ETV Bharat / entertainment

'ಡಂಕಿ'ಗೆ ಫಿಲ್ಮ್‌ಫೇರ್‌ ಗರಿ: ವಿಕ್ಕಿ ಕೌಶಲ್‌ ಅತ್ಯುತ್ತಮ ಪೋಷಕ ನಟ

author img

By ANI

Published : Jan 29, 2024, 10:24 AM IST

Updated : Jan 29, 2024, 11:08 AM IST

ವಿಕ್ಕಿ ಕೌಶಲ್‌ ಅವರು 'ಡಂಕಿ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ತಮ್ಮದೇ​ ಅಭಿನಯದ ಸ್ಯಾಮ್​ ಬಹದ್ದೂರ್​ ಮೂರು ವಿಭಾಗಗಳಲ್ಲಿ ಫಿಲ್ಮ್​ಫೇರ್ ಪ್ರಶಸ್ತಿ​ ತನ್ನದಾಗಿಸಿಕೊಂಡಿತು.

Bollywood Actor Vicky Kaushal
ಬಾಲಿವುಡ್​ ನಟ ವಿಕ್ಕಿ ಕೌಶಲ್​

ಗಾಂಧಿನಗರ(ಗುಜರಾತ್​): 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ​ ಸಮಾರಂಭ ಗಾಂಧಿನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್​ ಸಿನಿಮಾ ಹಾಗೂ ತಾರೆಗಳಿಗಾಗಿಯೇ ಆಯೋಜಸುವ ಈ ಕಾರ್ಯಕ್ರಮದಲ್ಲಿ ನಟ ವಿಕ್ಕಿ ಕೌಶಲ್​ ಅವರಿಗೆ 'ಡಂಕಿ' ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ.

ಪ್ರತಿ ವರ್ಷ ಬಾಲಿವುಡ್‌ನಲ್ಲಿ ಅತ್ಯುತ್ತಮ ನಟ, ನಟಿ, ನಿರ್ದೇಶಕರು, ಚಲನಚಿತ್ರಗಳು ಸೇರಿದಂತೆ ಇನ್ನೂ ಅನೇಕ ವಿಭಾಗಗಳು ಹಾಗೂ ಇತರ ಸಿನಿಮಾ ಸಾಧಕರನ್ನು ಗುರುತಿಸಿ ಫಿಲ್ಮ್​ಫೇರ್​ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಜನವರಿ 27 ಹಾಗೂ 28ರಂದು ನಡೆದ ಹ್ಯೂಂಡಾಯ್​ ಫಿಲ್ಮ್​ಫೇರ್​ ಅವಾರ್ಡ್​ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್​ ತಾರೆಗಳು ಹಾಗೂ ಸಿನಿಮಾಗಳು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್​ ಅನುಪಸ್ಥಿತಿಯಲ್ಲಿ ನಿರ್ಮಾಪಕ ಕರಣ್​ ಜೋಹರ್​ ಪ್ರಶಸ್ತಿ ಸ್ವೀಕರಿಸಿದರು. 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಶಬಾನಾ ಅಜ್ಮಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಹಾಗೂ ಶಾರುಖ್​ ಖಾನ್, ತಾಪ್ಸಿ ಪನ್ನು ಹಾಗೂ ಬೊಮನ್​ ಇರಾನಿ​ ಮುಖ್ಯಭೂಮಿಕೆಯಲ್ಲಿದ್ದ ಡುಂಕಿ ಸಿನಿಮಾದಲ್ಲಿ ವಿಕ್ಕಿ ಕೌಶಲ್​ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾ ಮಿಶ್ರ ವಿಮರ್ಶೆ ಪಡೆದಿತ್ತು. ಸಿನಿಮಾದಲ್ಲಿ ಸ್ವಲ್ಪ ಸಮಯವೇ ಬಂದು ಹೋಗುವ ವಿಕ್ಕಿ ಕೌಶಲ್​ ಮಾತ್ರ ತಮ್ಮ ಪಾತ್ರಕ್ಕಾಗಿ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆ ಗಳಿಸಿದ್ದರು.

ಮತ್ತೊಂದೆಡೆ, ವಿಕ್ಕಿ ಕೌಶಲ್​ ಅಭಿನಯದ 'ಸ್ಯಾಮ್​ ಬಹದ್ದೂರ್​' ಮೂರು ವಿಭಾಗಗಳಲ್ಲಿ ಫಿಲ್ಮ್​ಫೇರ್​ ಅವಾರ್ಡ್​ ಮುಡಿಗೇರಿಸಿಕೊಂಡಿದೆ. ಈ ಚಿತ್ರವು ಅತ್ಯುತ್ತಮ ಧ್ವನಿ ವಿನ್ಯಾಸಕ್ಕಾಗಿ ಕುನಾಲ್​ ಶರ್ಮಾ, ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಸಚಿನ್​ ಲವ್​ಲೇಕರ್​, ದಿವ್ಯಾ ಗಂಭೀರ್​​ ಹಾಗೂ ನಿಧಿ ಗಂಭೀರ್​ ಮತ್ತು ಅತ್ಯುತ್ತಮ ಪ್ರೊಡಕ್ಷನ್​ ಡಿಸೈನ್​ಗಾಗಿ ಸುಬ್ರತಾ ಚಕ್ರವರ್ತಿ ಹಾಗೂ ಅಮಿತ್​ ರಾಯ್​ ಫಿಲ್ಮ್​ಫೇರ್​ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ನಿರ್ದೇಶಕಿ ಮೇಘನಾ ಗುಲ್ಜಾರ್​ ಸ್ಯಾಮ್​ ಬಹದ್ದೂರ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಇದನ್ನೂ ಓದಿ: '12th ಫೇಲ್' ಸಿನಿಮಾ​ಗೆ ಫಿಲ್ಮ್​ ಫೇರ್ ಪ್ರಶಸ್ತಿ​ ಗರಿ

Last Updated : Jan 29, 2024, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.