ETV Bharat / entertainment

'ಎಮರ್ಜೆನ್ಸಿ' ರಿಲೀಸ್​ ಡೇಟ್ ಅನೌನ್ಸ್: ತೆರೆ ಮೇಲೆ ಬರಲಿದೆ ಇಂದಿರಾ ಗಾಂಧಿ ಆಡಳಿತಾವಧಿ

author img

By ETV Bharat Karnataka Team

Published : Jan 23, 2024, 4:21 PM IST

2024ರ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ'ಯ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

Kangana Ranaut starrer Emergency
ಕಂಗನಾ ರಣಾವತ್​ ಅಭಿನಯದ ಎಮರ್ಜೆನ್ಸಿ

ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಕಾಯುವಿಕೆ ಕೊನೆಗೊಂಡಿದೆ. ನಟಿ ಕಂಗನಾ ರಣಾವತ್ ಮುಖ್ಯಭೂಮಿಕೆಯ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ತಾವೇ ಕಥೆ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾದ ಪೋಸ್ಟರ್ ಹಂಚಿಕೊಂಡು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ತುರ್ತುಪರಿಸ್ಥಿತಿ ಕುರಿತಾದ ಈ ಸಿನಿಮಾ 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

ಬಾಲಿವುಡ್​​ ನಟಿ ಕಂಗನಾ ರಣಾವತ್ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ 'ಎಮರ್ಜೆನ್ಸಿ' ಅಪ್​ಡೇಟ್ಸ್ ಶೇರ್ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೊಳಗೊಂಡ ಕುತೂಹಲಕಾರಿ ಪೋಸ್ಟರ್‌ ಹಂಚಿಕೊಂಡ ನಟಿ, "ಬರುತ್ತಿದೆ ಭಾರತದ ಕರಾಳ ದಿನಗಳ ಹಿಂದಿನ ಕಥೆ. 2024ರ ಜೂನ್​ 14ರಂದು ಎಮರ್ಜೆನ್ಸಿ ತೆರೆಗೆ. ಚಿತ್ರಮಂದಿರಗಳಲ್ಲಿ ಇಂದಿರಾ ಗಾಂಧಿ ಕಥೆಗೆ ಸಾಕ್ಷಿಯಾಗಿ'' ಎಂದು ಬರೆದುಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ, ಕಂಗನಾ ರಣಾವತ್​ ಅವರು ಥೇಟ್ ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕನ್ನಡಕ ಹಿಡಿದಿದ್ದು, ಹಿನ್ನೆಲೆಯಲ್ಲಿ ತುರ್ತುಪರಿಸ್ಥಿತಿ ಸುದ್ದಿಯನ್ನೊಳಗೊಂಡ ಪತ್ರಿಕೆ ಇದೆ. ಶೀರ್ಷಿಕೆಯೇ ಸೂಚಿಸುವಂತೆ ದಿವಂಗತ ರಾಜಕಾರಣಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಕಾರಣವಾಗುವ ಮತ್ತು ನಂತರದ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ. ಚಿತ್ರಕ್ಕೆ ಸ್ವತಃ ಕಂಗನಾ ಅವರೇ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಒಳಗೊಂಡ ಅವರಂತಹ ಖ್ಯಾತ ನಟರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​: ನಮ್ರತಾ ಪ್ರಕಾರ ನಿಷ್ಕಲ್ಮಷ, ಫೇಕ್​​, ವಿನ್ನರ್​ ಇವರೇ...!

ಇದಕ್ಕೂ ಮೊದಲು ಸಿನಿಮಾವನ್ನು 2023ರ ನವೆಂಬರ್​ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಅದಾಗ್ಯೂ 2023ರ ಕೊನೆಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದ ಹಿನ್ನೆಲೆ ಈ ಚಿತ್ರವನ್ನು ಮುಂದೂಡಲಾಯ್ತು. ಇನ್ನೂ ಕಂಗನಾ ತಲೈವಿ ನಿರ್ದೇಶಕ ವಿಜಯ್ ಅವರು ನಿರ್ದೇಶಿಸಲಿರುವ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಆರ್ ಮಾಧವನ್ ಜೊತೆ ಕಂಗನಾ ಸ್ಕ್ರೀನ್​ ಶೇರ್ ಮಾಡಲಿದ್ದಾರೆ.

ಇದನ್ನೂ ಓದಿ: 'S/O ಮುತ್ತಣ್ಣ' ಪ್ರಣಂ ದೇವರಾಜ್​​ಗೆ ಸಿಕ್ಕಳು ಖುಷಿ ರವಿ: 'ದಿಯಾ' ನಟಿಗೆ ಸ್ಪೆಷಲ್​​ ಬರ್ತ್​​ಡೇ ಗಿಫ್ಟ್​​

ನಿನ್ನೆ ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಯೋಧ್ಯೆಯ ರಾಮಮಂದಿರದಲ್ಲಿ 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈ ಬಹುನಿರೀಕ್ಷಿತ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಚಿತ್ರರಂಗದ ತಾರೆಯರು ಅದರಲ್ಲೂ ಬಾಲಿವುಡ್​​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಬಾಲಿವುಡ್​ ನಟಿ ಕಂಗನಾ ರಣಾವತ್ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲರಾಮನ ಪ್ರತಿಷ್ಠಾಪನೆಯಾದ ಕ್ಷಣ ಶಂಖನಾದ ಮೊಳಗಿದೆ. ಭಕ್ತರ ಮೇಲೆ ಹೆಲಿಕಾಪ್ಟರ್​ ಮೂಲಕ ಹೂವಿನ ಮಳೆ ಸುರಿಸಲಾಗಿದೆ. ಈ ವೇಳೆ ಕಂಗನಾ ರಣಾವತ್​ ತಮ್ಮೆರಡೂ ಕೈಗಳನ್ನು ಬೀಸುತ್ತಾ ಜೈ ಶ್ರೀರಾಮ್​, ಜೈ ಶ್ರೀರಾಮ್​ ಎಂದು ಕೂಗಿದ್ದಾರೆ. ಈ ಹರ್ಷೋದ್ಘಾರದ ಕ್ಷಣವನ್ನು ಸ್ವತಃ ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್​ ಸದ್ದು ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.