ETV Bharat / international

ಯುದ್ಧದ ಕಾರ್ಮೋಡ: ರಫಾ ತೊರೆದ 1 ಲಕ್ಷಕ್ಕೂ ಹೆಚ್ಚು ನಾಗರಿಕರು - War on Rafah

author img

By ETV Bharat Karnataka Team

Published : May 10, 2024, 3:34 PM IST

ರಫಾ ಮೇಲೆ ಇಸ್ರೇಲ್ ಯುದ್ಧ ಸಾರುವುದು ಬಹುತೇಕ ನಿಶ್ಚಿತವಾಗಿದ್ದು, 1 ಲಕ್ಷಕ್ಕೂ ಹೆಚ್ಚು ಜನ ಈಗಾಗಲೇ ರಫಾ ತೊರೆದಿದ್ದಾರೆ.

1,10,000 people have fled Rafah
1,10,000 people have fled Rafah ((image : ians))

ಟೆಲ್ ಅವೀವ್ : ಇಸ್ರೇಲ್ ಸೇನೆಯು ರಫಾ ನಗರದ ಒಳಗೆ ಪ್ರವೇಶಿಸಲು ಆರಂಭಿಸಿದಾಗಿನಿಂದ ಸುಮಾರು 1,10,000 ಜನರು ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ರಫಾ ನಗರವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್​ಡಬ್ಲ್ಯೂಎ) ಶುಕ್ರವಾರ ತಿಳಿಸಿದೆ.

"ಯುಎನ್ಆರ್​ಡಬ್ಲ್ಯೂಎ ಅಂದಾಜಿನ ಪ್ರಕಾರ ಸುಮಾರು 1,10,000 ಜನರು ಈಗ ತಮ್ಮ ಜೀವ ಉಳಿಸಿಕೊಳ್ಳಲಲು ರಫಾದಿಂದ ಪಲಾಯನ ಮಾಡಿದ್ದಾರೆ. ಗಾಜಾ ಪಟ್ಟಿಯ ಯಾವ ಪ್ರದೇಶವೂ ಈಗ ಸುರಕ್ಷಿತವಾಗಿಲ್ಲ ಮತ್ತು ಜೀವನ ಪರಿಸ್ಥಿತಿಗಳು ಅತ್ಯಂತ ಕೆಟ್ಟದಾಗಿವೆ. ತಕ್ಷಣದ ಕದನವಿರಾಮವೊಂದೇ ಈಗ ನಮಗುಳಿದಿರುವ ಆಶಾಭಾವನೆಯಾಗಿದೆ" ಎಂದು ಯುಎನ್ಆರ್​ಡಬ್ಲ್ಯೂಎ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದೆ.

ಪ್ಯಾಲೆಸ್ಟೈನ್ ಗಡಿ ಪ್ರಾಧಿಕಾರದ ಪ್ರಕಾರ, ಈಜಿಪ್ಟ್​ನಿಂದ ರಫಾಗೆ ಮಾನವೀಯ ನೆರವು ಪರಿಹಾರ ಸಾಮಗ್ರಿಗಳ ಸಾಗಣೆಯನ್ನು ನಿಲ್ಲಿಸಲಾಗಿದೆ. ಗಾಜಾ ಪಟ್ಟಿಯ ಮಧ್ಯಭಾಗದಲ್ಲಿರುವ ರಫಾ ಮತ್ತು ಅಲ್ - ಸೈತುನ್ ನಗರದ ಪೂರ್ವದಲ್ಲಿ ಈಗಲೂ ಸೇನಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

"ರಫಾದಲ್ಲಿ ಸೈನ್ಯವು ಹಲವಾರು ಸುರಂಗ ಪ್ರವೇಶದ್ವಾರಗಳನ್ನು ಪತ್ತೆಹಚ್ಚಿದೆ. ಈಜಿಪ್ಟ್​ಗೆ ರಾಫಾ ಕ್ರಾಸಿಂಗ್​ನ ಪ್ಯಾಲೆಸ್ಟೈನ್ ಬದಿಯಲ್ಲಿ ನಡೆದ ಯುದ್ಧಗಳಲ್ಲಿ ಹಲವಾರು ಭಯೋತ್ಪಾದಕ ಕೋಶಗಳನ್ನು ನಿರ್ಮೂಲನೆ ಮಾಡಲಾಯಿತು." ಎಂದು ಇಸ್ರೇಲ್ ಸೇನೆ ಹೇಳಿದೆ.

ಇಸ್ರೇಲ್ ಮೇಲೆ ರಾಕೆಟ್​ಗಳು ಮತ್ತು ಮೋರ್ಟಾರ್ ಶೆಲ್​ಗಳನ್ನು ಹಾರಿಸಿದ ರಫಾ ನಗರದ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ವಾಯುಪಡೆ ದಾಳಿ ನಡೆಸಿದೆ. ರಫಾದ ಪೂರ್ವ ಭಾಗದ ನಿವಾಸಿಗಳು ಈ ಪ್ರದೇಶವನ್ನು ತೊರೆಯುವಂತೆ ಸೋಮವಾರ ಇಸ್ರೇಲ್ ಮಿಲಿಟರಿ ಕರೆ ನೀಡಿತ್ತು. ರಫಾದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ 1 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ದೊಡ್ಡ ಪ್ರಮಾಣದಲ್ಲಿ ಸಾವು-ನೋವು ಉಂಟಾಗುವ ಸಾಧ್ಯತೆ ಇರುವುದರಿಂದ ರಫಾ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸದಂತೆ ಅಮೆರಿಕ ಸೇರಿದಂತೆ ಇಸ್ರೇಲ್​ನ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಬಲವಾಗಿ ಆಗ್ರಹಿಸಿವೆ.

ಅಕ್ಟೋಬರ್ 7 ರಂದು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದರಿಂದ ಕೆರಳಿದ ಇಸ್ರೇಲ್, ಹಮಾಸ್​ ಅನ್ನು ಸಂಪೂರ್ಣವಾಗಿ ನಾಶ ಮಾಡಲು ಬಯಸಿದೆ. ಹಮಾಸ್​ ನಾಯಕರು ರಫಾ ನಗರದ ಭೂಗತ ಸುರಂಗಗಳಲ್ಲಿ ಅಡಗಿದ್ದಾರೆ ಎಂದು ಇಸ್ರೇಲ್ ಶಂಕಿಸಿದೆ. ಅಲ್ಲದೇ ಇಸ್ರೇಲಿ ಒತ್ತೆಯಾಳುಗಳನ್ನು ಕೂಡ ಹಮಾಸ್ ಇಲ್ಲಿಯೇ ಬಚ್ಚಿಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ : 'ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪವಿಲ್ಲ' ರಷ್ಯಾದ ಆರೋಪ ತಳ್ಳಿಹಾಕಿದ ಯುಎಸ್ - lok sabha election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.