ETV Bharat / entertainment

ಶೇಖರ್ ನಿರ್ದೇಶನದ 'BAD' ಕನ್ನಡ ಸಿನಿಮಾದಲ್ಲಿ ಇಂಗ್ಲಿಷ್ ಹಾಡು

author img

By ETV Bharat Karnataka Team

Published : Jan 29, 2024, 2:10 PM IST

'BAD' ಸಿನಿಮಾದ ಇಂಗ್ಲಿಷ್​ ಹಾಡಿಗೆ ನಿಶಾನ್​ ರೈ ಸಾಹಿತ್ಯ ಬರೆದಿದ್ದು, ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

Cinema Team
ಸಿನಿಮಾ ತಂಡ

'BAD' ಟೈಟಲ್​ನಿಂದ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ, ಪಿ.ಸಿ.ಶೇಖರ್ ನಿರ್ದೇಶನ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ 'BAD' ಚಿತ್ರ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಟೀಸರ್ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಎಲ್ಲರ ಮನಗೆದ್ದಿದೆ. ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾಗಿ ಹಾಡೊಂದನ್ನು ಸಂಯೋಜಿಸಿದ್ದಾರೆ. ನಿಶಾನ್ ರೈ ಬರೆದು ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಇಂಗ್ಲಿಷ್ ಹಾಡಿನ ಲಿರಿಕಲ್ ವಿಡಿಯೋ ಫೆಬ್ರವರಿ 5ರಂದು ಬಿಡುಗಡೆಯಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಪಿ.ಸಿ.ಶೇಖರ್, "ನಾನು ಚಿತ್ರದ ಸನ್ನಿವೇಶವೊಂದನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ವಿವರಿಸಿ, ಒಂದು ಹಾಡು ಬೇಕು ಎಂದು ಕೇಳಿದೆ. ಅವರು ಮೊದಲು ನೀವು ಚಿತ್ರೀಕರಣ ಮಾಡಿಕೊಂಡು ಬನ್ನಿ. ಆಮೇಲೆ ಸನ್ನಿವೇಶಕ್ಕೆ ತಕ್ಕ ಹಾಗೆ ಹಾಡು ಸಂಯೋಜಿಸುತ್ತೇನೆ ಎಂದರು. ಆ ನಂತರ ನಿಶಾನ್ ರೈ ಬರೆದಿರುವ 'ರೈಸ್ ಫ್ರಮ್ ದ ಮೂನ್' ಎಂಬ ಇಂಗ್ಲಿಷ್ ಹಾಡಿಗೆ ಸಂಗೀತ ಸಂಯೋಜಿಸಿದರು. ಈ ಹಾಡಿನಲ್ಲಿ ಚಿತ್ರದ ಕಥೆ ಇದೆ. ನಾವು ಈ ಸನ್ನಿವೇಶಕ್ಕೆ ಕನ್ನಡ ಹಾಡನ್ನು ಬಳಸಿಕೊಂಡಿದ್ದರೆ. ಜನರು ಹಾಡನ್ನು ಎಂಜಾಯ್ ಮಾಡುತ್ತಿದ್ದರು. ಕಥೆ ಕಡೆ ಗಮನ ಕೊಡುತ್ತಿರಲಿಲ್ಲ. ಹಾಗಾಗಿ ಹಾಡು ಇಷ್ಟವಾಗಬೇಕು ಜೊತೆಗೆ ಚಿತ್ರದ ಕಥೆಯೂ ಗೊತ್ತಾಗಬೇಕು, ಅದಕ್ಕಾಗಿ ಇಂಗ್ಲಿಷ್ ಭಾಷೆಯ ಹಾಡನ್ನೇ ಬಳಸಿಕೊಳ್ಳಲಾಗಿದೆ" ಎಂದು ಹೇಳಿದರು.

"ಈ ಹಾಡು ಬ್ಲ್ಯಾಕ್ & ವೈಟ್​ನಲ್ಲಿ ಮೂಡಿಬಂದಿದೆ. ಸಿನಿಮಾ ರಾ ಕಂಟೆಂಟ್​ನಲ್ಲಿ ಇರುವುದರಿಂದ ಹೀಗಿದ್ದರೆ ಹೆಚ್ಚು ಸೂಕ್ತವೆನಿಸಿತು. ಅರ್ಜುನ್ ಜನ್ಯ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಪ್ರಮೋಶನ್​ಗಾಗಿ ಬಳಸಿಕೊಳ್ಳಲಾಗುತ್ತಿರುವ ಈ ವಿಡಿಯೋ ಹಾಡಿನಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 5ರಂದು ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಪ್ರಚಾರಕ್ಕಾಗಿ ಈ ವಿಡಿಯೋ ಸಾಂಗ್ ಬಳಸಿಕೊಳ್ಳಲಾಗುವುದು. ಆದರೆ ಮೂಲ ಗೀತೆ ಚಿತ್ರದಲ್ಲೂ ಇರುತ್ತದೆ" ಎಂದು ತಿಳಿಸಿದರು.

'ಪ್ರೀತಿಯ ರಾಯಭಾರಿ' ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ BAD ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.

ಜಿ.ರಾಜಶೇಖರ್ ಕಲಾ ನಿರ್ದೇಶನ, ಶಕ್ತಿ ಶೇಖರ್ ಛಾಯಾಗ್ರಹಣವಿದೆ‌. ಸಚಿನ್ ಜಡೇಶ್ವರ ಎಸ್.ಬಿ.ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: '12th ಫೇಲ್' ಸಿನಿಮಾ​ಗೆ ಫಿಲ್ಮ್​ ಫೇರ್ ಪ್ರಶಸ್ತಿ​ ಗರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.