ETV Bharat / entertainment

ಮಹೇಶ್​ ಬಾಬು ಜೊತೆ ಸಿನಿಮಾ: ಅಧಿಕೃತ ಮಾಹಿತಿ ಹಂಚಿಕೊಂಡ ರಾಜಮೌಳಿ

author img

By ETV Bharat Karnataka Team

Published : Mar 19, 2024, 5:14 PM IST

ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗಿನ ಸಿನಿಮಾ ಬಗ್ಗೆ ನಿರ್ದೇಶಕ ಎಸ್‌.ಎಸ್ ರಾಜಮೌಳಿ ಮಾಹಿತಿ ಹಂಚಿಕೊಂಡಿದ್ದಾರೆ.

SSMB29
ಎಸ್​ಎಸ್​ಎಂಬಿ29

ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್‌.ಎಸ್ ರಾಜಮೌಳಿ ಜಪಾನ್‌ನಲ್ಲಿ ನಡೆಯುತ್ತಿರುವ 'ಆರ್‌ಆರ್‌ಆರ್' ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್​ಟಿಆರ್ ಅಭಿನಯದ ಬ್ಲಾಕ್​ಬಸ್ಟರ್ ಚಿತ್ರ ಆರ್​ಆರ್​ಅರ್​ 513 ದಿನಗಳಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

2022ರ ಮಾರ್ಚ್ 24ರಂದು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಜಾಗತಿಕವಾಗಿ ತೆರೆಗಪ್ಪಳಿಸಿತ್ತು. 2023ರಲ್ಲಿ, ಎರಡು ಗೋಲ್ಡನ್ ಗ್ಲೋಬ್‌ ಮತ್ತು ಆಸ್ಕರ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಎಂಎಂ ಕೀರವಾಣಿ ಅವರ ನಾಟು ನಾಟು ಹಾಡಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಜಾಗತಿಕವಾಗಿ ಈ ಸಿನಿಮಾ ಸಖತ್​ ಸದ್ದು ಮಾಡಿದೆ. ಸದ್ಯ ಜಪಾನ್‌ನಲ್ಲಿ ಸ್ಪೆಷಲ್​ ಸ್ಕ್ರೀನಿಂಗ್​​ ನಡೆಯುತ್ತಿದೆ.

ಈ ಅಭೂತಪೂರ್ವ ಯಶಸ್ಸಿನ ಭಾಗವಾಗಲು ನಿರ್ದೇಶಕರು ಜಪಾನ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ, ರಾಜಮೌಳಿ ಅವರು ಮಹೇಶ್ ಬಾಬು ಜೊತೆಗಿನ ತಮ್ಮ ಚಿತ್ರದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಾಹುಬಲಿ ಸರಣಿ, ಆರ್​ಆರ್​ಆರ್ ಅಂತಹ ಬ್ಲಾಕ್​ಬಸ್ಟರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರೋ ಎಸ್‌.ಎಸ್ ರಾಜಮೌಳಿ ಅವರ ಮುಂದಿನ ಚಿತ್ರಗಳ ಮೇಲೆ ಅಪಾರ ಸಂಖ್ಯೆಯ ಸಿನಿಪ್ರಿಯರು ಮಾತ್ರವಲ್ಲದೇ ಸಿನಿಗಣ್ಯರೂ ಸಹ ಸಾಕಷ್ಟು ಕುತೂಹಲವನ್ನಿಟ್ಟುಕೊಂಡಿದ್ದಾರೆ.

ಚಿತ್ರದ ಚಿತ್ರಕಥೆ ಕೆಲಸ ಪೂರ್ಣಗೊಂಡಿದೆ ಎಂಬುದಾಗಿ ರಾಜಮೌಳಿ ಖಚಿತಪಡಿಸಿದ್ದಾರೆ. "ಬರವಣಿಗೆ ಪೂರ್ಣಗೊಂಡಿದೆ. ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದೇವೆ. ನಾಯಕನಟನ ಹೆಸರು ಫೈನಲ್​ ಆಗಿದೆ. ಅವರ ಹೆಸರು ಮಹೇಶ್​ ಬಾಬು. ಅವರು ಸಖತ್ ಹ್ಯಾಂಡ್ಸ್​​ಮ್​ ಆಗಿದ್ದಾರೆ. ಚಿತ್ರವನ್ನು ಬೇಗ ಪೂರ್ಣಗೊಳಿಸುತ್ತೇವೆ ಎಂಬ ನಂಬಿಕೆ ಇದೆ. ಬಿಡುಗಡೆ ಸಂದರ್ಭ ಅವರನ್ನು ಇಲ್ಲಿಗೆ ಕರೆತರುತ್ತೇನೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಂಗುವ ಟೀಸರ್​ಗೆ ಕ್ಷಣಗಣನೆ: ಸೂಪರ್​ ಸ್ಟಾರ್ ಸೂರ್ಯ ಪೋಸ್ಟರ್ ಅನಾವರಣ

ಮಹೇಶ್ ಬಾಬು ಹೊರತುಪಡಿಸಿ ಉಳಿದ ಕಲಾವಿದರನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಹೈದರಾಬಾದ್‌ನ ಗಚಿಬೌಲಿ ಬಳಿ ಸಿನಿಮಾ ಶೂಟಿಂಗ್​ ಸೆಟ್​ನ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮೇ ಅಂತ್ಯದೊಳಗೆ ಸೆಟ್​ನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಜಮೌಳಿ ಅವರು ಜೂನ್‌ನಲ್ಲಿ ಮಹೇಶ್ ಬಾಬು ಜೊತೆ ಚಿತ್ರೀಕರಣ ಆರಂಭಿಸಲಿದ್ದಾರೆ. ಸಿನಿಮಾ ಎರಡು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ವಿದೇಶಗಳಲ್ಲೂ ಚಿತ್ರೀಕರಣ ನಡೆಯಲಿದೆ. ಒಟ್ಟಾರೆ ಹೆಸರಾಂತ ನಿರ್ದೇಶಕರ ಮುಂದಿನ ಸಿನಿಮಾದಲ್ಲಿ ಸೂಪರ್​ ಸ್ಟಾರ್ ನಟಿಸುತ್ತಿರೋ ಹಿನ್ನೆಲೆ, ಚಿತ್ರದ ಮೇಲಿನ ನಿರೀಕ್ಷೆ-ಕುತೂಹಲ ದುಪ್ಪಟ್ಟಾಗಿದೆ.

ಇದನ್ನೂ ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.