ETV Bharat / international

ಗಾಜಾ ಯುದ್ಧದಲ್ಲಿ 10 ಸಾವಿರ ಮಹಿಳೆಯರ ಸಾವು: 19 ಸಾವಿರ ಮಕ್ಕಳು ಅನಾಥ - Women Killed In Gaza

author img

By ETV Bharat Karnataka Team

Published : Apr 16, 2024, 5:46 PM IST

ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಈವರೆಗೆ ಸುಮಾರು 10 ಸಾವಿರ ಪ್ಯಾಲೆಸ್ಟೈನ್ ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

10,000 Palestinian women killed in Gaza: UN Women
10,000 Palestinian women killed in Gaza: UN Women

ನ್ಯೂಯಾರ್ಕ್ : ಇಸ್ರೇಲ್ ಮತ್ತು ಹಮಾಸ್​ ನಡುವಿನ ಯುದ್ಧ ಆರಂಭವಾಗಿ ಆರು ತಿಂಗಳು ಕಳೆದಿದ್ದು, ಯುದ್ಧದಲ್ಲಿ ಈವರೆಗೆ ಗಾಜಾದಲ್ಲಿ 10,000ಕ್ಕೂ ಅಧಿಕ ಪ್ಯಾಲೆಸ್ಟೈನ್ ಮಹಿಳೆಯರು ಹತ್ಯೆಗೀಡಾಗಿದ್ದಾರೆ. ಇವರಲ್ಲಿ ಅಂದಾಜು 6,000 ತಾಯಂದಿರು ಸೇರಿದ್ದಾರೆ. ಈ ಮಹಿಳೆಯರ ಸಾವಿನಿಂದ 19,000 ಮಕ್ಕಳು ಅನಾಥರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಿಳಾ ವರದಿಯೊಂದು ಮಂಗಳವಾರ ತಿಳಿಸಿದೆ.

ಇಸ್ರೇಲಿ ಬಾಂಬ್ ದಾಳಿ ಮತ್ತು ನೆಲದ ಕಾರ್ಯಾಚರಣೆಗಳಿಂದ ಬದುಕುಳಿದ ಬಹುತೇಕ ಮಹಿಳೆಯರು ತಾವಿದ್ದ ಸ್ಥಳದಿಂದ ಸ್ಥಳಾಂತರಗೊಂಡಿದ್ದಾರೆ, ವಿಧವೆಯರಾಗಿದ್ದಾರೆ ಮತ್ತು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಇದನ್ನು ಗಮನಿಸಿದರೆ ಗಾಜಾ ಮೇಲೆ ನಡೆಯುತ್ತಿರುವ ಯುದ್ಧವು ಮಹಿಳೆಯರ ಮೇಲಿನ ಯುದ್ಧವಾಗಿ ಮಾರ್ಪಟ್ಟಿದೆ.

'ಯುಎನ್ ವುಮೆನ್' ಸಂಸ್ಥೆಯು ತಯಾರಿಸಿದ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗೆಗಿನ ಸರಣಿ ವರದಿಯು ಗಾಜಾ ಪಟ್ಟಿಯಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಜೀವನದ ವಾಸ್ತವಿಕ ಅಸಹ್ಯಕರ ಜೀವನ ಪರಿಸ್ಥಿತಿಗಳನ್ನು ದಾಖಲಿಸಿದೆ. ಮಹಿಳೆಯರ ಆರೋಗ್ಯ, ಘನತೆ, ಸುರಕ್ಷತೆ ಮತ್ತು ಗೌಪ್ಯತೆಗೆ ಅತ್ಯಗತ್ಯವಾದ ನೀರು, ನೈರ್ಮಲ್ಯ ಸೇವೆಗಳ ಲಭ್ಯತೆಯ ಕೊರತೆಯ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಒಂದು ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಮಹಿಳೆಯರು ಮತ್ತು ಬಾಲಕಿಯರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರು ಆಹಾರ, ಸುರಕ್ಷಿತ ಕುಡಿಯುವ ನೀರು, ಶೌಚಾಲಯಗಳು ಅಥವಾ ಹರಿಯುವ ನೀರಿನ ಲಭ್ಯತೆ ಇಲ್ಲದೆ ಮಾರಣಾಂತಿಕ ಅಪಾಯಗಳನ್ನು ಎದುರಿಸುತ್ತಿದ್ದಾರೆ.

ಗಾಜಾದ 6,90,000 ಮಹಿಳೆಯರು ಮತ್ತು ಬಾಲಕಿಯರಿಗೆ ಪ್ರತಿ ತಿಂಗಳು 10 ಮಿಲಿಯನ್ ಡಿಸ್ಪೋಸಬಲ್ ಸ್ಯಾನಿಟರಿ ಪ್ಯಾಡ್​ಗಳು ಅಥವಾ ನಾಲ್ಕು ಮಿಲಿಯನ್ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್​ಗಳು ಬೇಕಾಗುತ್ತವೆ ಎಂದು ಯುಎನ್ ವುಮೆನ್ ಸಂಸ್ಥೆ ಅಂದಾಜಿಸಿದೆ.

"ಗಾಜಾದಲ್ಲಿ ನಮಗೆ ಈಗ ಸರಳ ಮೂಲಭೂತ ಅಗತ್ಯಗಳು ಸಹ ಪೂರೈಕೆಯಾಗುತ್ತಿಲ್ಲ. ಉತ್ತಮ ಆಹಾರ, ಶುದ್ಧ ನೀರು, ಶೌಚಾಲಯ ವ್ಯವಸ್ಥೆ, ಸ್ಯಾನಿಟರಿ ಪ್ಯಾಡ್​ಗಳು, ಸ್ನಾನದ ವ್ಯವಸ್ಥೆ, ಬಟ್ಟೆ ಬದಲಾಯಿಸುವುದು ಹೀಗೆ ಯಾವುದೂ ನಮಗೆ ಸಿಗುತ್ತಿಲ್ಲ ... " ಎಂದು ಗಾಜಾ ನಿವಾಸಿ ಮಹಿಳೆಯೊಬ್ಬರು ನೋವು ಹಂಚಿಕೊಂಡರು.

ಗಾಜಾದಲ್ಲಿನ ಸುಮಾರು 1 ಲಕ್ಷಕ್ಕೂ ಅಧಿಕ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಯುಎನ್ ವುಮೆನ್ ಸಂಸ್ಥೆಯು ಆಹಾರ, ಕಂಬಳಿ, ಚಳಿಗಾಲದ ಬಟ್ಟೆಗಳು, ಸಾಬೂನು, ಡೈಪರ್​ಗಳು ಮತ್ತು ಸ್ಯಾನಿಟರಿ ಕಿಟ್​ಗಳನ್ನು ಪೂರೈಸಿದೆ. ಆದರೆ ಇದು ಗಾಜಾದ ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಹೋಲಿಸಿದರೆ ಚಿಕ್ಕ ಪ್ರಮಾಣವಾಗಿದೆ.

ಇದನ್ನೂ ಓದಿ : ಇರಾನ್​​​​ ಕ್ಷಿಪಣಿ ದಾಳಿಗೆ ಪ್ರತ್ಯುತ್ತರ ನೀಡುತ್ತೆ: ಇಸ್ರೇಲ್​ ಸೇನಾ ಮುಖ್ಯಸ್ಥ - Israel will respond to Iran

ETV Bharat Logo

Copyright © 2024 Ushodaya Enterprises Pvt. Ltd., All Rights Reserved.