ETV Bharat / international

ಶೀಘ್ರದಲ್ಲೇ ಇಸ್ರೇಲ್​ ಮೇಲೆ ಇರಾನ್​ ದಾಳಿ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆ: ಅಮೆರಿಕ ಅಧ್ಯಕ್ಷ ಬೈಡನ್​ - Iran to attack Israel sooner

author img

By ETV Bharat Karnataka Team

Published : Apr 13, 2024, 6:54 AM IST

ಇಸ್ರೇಲ್​ ಮೇಲೆ ಇರಾನ್​ ಶೀಘ್ರದಲ್ಲೇ ಪ್ರತೀಕಾರದ ದಾಳಿ ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

US President Biden says he expects Iran to attack Israel 'sooner than later'
ಶೀಘ್ರದಲ್ಲೇ ಇಸ್ರೇಲ್​ ಮೇಲೆ ಇರಾನ್​ ದಾಳಿ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆ: ಅಮೆರಿಕ ಅಧ್ಯಕ್ಷ ಬೈಡನ್​

ವಾಷಿಂಗ್ಟನ್, ಅಮೆರಿಕ: ಗಾಜಾದಲ್ಲಿ ಮುಂದುವರೆದಿರುವ ಇಸ್ರೇಲ್​ ದಾಳಿ, ಮಧ್ಯ-ಪ್ರಾಚ್ಯ ಸಂಘರ್ಷ ಇನ್ನಷ್ಟು ಬಿಕ್ಕಟ್ಟು ತಂದೊಡ್ಡುವ ಆತಂಕದ ನಡುವೆ, ಇರಾನ್ ಇಸ್ರೇಲ್ ಮೇಲೆ ಶೀಘ್ರದಲ್ಲೇ ದಾಳಿ ನಡೆಸಲಿದೆ ಎಂದು ತಾನು ನಿರೀಕ್ಷಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ನನ್ನ ನಿರೀಕ್ಷೆಯಂತೆ ನಾನು ಅಂದಾಜಿಸಿರುವುದಕ್ಕಿಂತ ಮುಂಚೆಯೇ ಇಸ್ರೇಲ್ ಮೇಲೆ ಇರಾನಿನ ದಾಳಿ ನಡೆಯಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ಜಾಗತಿಕವಾಗಿ ವರದಿಯಾಗಿರುವಂತೆ, ಇಸ್ರೇಲ್ ಸಿರಿಯನ್ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತೆಹರಾನ್​ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದೆ.

ಇದೇ ವೇಳೆ ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಇರಾನ್​ಗೆ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಇದೇ ವೇಳೆ, ಅಮೆರಿಕ ಇಸ್ರೇಲ್ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮ ಹೇಳಿದೆ. ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ, ನಮ್ಮ ಬೆಂಬಲ ಇಸ್ರೇಲ್​ಗೆ ಇದೆ. ಅದರ ರಕ್ಷಣೆಗೆ ನಾವು ನೆರವು ನೀಡಲಿದ್ದು, ಇರಾನ್ ಈ ದಾಳಿಯಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಇದೇ ವೇಳೆ ಬೈಡನ್​ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಇರಾನ್​​​​​​​ ಸನ್ನದ್ದವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಮೆರಿಕ ಹೆಚ್ಚಿನ ನಿಗಾ ವಹಿಸಿದೆ. ಕಳೆದ ವಾರ ಸಿರಿಯಾದಲ್ಲಿ ಇರಾನ್ ರಾಜತಾಂತ್ರಿಕ ವಿಭಾಗದ ಮೇಲೆ ಇಸ್ರೇಲ್ ದಾಳಿ ನಡೆಸಿ ಮೂರು ಇರಾನಿಯನ್​​ ಜನರಲ್‌ಗಳನ್ನು ಕೊಂದು ಹಾಕಿತ್ತು. ಇದು ಇರಾನ್​​​​​​​​ ಅನ್ನು ಕೆರಳಿಸಿದೆ. ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆಯನ್ನು ಇರಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಘ ಮತ್ತಷ್ಟು ಭುಗಿಲೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮೇಲೆ 'ಮಹತ್ವದ ದಾಳಿ' ನಡೆಸುವುದಾಗಿ ಇರಾನ್ ಬೆದರಿಕೆ ಹಾಕುತ್ತಿದೆ ಎಂದು ಬೈಡನ್​ ಎಚ್ಚರಿಸಿದ್ದಾರೆ.

ಇರಾನ್‌ನ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ಇತರ ದೇಶಗಳು ತನ್ನ ನಾಗರಿಕರಿಗೆ ಹೊಸ ಪ್ರಯಾಣ ಮಾರ್ಗಸೂಚಿಗಳನ್ನು ಹೊರಡಿಸಿವೆ. ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಎಲ್ಲ ಭಾರತೀಯರು ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ನಾವು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಇಸ್ರೇಲ್ ಕಡೆಗೆ ಉಡಾಯಿಸಲಾದ ಯಾವುದೇ ಶಸ್ತ್ರಾಸ್ತ್ರಗಳನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತದೆ ಎಂದು ವಾಷಿಂಗ್ಟನ್‌ನ ಇಬ್ಬರು ಅಧಿಕಾರಿಗಳು ಅಮೆರಿಕದ ಪ್ರಮುಖ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಕೆಫೆ ಸ್ಫೋಟ ಪ್ರಕರಣ: ಕೋಲ್ಕತ್ತಾದ ಲಾಡ್ಜ್‌ನಲ್ಲಿ ಗುರುತು ಬದಲಿಸಿಕೊಂಡು ಅಡಗಿದ್ದ ಉಗ್ರರು - Cafe Blast Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.