ETV Bharat / international

ಅಲ್-ಶಿಫಾ ಆಸ್ಪತ್ರೆಯಲ್ಲಿ ಅಡಗಿದ್ದ 4 ಹಮಾಸ್​ ನಾಯಕರನ್ನು ಹತ್ಯೆಗೈದ ಇಸ್ರೇಲ್ - Israel Hamas War

author img

By ETV Bharat Karnataka Team

Published : Mar 31, 2024, 12:08 PM IST

ಗಾಜಾದ ಅಲ್ ಶಿಫಾ ಆಸ್ಪತ್ರೆಯ ಮೇಲೆ ದಾಳಿ ಮಾಡಿದ ಇಸ್ರೇಲ್ ಪಡೆಗಳು ನಾಲ್ವರು ಹಿರಿಯ ಹಮಾಸ್ ನಾಯಕರನ್ನು ಕೊಂದು ಹಾಕಿವೆ.

IDF kill four senior Hamas leaders in Gaza's Al-Shifa hospital
IDF kill four senior Hamas leaders in Gaza's Al-Shifa hospital

ಟೆಲ್ ಅವೀವ್ : ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ ನಡೆಸಲಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ನಾಲ್ವರು ಹಿರಿಯ ಹಮಾಸ್ ನಾಯಕರನ್ನು ಹತ್ಯೆಗೈಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ. ಮೃತರನ್ನು ಹಮಾಸ್ ನೇಮಕಾತಿ ಮತ್ತು ಸರಬರಾಜು ಇಲಾಖೆ ಮುಖ್ಯಸ್ಥ ರಾದ್ ಥಾಬೆಟ್ ಮತ್ತು ಗಾಜಾ ನಗರದ ಹಮಾಸ್ ರಾಕೆಟ್ ಘಟಕದ ಉಪ ಕಮಾಂಡರ್ ಮಹಮೂದ್ ಖಲೀಲ್ ಝಕ್ಜುಕ್ ಎಂದು ಗುರುತಿಸಲಾಗಿದೆ. ಮೃತ ಇನ್ನಿಬ್ಬರನ್ನು ಹಮಾಸ್​ನ ಹಿರಿಯ ಕಾರ್ಯಕರ್ತರಾದ ಫಾದಿ ದ್ವೀಕ್ ಮತ್ತು ಝಕಾರಿಯಾ ನಜೀಬ್ ಎಂದು ಗುರುತಿಸಲಾಗಿದೆ.

ದ್ವೀಕ್ ಹಮಾಸ್​ನ ಹಿರಿಯ ಗುಪ್ತಚರ ಅಧಿಕಾರಿಯಾಗಿದ್ದು, 2002 ರಲ್ಲಿ ವೆಸ್ಟ್ ಬ್ಯಾಂಕ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ಐಡಿಎಫ್ ಹೇಳಿದೆ. ಇನ್ನು ಝಕಾರಿಯಾ ನಜೀಬ್ ಹಮಾಸ್​ನ ವೆಸ್ಟ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಹಿರಿಯ ಕಾರ್ಯಕರ್ತನಾಗಿದ್ದು, ವೆಸ್ಟ್​ ಬ್ಯಾಂಕ್​ನಲ್ಲಿ ಇಸ್ರೇಲ್ ವಿರುದ್ಧ ದಾಳಿಗಳನ್ನು ಪ್ಲ್ಯಾನ್ ಮಾಡುವುದರಲ್ಲಿ ಭಾಗಿಯಾಗಿದ್ದಾನೆ ಎಂದು ಐಡಿಎಫ್ ತಿಳಿಸಿದೆ.

ಅಲ್-ಶಿಫಾ ಆಸ್ಪತ್ರೆಯ ಆವರಣದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಮತ್ತು ಆಸ್ಪತ್ರೆಯ ಒಳಗೆ ತನ್ನ ಪಡೆಗಳು ಸುಮಾರು 200 ಹಮಾಸ್ ಕಾರ್ಯಕರ್ತರನ್ನು ಕೊಂದಿವೆ ಎಂದು ಐಡಿಎಫ್ ಶನಿವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶದಲ್ಲಿ ಐಡಿಎಫ್ ಶನಿವಾರ ಹಲವಾರು ಬಂದೂಕುಧಾರಿ ಹಮಾಸ್ ಉಗ್ರರನ್ನು ಕೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಐಡಿಎಫ್​ನ ನೆಲದ ಆಕ್ರಮಣವನ್ನು ಬೆಂಬಲಿಸಲು ಇಸ್ರೇಲ್ ವಾಯುಪಡೆಯು ಅಲ್-ಅಮಲ್ ಮತ್ತು ಅಲ್-ಕ್ವಾರಾರಾ ಪ್ರದೇಶದಲ್ಲಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ ಎಂದು ಸೇನೆ ತಿಳಿಸಿದೆ.

ಹಲವಾರು ಹಮಾಸ್ ಉಗ್ರರು ಅಡಗಿರುವ ಅಲ್-ಶಿಫಾ ಮತ್ತು ಅಲ್-ನಾಸಿರ್ ಆಸ್ಪತ್ರೆಗಳಲ್ಲಿ ಐಡಿಎಫ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 32,705 ಕ್ಕೆ ಏರಿದೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ, ಇಸ್ರೇಲ್ ಸೇನೆಯು ಪ್ಯಾಲೆಸ್ಟೈನ್ ಕರಾವಳಿ ಎನ್ ಕ್ಲೇವ್​ನಲ್ಲಿ 82 ಜನರನ್ನು ಕೊಂದಿದೆ ಮತ್ತು 98 ಜನರನ್ನು ಗಾಯಗೊಳಿಸಿದೆ ಎಂದು ಸಚಿವಾಲಯ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹ: ಪಾಕಿಸ್ತಾನದ ಸಹಾಯಕ್ಕೆ ಮುಂದಾದ ಚೀನಾ - terrorism

ETV Bharat Logo

Copyright © 2024 Ushodaya Enterprises Pvt. Ltd., All Rights Reserved.