ETV Bharat / international

ಜೋರ್ಡಾನ್​ನಲ್ಲಿ ಅಮೆರಿಕ​ ಸೈನಿಕರ ಸಾವಿಗೆ ಬೈಡನ್ ದೌರ್ಬಲ್ಯವೇ ಕಾರಣ: ಟ್ರಂಪ್

author img

By ETV Bharat Karnataka Team

Published : Jan 29, 2024, 6:30 PM IST

ಜೋರ್ಡಾನ್​ನಲ್ಲಿ ಹಿಜ್ಬುಲ್ಲಾ ಉಗ್ರರ ದಾಳಿಯಲ್ಲಿ ಅಮೆರಿಕದ ಸೈನಿಕರ ಸಾವಿಗೆ ಅಧ್ಯಕ್ಷ ಬೈಡನ್ ಅವರೇ ಹೊಣೆಗಾರರು ಎಂದು ಮಾಜಿ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದಾರೆ.

Biden's weakness, surrender led to killing of US troops in Jordan: Trump
Biden's weakness, surrender led to killing of US troops in Jordan: Trump

ವಾಷಿಂಗ್ಟನ್( ಅಮೆರಿಕ) : ಜೋರ್ಡಾನ್-ಸಿರಿಯಾ ಗಡಿಯಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕ ಸೈನಿಕರ ಸಾವಿಗೆ ಅಧ್ಯಕ್ಷ ಜೋ ಬೈಡನ್ ಅವರ ದೌರ್ಬಲ್ಯ ಮತ್ತು ಶರಣಾಗತಿಯ ಮನೋಭಾವನೆಯೇ ಕಾರಣ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ವಿದೇಶದಲ್ಲಿ ಹೋರಾಡುತ್ತಿರುವ ಅಮೆರಿಕ ಪಡೆಗಳನ್ನು ರಕ್ಷಿಸುತ್ತಿಲ್ಲ ಎಂದೂ ಟ್ರಂಪ್ ಆರೋಪಿಸಿದರು.

"ಅಮೆರಿಕ ಮೇಲಿನ ಈ ನಾಚಿಕೆಗೇಡಿನ ದಾಳಿಯು ಜೋ ಬೈಡನ್ ಅವರ ದೌರ್ಬಲ್ಯ ಮತ್ತು ಶರಣಾಗತಿಯ ಮತ್ತೊಂದು ಭಯಾನಕ ಮತ್ತು ದುರಂತ ಪರಿಣಾಮವಾಗಿದೆ" ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್ ಟ್ರೂತ್ ಸೋಷಿಯಲ್​ನಲ್ಲಿ ಬರೆದಿದ್ದಾರೆ.

ಬೈಡನ್ ಅವರ ಅನೇಕ ವಿದೇಶಾಂಗ ನೀತಿ ನಿರ್ಧಾರಗಳನ್ನು ಹಲವಾರು ರಿಪಬ್ಲಿಕನ್​ ಸಂಸದರು ಸೇರಿದಂತೆ ಡೆಮೋಕ್ರಾಟ್​ಗಳು ಸಹ ಖಂಡಿಸಿದ್ದಾರೆ. ಇರಾನ್ ಜೊತೆಗಿನ ಸಂಬಂಧವನ್ನು ಮತ್ತೆ ಉತ್ತಮಗೊಳಿಸಿದ್ದಕ್ಕಾಗಿ ಬೈಡನ್ ಅವರನ್ನು ಟ್ರಂಪ್ ಟೀಕಿಸಿದರು.

"ಮೂರು ವರ್ಷಗಳ ಹಿಂದೆ ಇರಾನ್ ದುರ್ಬಲವಾಗಿತ್ತು ಮತ್ತು ಸಂಪೂರ್ಣವಾಗಿ ನಿಯಂತ್ರಣದಲ್ಲಿತ್ತು. ನನ್ನ ಕಠಿಣ ನೀತಿಯಿಂದ ಇರಾನಿನ ಆಡಳಿತವು ತಮ್ಮ ಭಯೋತ್ಪಾದಕರಿಗೆ ಧನಸಹಾಯ ನೀಡಲು ಎರಡು ಡಾಲರ್ ಗಳನ್ನು ಕೂಡ ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ" ಎಂದು ಟ್ರಂಪ್ ಟ್ರೂತ್ ಸೋಷಿಯಲ್​ನಲ್ಲಿ ಬರೆದಿದ್ದಾರೆ.

ನಾನು ಅಧ್ಯಕ್ಷನಾಗಿದ್ದರೆ ಹಮಾಸ್ ಎಂದಿಗೂ ದಾಳಿ ಮಾಡುತ್ತಿರಲಿಲ್ಲ, ಆದರೆ ಈಗ ನಾವು ಮೂರನೇ ಮಹಾಯುದ್ಧದ ಅಂಚಿನಲ್ಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಜೋರ್ಡಾನ್ - ಸಿರಿಯಾ ಗಡಿಯಲ್ಲಿರುವ ಅಮೆರಿಕ ನೆಲೆಯ ಮೇಲೆ ಹಿಜ್ಬುಲ್ಲಾ ಭಾನುವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಅಮೆರಿಕ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಡಜನ್​ಗಟ್ಟಲೆ ಜನ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಶತ್ರುಗಳ ಗುಂಡಿನಿಂದ ಇದೇ ಮೊದಲ ಬಾರಿಗೆ ಯುಎಸ್ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ. ಮೃತ ಯೋಧರ ಗುರುತನ್ನು ಅವರ ಕುಟುಂಬಗಳಿಗೆ ಸೂಚನೆ ನೀಡಿದ 24 ಗಂಟೆಗಳವರೆಗೆ ತಡೆಹಿಡಿಯಲಾಗುವುದು ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಮೂವರು ಅಮೆರಿಕ ಸೇನಾ ಸಿಬ್ಬಂದಿಯನ್ನು ಕೊಂದು 34 ಮಂದಿಯನ್ನು ಗಾಯಗೊಳಿಸಿದ ಹಿಜ್ಬುಲ್ಲಾ ಸಂಘಟನೆಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಸಿರಿಯಾ ಮತ್ತು ಇರಾಕ್​ನಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ಲಾ ಈ ದಾಳಿ ನಡೆಸಿದೆ ಎಂದು ನನಗೆ ಖಾತ್ರಿಯಿದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೈಡನ್ ತಿಳಿಸಿದರು.

ಇದನ್ನೂ ಓದಿ : ಪಾಕಿಸ್ತಾನಕ್ಕೆ ಬಂದ ಇರಾನ್ ವಿದೇಶಾಂಗ ಸಚಿವ: ತ್ವೇಷ ಶಮನಕ್ಕೆ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.