ಗಾಜಾ ಯುದ್ಧವನ್ನು "ಹಿಟ್ಲರ್​ ಹತ್ಯಾಕಾಂಡ"ಕ್ಕೆ ಹೋಲಿಸಿದ ಬ್ರೆಜಿಲ್​​ ಅಧ್ಯಕ್ಷ ಲೂಲಾ; ಹೇಳಿಕೆ ಖಂಡಿಸಿದ ಇಸ್ರೇಲ್​​

author img

By ETV Bharat Karnataka Team

Published : Feb 19, 2024, 7:40 AM IST

Brazilian President Lula has compared Gaza war to Hitlers holocaust

ಇಸ್ರೇಲ್​ ಕುರಿತಂತೆ ಬ್ರೆಜಿಲ್​ ನಾಯಕನ ಹೇಳಿಕೆಗೆ ಸ್ವತಃ ಬ್ರೆಜಿಲ್​ನ ಯಹೂದಿ ಸಂಘಟನೆಗಳು, ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು, ವಿರೋಧ ಪಕ್ಷದ ನಾಯಕ ಯೈರ್​ ಲ್ಯಾಪಿಡ್, ವಿದೇಶಾಂಗ ಸಚಿವ ಇಸ್ರೇಲ್​ ಕಾಟ್ಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೆಲ್​ ಅವೀವ್​: ಬ್ರೆಜಿಲ್​ ಅಧ್ಯಕ್ಷ ಲೂಲಾ ಡ ಸಿಲ್ವಾ, ಗಾಜಾದಲ್ಲಿ ಹಮಾಸ್​ ಮೇಲೆ ಇಸ್ರೇಲ್​ ನಡೆಸುತ್ತಿರುವ ಯುದ್ಧವನ್ನು ಅಡಾಲ್ಫ್​ ಹಿಟ್ಲರ್​ ಯಹೂದಿಗಳ ವಿರುದ್ಧ ನಡೆಸಿದ 'ಹತ್ಯಾಕಾಂಡ'ಕ್ಕೆ ಹೋಲಿಸಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್​ ನಡೆಸುತ್ತಿರುವ ದಾಳಿ ಪ್ಯಾಲೆಸ್ಟೀನಿಯನ್​ ಜನರ ವಿರುದ್ಧದ 'ಹತ್ಯಾಕಾಂಡ'ವಾಗಿದೆ. ಇಸ್ರೇಲ್​ ಪ್ಯಾಲೆಸ್ಟೀನಿಯನ್​ ನಾಗರಿಕರ ವಿರುದ್ಧ 'ಜನಾಂಗೀಯ ಹತ್ಯೆ' ಮಾಡುತ್ತಿದೆ ಎಂದು ಲೂಲಾ ಹೇಳಿದ್ದಾರೆ.

ಆಫ್ರಿಕನ್​ ಯೂನಿಯನ್​ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಅಡಿಸ್​ ಅಬಾಬಾದಲ್ಲಿ ಸುದ್ದಿಗಾರ ಜೊತೆ ಲೂಲಾ ಈ ಹೇಳಿಕೆಗಳನ್ನು ನೀಡಿದ್ದಾರೆ. "ಇಂತಹ ಕ್ರೌರ್ಯ, ಹಿಟ್ಲರ್​ ಯಹೂದಿಗಳನ್ನು ಕೊಂದ ಘಟನೆ ಹೊರತು ಪಡಿಸಿ ಇಂತಹ ಘಟನೆ ಇತಿಹಾಸದಲ್ಲಿ ಬೇರೆ ಎಲ್ಲಿಯೂ ಆಗಿಲ್ಲ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವುದು ಯುದ್ಧವಲ್ಲ. ಇದು ನರಮೇಧ. ಇದು ಸೈನಿಕರ ವಿರುದ್ಧ ಸೈನಿಕರ ಯುದ್ಧವಲ್ಲ. ಇದು ಅತ್ಯಂತ ಸನ್ನದ್ಧ ಸೇನೆ ಮತ್ತು ಮಹಿಳೆಯರು ಹಾಗೂ ಮಕ್ಕಳ ನಡುವಿನ ಯುದ್ಧವಾಗಿದೆ" ಎಂದು ಆರೋಪಿಸಿದ್ದಾರೆ.

ಲೂಲಾ ಅವರ ಹೇಳಿಕೆಗಳಿಗೆ ಇಸ್ರೇಲ್​ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು 'ನಾಚಿಕೆಗೇಡು' ಎಂದು ಕರೆದಿದೆ. ಜೊತೆಗೆ ದೇಶದ ರಾಯಭಾರಿಯನ್ನು 'ಕಠಿಣ ವಾಗ್ದಂಡನೆ'ಗಾಗಿ ಒಳಪಡಿಸಲಾಗುವುದು ಎಂದು ಹೇಳಿದೆ. ಬ್ರೆಜಿಲ್​ ನಾಯಕ 'ಕೆಂಪು ಗೆರೆಯನ್ನು ದಾಟಿದ್ದಾರೆ' ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹೇಳಿದ್ದಾರೆ. "ಬ್ರೆಜಿಲ್​ ಅಧ್ಯಕ್ಷರ ಮಾತುಗಳು ನಾಚಿಕೆಗೇಡಿನ ಹಾಗೂ ಆತಂಕಕಾರಿಯಾಗಿವೆ" ಎಂದು ಹೇಳಿದ್ದಾರೆ.

ಬ್ರೆಜಿಲ್ ಅಧ್ಯಕ್ಷರ ಈ ಮಾತು, ಯಹೂದಿ ಜನರಿಗೆ ಮತ್ತು ಇಸ್ರೇಲ್​ಗೆ​ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹಾನಿ ಮಾಡುವ ಪ್ರಯತ್ನವಾಗಿದೆ. ಇಸ್ರೇಲ್​ ತನ್ನ ರಕ್ಷಣೆಗಾಗಿ ಹೋರಾಡುತ್ತಿದೆ. ಸಂಪೂರ್ಣ ವಿಜಯ ಸಾಧಿಸುವವರೆಗೆ ತನ್ನ ಭವಿಷ್ಯವನ್ನು ಭದ್ರ ಪಡಿಸುತ್ತಿದೆ. ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿಯುತ್ತದೆ." ಎಂದು ಬ್ರೆಜಿಲ್​ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಸ್ರೇಲ್​ ವಿದೇಶಾಂಗ ಸಚಿವ ಇಸ್ರೇಲ್​ ಕಾಟ್ಜ್​, "ನಾಚಿಕೆಗೇಡು ಹಾಗೂ ಗಂಭೀರವಾದ ಹೇಳಿಕೆ" ಇದಾಗಿದೆ ಎಂದು ಕರೆದಿದ್ದಾರೆ. "ಈ ಹೇಳಿಕೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್​ನ ಹಕ್ಕನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಯೈರ್​ ಲ್ಯಾಪಿಡ್​, ಲೂಲಾ ಅವರ ಹೇಳಿಕೆಗಳು, "ಅಜ್ಞಾನ ಮತ್ತು ಯಹೂದಿ ವಿರೋಧಿತ್ವವನ್ನು ತೋರಿಸುತ್ತದೆ. ಅಕ್ಟೋಬರ್​ 7 ರಂದು ಹಮಾಸ್​ ದಾಳಿಯಲ್ಲಿ ಇಸ್ರೇಲ್​ ತನ್ನ ಪ್ರಜೆಗಳ ಹತ್ಯಾಕಾಂಡದಿಂದ ಆಘಾತಕ್ಕೊಳಗಾಗಿದೆ ಎನ್ನುವುದನ್ನು ಲೂಲಾ ಅವರು ಮರೆತಿರುವಂತಿದೆ. ಒಂದು ವೇಳೆ ಭಯೋತ್ಪಾದಕ ಸಂಘಟನೆ ಬ್ರೆಜಿಲ್​ಗೆ ಅದೇ ರೀತಿ ಹಾನಿ ಮಾಡಿದ್ದರೆ ಆಗ ಲೂಲಾ ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರು ಎನ್ನುವುದು ನನಗೆ ಆಶ್ಚರ್ಯವಾಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್​ನ ಯುದ್ಧವನ್ನು ನರಮೇಧ ಎಂದು ಆರೋಪಿಸಿ, ನಾಜಿ ಜರ್ಮನಿಗೆ ಹೋಲಿಸಿದ್ದಕ್ಕಾಗಿ, ಅಧ್ಯಕ್ಷ ಲೂಲಾ ಅವರ ವಿರುದ್ಧ ಬ್ರೆಜಿಲ್​ನ ಪ್ರಮುಖ ಯುಹೂದಿ ಸಂಘಟನೆಗಳು ಕಿಡಿ ಕಾರಿವೆ. ಅಧ್ಯಕ್ಷರ ಹೇಳಿಕೆಗಳನ್ನು ಯಹೂದಿ ಸಂಘಟನೆಗಳು ಖಂಡಿಸಿವೆ.

ಕಳೆದ ವರ್ಷ ಅಕ್ಟೋಬರ್​ 7 ರಂದು ಇಸ್ರೇಲ್​ ಹಾಗೂ ಹಮಾಸ್​ ನಡುವೆ ಯುದ್ಧ ಪ್ರಾರಂಭಗೊಂಡಿತು. ಇದುವರೆಗೆ ಎರಡೂ ಕಡೆಯ ದಾಳಿಯಲ್ಲಿ 1200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಲೈಂಗಿಕ ಹಿಂಸೆ ಸೇರಿದಂತೆ ಕ್ರೂರ ಕೃತ್ಯಗಳ ನಡುವೆ 250ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿದೆ.

ಇದನ್ನೂ ಓದಿ: ಇಸ್ರೇಲ್ - ಹಮಾಸ್ ಸಂಘರ್ಷ: ಈಜಿಪ್ಟ್​​ನಲ್ಲಿ ಶಾಂತಿ ಮಾತುಕತೆ ಆರಂಭಿಸಿದ ಹಮಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.