ETV Bharat / entertainment

ಸಿಧು ಮೂಸೆವಾಲಾ ತಾಯಿ ಗರ್ಭಿಣಿ ವದಂತಿ: ಗಾಯಕನ ತಂದೆ ಕೊಟ್ಟ ಸ್ಪಷ್ಟನೆಯಿದು

author img

By ETV Bharat Karnataka Team

Published : Feb 28, 2024, 1:21 PM IST

Updated : Mar 13, 2024, 7:23 PM IST

ದಿವಂಗತ ಪಂಜಾಬಿ ಗಾಯಕ ದಿ. ಸಿಧು ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಡಿತ್ತು. ಇದೀಗ ಮೃತಗಾಯಕನ ತಂದೆ ಸ್ಪಷನೆ ಕೊಟ್ಟಿದ್ದಾರೆ. ಇವು ಕೇವಲ ವದಂತಿಗಳಷ್ಟೇ.

Sidhu Moosewala's parents
ಸಿಧು ಮೂಸೆವಾಲಾ ಪೋಷಕರು

ಮಾನ್ಸಾ (ಪಂಜಾಬ್): ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಪೋಷಕರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ತಂತ್ರಜ್ಞಾನದ ಸಹಾಯದಿಂದ ಎರಡನೇ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗಷ್ಟೇ ಹರಡಿದ್ದವು. ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಪ್ರೆಗ್ನೆನ್ಸಿ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಮನೆಯಿಂದ ಹೊರಬಂದಿಲ್ಲ ಎಂಬ ಗುಸುಗುಸು ಹರಡಿತ್ತು. ಆದ್ರಿದು ಕೇವಲ ವದಂತಿಗಳಷ್ಟೇ. ಮೃತ ಗಾಯಕನ ತಂದೆ ಬಲ್ಕೌರ್ ಸಿಂಗ್, ವದಂತಿಗಳನ್ನು ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ಚರಣ್ ಕೌರ್ ಮತ್ತು ಬಲ್ಕೌರ್ ಸಿಂಗ್ ದಂಪತಿಯ ಏಕೈಕ ಪುತ್ರ. ಆದ್ರೆ ಎರಡು ವರ್ಷಗಳ ಹಿಂದೆ ಮೂಸೆವಾಲಾ ಹತ್ಯೆಗೀಡಾದರು. ಪೋಷಕರು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಕೆಲ ದಿನಗಳ ಹಿಂದೆ, ಪೋಷಕರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಯ್ತು.

ತಾಯಿ ಚರಣ್ ಕೌರ್ ಅವರು 2022ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಲ್ಲಿಸಿದ್ದ ಅವರ ಅಫಿಡವಿಟ್ ಮಾಹಿತಿ ಪ್ರಕಾರ ಅವರಿಗೀಗ 58 ವರ್ಷ. ಅವರ ಪತಿ ಬಲ್ಕೌರ್ ಸಿಂಗ್ 60 ವರ್ಷದವರು. ಈ ಹರೆಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುತ್ತಿರೋ ಹಿನ್ನೆಲೆ ಚರಣ್ ಕೌರ್ ವೈದ್ಯರ ನಿಗಾದಲ್ಲಿದ್ದಾರೆ ಎಂಬ ಊಹಾಪೋಹಗಳೆದ್ದಿದ್ದವು.

2022ರ ಮೇ ಕೊನೆಯಲ್ಲಿ ಸಿಧು ಮೂಸೆವಾಲಾ ಅವರ ಹತ್ಯೆಯಾಯಿತು. ದುರಂತದ ನಂತರ ಕುಟುಂಬ ತೀವ್ರ ದುಃಖಕ್ಕೊಳಗಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಗಾಯಕನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಎರಡು ವರ್ಷಗಳ ನಂತರ, ಕುಟುಂಬ ತಮ್ಮ ಎರಡನೇ ಮಗುವನ್ನು ಬರಮಾಡಿಕೊಳ್ಳುವ ತವಕದಲ್ಲಿದೆ ಎಂದು ಹೇಳಲಾಯ್ತು.

ಕೌರ್​-ಸಿಂಗ್​​ ದಂಪತಿಯ ಏಕೈಕ ಪುತ್ರ ಮೂಸೆವಾಲಾ ಅವರು ಈ ಹಿಂದೆ 2022ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಹಿನ್ನೆಡೆ ಕಂಡಿದ್ದರು. ಅದೇ ವರ್ಷ ಮೇ 29ರಂದು ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಗುಂಡಿನೇಟಿಗೆ ಕೊನೆಯುಸಿರೆಳೆದರು. ಗಾಯಕನ ನಿಧನದ ಬಳಿಕವೂ ಅವರ ಕೆಲ ಹಾಡುಗಳು ಅನಾವರಣಗೊಂಡಿವೆ.

ವದಂತಿಗಳನ್ನುದ್ದೇಶಿಸಿ, ದಿವಂಗತ ಗಾಯಕನ ತಂದೆ ಬಲ್ಕೌರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಶೇರ್ ಮಾಡಿದ್ದು, ''ನಮ್ಮ ಕುಟುಂಬದ ಬಗ್ಗೆ ಕಾಳಜಿ ಹೊಂದಿರುವ ಸರ್ವರಿಗೂ ನಾವು ಕೃತಜ್ಞರಾಗಿರುತ್ತೇವೆ. ಆದರೆ ಕುಟುಂಬದ ಬಗ್ಗೆ ಹರಡುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಏನೇ ಇದ್ದರೂ ನಾವು ಅಧಿಕೃತ ಮಾಹಿತಿ ಒದಗಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ ಕಂಗನಾ? ನಟಿ ಹೇಳಿದ್ದಿಷ್ಟು

ಪೊಲೀಸ್ ಮಾಹಿತಿ ಪ್ರಕಾರ, ಮೂಸೆವಾಲಾ ತಮ್ಮ ಎಸ್‌ಯುವಿ ಗಾಡಿಯಲ್ಲಿ ಸೋದರಸಂಬಂಧಿ ಗುರ್​​​ಪ್ರೀತ್ ಸಿಂಗ್ ಮತ್ತು ಪರಿಚಯಸ್ಥರಾದ ಗುರ್ವಿಂದರ್ ಸಿಂಗ್ ಅವರೊಂದಿಗೆ ಸಂಜೆ 4:30ರ ಸುಮಾರಿಗೆ ಬರ್ನಾಲಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಸಂಜೆ 5:30ಕ್ಕೆ ಜವಾಹರ್ಕೆ ಗ್ರಾಮದಲ್ಲಿ ಅವರ ಗಾಡಿಯನ್ನು ಇತರೆ ಎರಡು ಕಾರುಗಳು ಅಡ್ಡಗಟ್ಟಿದ್ದವು. ವಾಗ್ವಾದದ ಸಂದರ್ಭದಲ್ಲಿ ಸರಿಸುಮಾರು 30 ಸುತ್ತು ಗುಂಡು ಹಾರಿಸಲಾಗಿತ್ತು. ಇಬ್ಬರು ವ್ಯಕ್ತಿಗಳಿಗೆ ತೀವ್ರ ಗಾಯಗಳಾಗಿತ್ತು. ಮೂಸೆವಾಲಾ ಕೂಡ ತಮ್ಮ ಬಂದೂಕನ್ನು ಬಳಸಿದ್ದರು. ಪೊಲೀಸ್ ಭದ್ರತೆಯನ್ನು ಹಿಂತೆಗೆದುಕೊಂಡ 424 ವ್ಯಕ್ತಿಗಳ ಪೈಕಿ ಮೂಸೆವಾಲಾ ಕೂಡ ಒಬ್ಬರಾಗಿದ್ದರು. ಅವರ ರಕ್ಷಣೆಗೆ ಹಿಂದಿನ ನಾಲ್ಕು ಕಮಾಂಡೋಗಳ ಬದಲಿಗೆ ಕೇವಲ ಇಬ್ಬರು ಕಮಾಂಡೋಗಳು ಮಾತ್ರ ಇದ್ದರು ಎಂಬುದು ಈ ಪ್ರಕರಣದಲ್ಲಿ ಗಮನಿಸಬೇಕಾದ ಸಂಗತಿ.

Last Updated : Mar 13, 2024, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.