ETV Bharat / international

ಇರಾನ್​ನಿಂದ ದಾಳಿ ಸಾಧ್ಯತೆ: ವೈಮಾನಿಕ ಸುರಕ್ಷತೆ ಹೆಚ್ಚಿಸಿದ ಇಸ್ರೇಲ್ - ISRAEL

author img

By ETV Bharat Karnataka Team

Published : Apr 4, 2024, 2:12 PM IST

ಇರಾನ್​ನಿಂದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ವೈಮಾನಿಕ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ.

Israel calls up reservists to bolster air defence array amid Iranian threats
Israel calls up reservists to bolster air defence array amid Iranian threats

ಜೆರುಸಲೇಂ : ಇರಾನ್​ನೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ಮೀಸಲು ಯೋಧರನ್ನು ಯುದ್ಧಕ್ಕೆ ಕರೆಸಿಕೊಂಡಿದೆ. ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಈ ಮೀಸಲು ಯೋಧರನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. "ಮಾನವಶಕ್ತಿ ಹೆಚ್ಚಿಸಲು ಮತ್ತು ಮೀಸಲು ಸೈನಿಕರನ್ನು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ವೈಮಾನಿಕ ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲು ನಿರ್ಧರಿಸಲಾಗಿದೆ" ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ರಾತ್ರಿ ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಮಂಗಳವಾರ ಪ್ರತಿಜ್ಞೆ ಮಾಡಿರುವುದು ಗಮನಾರ್ಹ. ಸಿರಿಯಾದಲ್ಲಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಹಿರಿಯ ಕಮಾಂಡರ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಅವರ ಡೆಪ್ಯೂಟಿ ಸೇರಿದಂತೆ ಏಳು ಇರಾನಿಯನ್ನರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಈವರೆಗೂ ಇಸ್ರೇಲ್ ಹೊಣೆ ಹೊತ್ತುಕೊಂಡಿಲ್ಲ. ಈ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿನ ಯುದ್ಧ ಉದ್ವಿಗ್ನತೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ.

ಇಸ್ರೇಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಇರಾನ್: ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಇಸ್ರೇಲ್ ವಿರುದ್ಧ ದೇಶವು ಮೊಕದ್ದಮೆ ಹೂಡಲಿದೆ ಎಂದು ಇರಾನ್​ನ ಕಾನೂನು ವ್ಯವಹಾರಗಳ ಇಲಾಖೆಯ ಉಪಾಧ್ಯಕ್ಷ ಮೊಹಮ್ಮದ್ ದೆಹ್ಕಾನ್ ಹೇಳಿದ್ದಾರೆ. ಟೆಹ್ರಾನ್​ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ದೆಹ್ಕಾನ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಸ್ರೇಲಿ ದಾಳಿಯು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಮತ್ತು ಇರಾನ್ ಪ್ರಸ್ತುತ ಕಾನೂನು ಕ್ರಮಗಳ ಬಗ್ಗೆ ಮೌಲ್ಯಮಾಪನ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ತನ್ನ ಕಾನೂನು ನಿರ್ಧಾರಗಳ ಬಗ್ಗೆ ಇರಾನ್ ಮಾಹಿತಿ ನೀಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿರಿಯಾದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಎಂಟು ಇರಾನಿಯನ್ನರು, ಐವರು ಸಿರಿಯನ್ನರು ಮತ್ತು ಲೆಬನಾನ್ ನ ಹೆಜ್ಬುಲ್ಲಾ ಉಗ್ರಗಾಮಿ ಗುಂಪಿನ ಓರ್ವ ಸದಸ್ಯ ಸೇರಿದಂತೆ ಸಾವಿನ ಸಂಖ್ಯೆ 14 ಕ್ಕೆ ಏರಿದೆ ಎಂದು ಸಿರಿಯನ್ ಮಾನವ ಹಕ್ಕುಗಳ ಯುದ್ಧ ವೀಕ್ಷಕ ಸಂಘಟನೆ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ : ಬಡತನ ರೇಖೆಯ ಕೆಳಗೆ ಜಾರಲಿದ್ದಾರೆ 1 ಕೋಟಿ ಪಾಕಿಸ್ತಾನಿಯರು: ವಿಶ್ವಬ್ಯಾಂಕ್ ಎಚ್ಚರಿಕೆ - WORLD BANK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.