಯಾಲಮ್ ವಿಡ್ಲರ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಟಿ20ಯಲ್ಲಿ 5ನೇ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್

Last Updated : Feb 11, 2024, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.