ನ್ಯೂಯಾರ್ಕ್​​ನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ: 'ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ'

author img

By ETV Bharat Karnataka Team

Published : Feb 17, 2024, 8:09 AM IST

Fire incident in residential building

ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯವನ್ನು ಮಾಡಲಾಗುತ್ತಿದೆ ಎಂದು ನ್ಯೂಯಾರ್ಕ್​ನಲ್ಲಿರುವ ಭಾರತೀಯ ಕಾನ್ಸುಲೇಟ್​ ಜನರಲ್​ ತಿಳಿಸಿದೆ.

ನ್ಯೂಯಾರ್ಕ್​( ಅಮೆರಿಕ): ಇಲ್ಲಿನ ಜೆರ್ಸಿ ನಗರದ ವಸತಿ ಕಟ್ಟಡವೊಂದರಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದ್ದು, ಇಲ್ಲಿ ವಾಸಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಸುರಕ್ಷಿತವಾಗಿದ್ದಾರೆ ಎಂದು ನ್ಯೂಯಾರ್ಕ್​ನಲ್ಲಿರುವ ಭಾರತೀಯ ಕಾನ್ಸುಲೇಟ್​ ಜನರಲ್​ ಘಟನೆ ಬಗ್ಗೆ ಮಾಹಿತಿ ನೀಡಿದೆ. ಭಾರತದ ಕಾನ್ಸುಲೇಟ್​ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮತ್ತು ಅವರಿಗೆ ವಸತಿ ಹಾಗೂ ಇತರ ಪ್ರಮುಖ ದಾಖಲೆಗಳು ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

ಜೆರ್ಸಿ ನಗರದ ಬಹು ಕುಟುಂಬಗಳು ವಾಸವಾಗಿರುವ ವಸತಿ ಕಟ್ಟಡದ ನೆಲಮಾಳಿಗೆಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ನೆಲಮಾಳಿಗೆಯಿಂದ ಬೆಂಕಿ ಮೊದಲ ಮತ್ತು ಎರಡನೇ ಮಹಡಿಗೂ ಹರಡಿದ್ದು, ಅಲ್ಲಿ ವಾಸಿಸುತ್ತಿದ್ದ 12 ಜನರು ಬಹುತೇಕ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದರು. ಇದಾದ ನಂತರ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಭಾರತದ ಕಾನ್ಸುಲೇಟ್​ ಜನರಲ್​ ಈ ಹೇಳಿಕೆ ನೀಡಿದೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಕಾನ್ಸುಲೇಟ್​ ಜನರಲ್​, "ಜೆರ್ಸಿ ಸಿಟಿಯ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ನ್ಯೂಯಾರ್ಕ್​ನಲ್ಲಿರುವ ಭಾರತದ ಕಾನ್ಸುಲೇಟ್​ ಜನರಲ್​ಗೆ ಮಾಹಿತಿ ಬಂದಿದೆ. ಅಲ್ಲಿ ವಾಸಿಸುವ ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಸುರಕ್ಷಿತವಾಗಿದ್ದಾರೆ. ಮತ್ತು ಅವಘಡದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ. ಅಲ್ಲಿಂದ ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳ ಜೊತೆಗೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರಿಗೆ ವಸತಿ ಹಾಗೂ ಪ್ರಮುಖ ದಾಖಲೆಗಳು ಸೇರಿದಂತೆ ಎಲ್ಲಾ ರೀತಿಯ ಸಹಾಯವನ್ನು ಕಾನ್ಸುಲೇಟ್​ ಜನರಲ್​ ಮಾಡುತ್ತಿದೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನಗರದ ವಕ್ತಾರೆ ಕಿಂಬರ್ಲಿ ವ್ಯಾಲೇಸ್​- ಸ್ಕಾಲ್ಸಿಯೋನ್​, "ವಸತಿ ಕಟ್ಟಡದ ನೆಲಮಾಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಮೊದಲ ಹಾಗೂ ಎರಡನೇ ಮಹಡಿಗೆ ವ್ಯಾಪಿಸಿತ್ತು. ಇದಕ್ಕೆ ಜೆರ್ಸಿ ನಗರದ ಅಗ್ನಿಶಾಮಕ ದಳದವರು ತಕ್ಷಣವೇ ಸ್ಪಂದಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ವಸತಿ ಕಟ್ಟಡದಲ್ಲಿ ವ್ಯಾಪಿಸಿದ ಬೆಂಕಿಯಿಂದ ಅಕ್ಕಪಕ್ಕದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ. ತೀವ್ರವಾದ ಬೆಂಕಿಯಿಂದ ಸಮಸ್ಯೆ ಎದುರುಸಿದ ವಸತಿ ಕಟ್ಟಡದ 14 ನಿವಾಸಿಗಳಿಗೆ ಅಮೆರಿಕದ ರೆಡ್​ ಕ್ರಾಸ್​ ಸಹಾಯ ಒದಗಿಸಿದೆ. ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಥವಾ ಯಾವುದೇ ನಿವಾಸಿಗಳಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ" ಎಂದು ಹೇಳಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ - ಮೂರು ಸಂಪೂರ್ಣ, 7 ಕಾರುಗಳಿಗೆ ಭಾಗಶಃ ಹಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.