ETV Bharat / international

ಭಾರತದಿಂದ ತೈಲ ದರ ಪಾವತಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ: ರಷ್ಯಾ ಸ್ಪಷ್ಟನೆ - oil payment

author img

By ETV Bharat Karnataka Team

Published : Apr 4, 2024, 7:38 AM IST

Updated : Apr 4, 2024, 9:33 AM IST

ಕಚ್ಚಾ ತೈಲ ಪೂರಕೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪಾವತಿ ಸಮಸ್ಯೆ ಇಲ್ಲ ಎಂದು ರಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ.

No issue with oil payment from India: Russia
No issue with oil payment from India: Russia

ಮಾಸ್ಕೋ, ರಷ್ಯಾ: ಭಾರತಕ್ಕೆ ರಷ್ಯಾದಿಂದ ಆಗುತ್ತಿರುವ ಕಚ್ಚಾ ತೈಲ ಪೂರೈಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ತೈಲಕ್ಕೆ ಸಂಬಂಧಿಸಿದಂತೆ ಯಾವುದೇ ಪಾವತಿ ಸಮಸ್ಯೆಗಳು ಎದುರಾಗಿಲ್ಲ ಅಲ್ಲಿನ ಸರ್ಕಾರ ಹೇಳಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.

ಭಾರತಕ್ಕೆ ರಷ್ಯಾದ ತೈಲ ಪೂರೈಕೆಯನ್ನು ಸ್ಥಿರವಾಗಿ, ಯಾವುದೇ ಅಡೆ ತಡೆ ಇಲ್ಲದಂತೆ ನಿರ್ವಹಿಸಲಾಗಿದೆ. ರಷ್ಯಾದಿಂದ ರಫ್ತು ಮಾಡುವ ತೈಲಕ್ಕಾಗಿ ಮಾಡುವ ಪಾವತಿ ವಿಧಾನಗಳನ್ನು ನಿರ್ಧರಿಸುವಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಮಾರಿಯಾ ಜಖರೋವಾ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಆಯಾಯ ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ವಿನಿಮಯವಾಗಿ ಪಾವತಿ ಮಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಒತ್ತಿ ಹೇಳಿದ್ದಾರೆ. ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡುವಾಗ ಪಾಶ್ಚಿಮಾತ್ಯರು ವಿಧಿಸಿದ ನಿಯಮಗಳನ್ನು ಅವಲಂಬಿಸದಿರಲು ನಮ್ಮ ನಡುವಣ ವ್ಯವಹಾರವು ಸಾಧ್ಯವಾಗಿಸುತ್ತದೆ ಎಂದು ಜಖರೋವಾ ಹೇಳಿದ್ದಾರೆಂದು TASS ಉಲ್ಲೇಖಿಸಿದೆ.

ಉಕ್ರೇನ್‌ನೊಂದಿಗಿನ ಮಿಲಿಟರಿ ಸಂಘರ್ಷದ ಮಧ್ಯೆ ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿಲುವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವರ್ಷದ ಫೆಬ್ರವರಿಯಲ್ಲಿ ಪುನರುಚ್ಚರಿಸಿದ್ದರು. ಭಾರತ ಮತ್ತು ರಷ್ಯಾ ಯಾವಾಗಲೂ ಸ್ಥಿರ ಮತ್ತು ಸೌಹಾರ್ದ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗಲು ಬಯಸಿದೆ. ಮತ್ತು ಮಾಸ್ಕೋ ನವದೆಹಲಿಯ ಹಿತಾಸಕ್ತಿಗಳನ್ನು ಎಂದಿಗೂ ನೋಯಿಸಿಲ್ಲ ಎಂದು ಅವರು ಹೇಳಿದ್ದಾರೆ.

ಮ್ಯೂನಿಚ್ ಭದ್ರತಾ ಸಮ್ಮೇಳನಕ್ಕಾಗಿ ಜರ್ಮನಿಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ್​ ಹ್ಯಾಂಡೆಲ್ಸ್‌ಬ್ಲಾಟ್ ಜರ್ಮನ್ ಆರ್ಥಿಕ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಭಾರತವು ಯುರೋಪಿನಂತೆಯೇ ರಷ್ಯಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ಯುರೋಪ್ ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ಇದೇ ವೇಳೆ ಒತ್ತಾಯಿಸಿದ್ದರು.

ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಜೈಶಂಕರ್, "ಪ್ರತಿಯೊಬ್ಬರೂ ತಮ್ಮ ಹಿಂದಿನ ಅನುಭವಗಳ ಆಧಾರದ ಮೇಲೆ ಸಂಬಂಧವನ್ನು ಉಳಿಸಿಕೊಳ್ಳುವುದು ಅಥವಾ ತ್ಯಜಿಸುವ ಬಗ್ಗೆ ಯೋಚಿಸುತ್ತಾರೆ. ನಾವು ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸವನ್ನು ನೋಡಿದರೆ, ರಷ್ಯಾ ಎಂದಿಗೂ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆ ತಂದಿಲ್ಲ ಎಂದು ಹೇಳಿದ್ದರು.

ಭಾರತ ಮತ್ತು ಯುರೋಪ್ ತಮ್ಮ ನಿಲುವಿನ ಬಗ್ಗೆ ಮಾತನಾಡುವೆ ಮತ್ತು ತಮ್ಮ ಭಿನ್ನಾಭಿಪ್ರಾಯಗಳಿಗೆ ಒತ್ತು ನೀಡಿಲ್ಲ ಎಂದು ಅವರು ಹೇಳಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರ ಯುರೋಪ್ ತನ್ನ ಇಂಧನ ಸಂಗ್ರಹಣೆಯ ಹೆಚ್ಚಿನ ಭಾಗವನ್ನು ಮಧ್ಯಪ್ರಾಚ್ಯಕ್ಕೆ ವರ್ಗಾಯಿಸಿ ಕೊಂಡಿದೆ ಎಂದಿರುವ ಜೈ ಶಂಕರ್​, ನಮ್ಮ ಮಧ್ಯಪ್ರಾಚ್ಯ ಪೂರೈಕೆದಾರರು ಯುರೋಪ್​​ಗೆ ಹೆಚ್ಚಿನ ಆದ್ಯತೆ ನೀಡಿದರು ಏಕೆಂದರೆ ಯುರೋಪ್ ಹೆಚ್ಚಿನ ಬೆಲೆಗಳನ್ನು ನೀಡಿ ಅಲ್ಲಿಂದ ತೈಲ ಖರೀದಿಸಿದವು. ಹೀಗಾಗಿ ನಾವು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಬಡತನ ರೇಖೆಯ ಕೆಳಗೆ ಜಾರಲಿದ್ದಾರೆ 1 ಕೋಟಿ ಪಾಕಿಸ್ತಾನಿಯರು: ವಿಶ್ವಬ್ಯಾಂಕ್ ಎಚ್ಚರಿಕೆ - WORLD BANK

Last Updated :Apr 4, 2024, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.