ETV Bharat / entertainment

ಆಸ್ಕರ್‌ ಅಂಗಳದಲ್ಲಿ 'ಟು ಕಿಲ್ ಎ ಟೈಗರ್' ಸಾಕ್ಷ್ಯಚಿತ್ರ: ಜಾರ್ಖಂಡ್ ಕುಟುಂಬದ ಹೃದಯ ವಿದ್ರಾವಕ ಕಥೆ

author img

By ETV Bharat Karnataka Team

Published : Jan 24, 2024, 12:02 PM IST

2024ರ ಅಕಾಡೆಮಿ ಪ್ರಶಸ್ತಿಗೆ (ಆಸ್ಕರ್) ಭಾರತೀಯ ಮೂಲದ 'ಟು ಕಿಲ್ ಎ ಟೈಗರ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

To Kill a Tiger
ಟು ಕಿಲ್​ ಎ ಟೈಗರ್

ಇಂಡೋ-ಕೆನಡಿಯನ್ ಪ್ರಜೆ ನಿಶಾ ಪಹುಜಾ ನಿರ್ದೇಶಿಸಿರುವ 'ಟು ಕಿಲ್ ಎ ಟೈಗರ್' ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ ಫೀಚರ್​ ಫಿಲ್ಮ್) 2024ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಪ್ರತಿಷ್ಠಿತ 96ನೇ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್‌ ನಗರದಲ್ಲಿ ಮಾರ್ಚ್ 10ರಂದು ನಡೆಯಲಿದೆ. 'ಟು ಕಿಲ್ ಎ ಟೈಗರ್' ಜಾರ್ಖಂಡ್ ಕುಟುಂಬದ ಹೃದಯ ವಿದ್ರಾವಕ ಕಥಾಹಂದರ ಹೊಂದಿದೆ. 13 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಹೋರಾಡುವ ತಂದೆಯ ಕರುಣಾಜನಕ ಕಥೆ ಇದು.

ಈ ಸಾಕ್ಷ್ಯಚಿತ್ರವು ರಂಜಿತ್​ ಎಂಬ ಓರ್ವ ವ್ಯಕ್ತಿಯ ಬದುಕಿನ ಹೋರಾಟವನ್ನು ಚಿತ್ರಿಸಿದೆ. ಮಗಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ದುರುಳರು ಗ್ರಾಮಸ್ಥರಿಂದ ಸಹಾನುಭೂತಿ ಗಳಿಸುತ್ತಾರೆ. ಆರೋಪಗಳನ್ನು ಕೈಬಿಡುವಂತೆ ಸಂತ್ರಸ್ತ ಕುಟುಂಬವನ್ನೇ ಒತ್ತಾಯಿಸುತ್ತಾರೆ. ಅಂತಹ ಅಮಾನವೀಯ ಸನ್ನಿವೇಶದಲ್ಲಿ ತಂದೆಯ ಹೋರಾಟವನ್ನು ಸಾಕ್ಷ್ಯಚಿತ್ರ ಹೊಂದಿದೆ. 2022ರ ಸೆಪ್ಟೆಂಬರ್ 10ರಂದು ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಟು ಕಿಲ್​ ಎ ಟೈಗರ್' ಚೊಚ್ಚಲ ಪ್ರದರ್ಶನಗೊಂಡಿತು. 2023ರ ಜೂನ್​ನಲ್ಲಿ ಅಮೆರಿಕದ ಲೈಟ್‌ಹೌಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನವಾಗಿತ್ತು.

  • " class="align-text-top noRightClick twitterSection" data="">

ಆಸ್ಕರ್‌ ನಾಮಿನೇಷನ್ಸ್ ಬಹಿರಂಗವಾಗುತ್ತಿದ್ದಂತೆ, "ಈ ಕ್ಷಣದಲ್ಲಿ ನಾವು ಇಲ್ಲಿದ್ದೇವೆ. ಏಕೆಂದರೆ ಭಾರತದಲ್ಲಿ ಒಬ್ಬ ರೈತ, ಪತ್ನಿ ಮತ್ತು ಅವರ 13 ವರ್ಷದ ಮಗಳು ತಮ್ಮ ಹಕ್ಕುಗಳನ್ನು ಪಡೆಯಲು ಧೈರ್ಯ ಮಾಡಿದ್ದಾರೆ" ಎಂದು ನಿಶಾ ಪಹುಜಾ ಹೇಳಿದರು. "ಚಿತ್ರವು ನ್ಯಾಯ ಪಡೆಯಲು ಸಂತ್ರಸ್ತರನ್ನು ಪ್ರೋತ್ಸಾಹಿಸುತ್ತದೆ. ಲಿಂಗ ಸಮಾನತೆಯ ನಮ್ಮ ಹೋರಾಟದಲ್ಲಿ ಪುರುಷರೂ ನಮ್ಮೊಂದಿಗೆ ನಿಲ್ಲುತ್ತಾರೆ ಎಂಬುದು ನಮ್ಮ ಚಿತ್ರದ ಆಶಯ ಮತ್ತು ಉದ್ದೇಶ" ಎಂದಿದ್ದಾರೆ. ಪಹುಜಾ ಅವರ 2012ರ ಸಾಕ್ಷ್ಯಚಿತ್ರ 'ದಿ ವರ್ಲ್ಡ್ ಬಿಫೋರ್ ಹರ್‌' ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವವರ ಪ್ರಮಾಣ ಶೇ.30ಕ್ಕಿಂತ ಕಡಿಮೆ ಇರುವ ಭಾರತದಲ್ಲಿ ರಂಜಿತ್ ತಮ್ಮ ಮಗಳಿಗಾಗಿ ಹೋರಾಡುತ್ತಾರೆ. ಅಸಾಮಾನ್ಯ ಸಂದರ್ಭಗಳನ್ನು ಎದುರಿಸುವ ಸಾಮಾನ್ಯ ವ್ಯಕ್ತಿಯ ಭಾವನಾತ್ಮಕ ಪ್ರಯಾಣಕ್ಕೆ ನಾವು ಸಾಕ್ಷಿಯಾಗುತ್ತೇವೆ. ಕಾರ್ನೆಲಿಯಾ ಪ್ರಿನ್ಸಿಪ್ ಮತ್ತು ಡೇವಿಡ್ ಒಪೆನ್‌ಹೈಮ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೊಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್, ದಿ ಎಟರ್ನಲ್ ಮೆಮೊರಿ, ಫೋರ್ ಡಾಟರ್ಸ್ ಮತ್ತು 20 ಡೇಸ್ ಇನ್ ಮರಿಯುಪೋಲ್ ಜೊತೆ 'ಟು ಕಿಲ್​ ಎ ಟೈಗರ್' ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

ಇದನ್ನೂ ಓದಿ: 96ನೇ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ: ರೇಸ್‌ನಲ್ಲಿ ಭಾರತದ ಸಾಕ್ಷ್ಯಚಿತ್ರ 'ಟು ಕಿಲ್ ಎ ಟೈಗರ್‌'

ಕಳೆದ ವರ್ಷ ಎರಡು ಭಾರತೀಯ ಸಿನಿಮಾಗಳು ಆಸ್ಕರ್​ನಲ್ಲಿ ಸದ್ದು ಮಾಡಿದ್ದವು. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಮತ್ತು ಗುನೀತ್ ಮೊಂಗಾ ನಿರ್ಮಾಣದ 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದುಕೊಂಡಿತ್ತು. ಹೆಸರಾಂತ ನಿರ್ದೇಶಕ ಎಸ್.​ಎಸ್.ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾದ 'ನಾಟು ನಾಟು' ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.

ಇದನ್ನೂ ಓದಿ: ಹೊಸ ನಿರ್ಮಾಣ ಸಂಸ್ಥೆ ತೆರೆದ 'ಕಬ್ಜ' ನಿರ್ದೇಶಕ ಆರ್‌.ಚಂದ್ರು; 5 ಪ್ಯಾನ್​​​​​ ಇಂಡಿಯಾ ಸಿನಿಮಾ ಘೋಷಣೆ

96ನೇ ಅಕಾಡೆಮಿ ಪ್ರಶಸ್ತಿ - 'ಆಸ್ಕರ್ 2024' ಮಾರ್ಚ್ 10 ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಜಿಮ್ಮಿ ಕಿಮ್ಮೆಲ್ ನಾಲ್ಕನೇ ಬಾರಿಗೆ ಸಮಾರಂಭವನ್ನು ಆಯೋಜಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.