ETV Bharat / entertainment

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ದ್ವಾರಕೀಶ್ - Dwarakish

author img

By ETV Bharat Karnataka Team

Published : Apr 17, 2024, 12:05 PM IST

Updated : Apr 17, 2024, 6:39 PM IST

ಕನ್ನಡದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್‌ (81) ಇನ್ನು ನೆನಪು ಮಾತ್ರ.

CM Siddaramaiah and actors paid last respect for Dwarakish
ಸಿಎಂ ಸಿದ್ದರಾಮಯ್ಯ, ಸ್ಯಾಂಡಲ್​​ವುಡ್​ ಕಲಾವಿದರಿಂದ ದ್ವಾರಕೀಶ್​ಗೆ ಅಂತಿಮ ನಮನ

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ದ್ವಾರಕೀಶ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ಇಂದು ಚಾಮರಾಜಪೇಟೆ ಕೆ.ಆರ್ ಮಿಲ್‌ ಬಳಿ ಇರುವ ಬ್ರಾಹ್ಮಣರ ಚಿತಾಗಾರದಲ್ಲಿ ನೆರವೇರಿದೆ. ಅದಕ್ಕೂ ಮುನ್ನ ದ್ವಾರಕೀಶ್​ ಅವರ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ, ಸಾವಿರಾರು ಜನರು ಅಗಲಿದ ಕಲಾವಿದನಿಗೆ ಅಂತಿಮ ನಮನ ಸಲ್ಲಿಸಿದರು.

Dwarakish
ದ್ವಾರಕೀಶ್​ಗೆ ಅಂತಿಮ ನಮನ

ಸುಮಾರು 12.30ಕ್ಕೆ ರವೀಂದ್ರ ಕಲಾಕೇತ್ರದಿಂದ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನ ಚಾಮರಾಜಪೇಟೆಯ ಟಿಆರ್ ಮಿಲ್​ಗೆ ತರಲಾಯಿತು. ನಂತರ ಪುತ್ರ ಯೋಗಿ ಸೇರಿದಂತೆ ಅವರ ಕುಟುಂಬ ವರ್ಗದಿಂದ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳ ಕಾರ್ಯ ನಡೆಸಲಾಯಿತು. ಚಿತ್ರರಂಗಕ್ಕೆ ದ್ವಾರಕೀಶ್ ಅವರ ಕೊಡುಗೆಗೆ ರಾಜ್ಯ ಸರ್ಕಾರದಿಂದ ಪೊಲೀಸ್ ಗೌರವ ಸಲ್ಲಿಸಲಾಯಿತು. ಅದರಂತೆ ದ್ವಾರಕೀಶ್ ಅವರ ಮೂವರು ಪುತ್ರರು ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಚಿತ್ರರಂಗದಲ್ಲಿ ಕರ್ನಾಟಕದ ಕುಳ್ಳ ಅಂತಾ ಕರೆಯಿಸಿಕೊಂಡಿದ್ದ ದ್ವಾರಕೀಶ್ ಇನ್ನು ನೆನಪು ಮಾತ್ರ.

ಅಂತಿಮ ನಮನ

ಅದಕ್ಕೂ ಮುನ್ನ ಸ್ಯಾಂಡಲ್​ವುಡ್​​ ನಟರಾದ ಸುದೀಪ್, ರಾಘವೇಂದ್ರ ರಾಜ್​ಕುಮಾರ್, ಚಿನ್ನೇಗೌಡ, ಶ್ರೀಮುರಳಿ, ರಮೇಶ್ ಅರವಿಂದ್, ದೇವರಾಜ್, ಶಶಾಂಕ್, ಮುಖ್ಯಮಂತ್ರಿ ಚಂದ್ರು, ಬಾಲಾಜಿ, ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಕುಮಾರ್ ಬಂಗಾರಪ್ಪ, ಮಾಳವಿಕ ಅವಿನಾಶ್, ಸುಧಾರಾಣಿ, ಹಿರಿಯ ಕಲಾವಿದರಾದ ಉಮೇಶ್ ಹಾಗೂ ಡಿಂಗ್ರಿ ನಾಗರಾಜ್ ಸೇರಿ ಹಲವರು ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ದ್ವಾರಕೀಶ್​ಗೆ ನಮನ ಸಲ್ಲಿಸಿದರು.

ಅಂತಿಮ ನಮನ

ಈ ವೇಳೆ ಮಾತನಾಡಿದ ಸಿಎಂ, ''ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅತ್ಯದ್ಭುತ ನಟನೆ ಮಾಡಿದ್ದಾರೆ. ನಿರ್ಮಾಪಕ, ಹಾಸ್ಯ ನಟ ಹಾಗೂ ನಿರ್ದೇಶಕರಾಗಿ ಗೆದ್ದಿದ್ದಾರೆ. ನಾನು ಹಾಗೂ ಅವರು ಒಮ್ಮೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹೋಗಿದ್ದೆವು. ಕನ್ನಡದ ಸೇವೆಯನ್ನು ಮಾಡಿದ ಅಪ್ರತಿಮ ಸಾಧಕ ಅವರು. ದ್ವಾರಕೀಶ್ ಅವರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿದ್ದರು. ಅವರ ಸಾವಿನಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಪತ್ನಿ ಕಾಲವಾದ ದಿನವೇ ದ್ವಾರಕೀಶ್ ಅವರು ಕೂಡ ಕಾಲವಾಗಿದ್ದಾರೆ'' ಎಂದು ಹೇಳಿದರು.

Dwarakish
ದ್ವಾರಕೀಶ್​ಗೆ ಅಂತಿಮ ನಮನ

ಅಂತಿಮ ದರ್ಶನ ಪಡೆದು ಮಾತನಾಡಿದ ರಾಕಿಂಗ್​ ಸ್ಟಾರ್​​ ಯಶ್, ''ಮಹಾನ್ ವ್ಯಕ್ತಿಗಳು ತುಂಬಾ ಜನ ಹುಟ್ಟುತ್ತಾರೆ, ಸಾಯ್ತಾರೆ. ಈ ಬದುಕಿನ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ದ್ವಾರಕೀಶ್ ಅವರನ್ನು ನೋಡಿ ಕಲಿಯಬೇಕು. ಅವರು ಯಾವಾಗಲೂ ಸ್ಫೂರ್ತಿಯಾಗಿದ್ದರು. ಕನ್ನಡ ಚಿತ್ರರಂಗ ಇರುವವರೆಗೂ ಅವರ ಸೇವೆಯನ್ನು ಮರೆಯಲ್ಲ. ಕುಟುಂಬಕ್ಕೆ ದೇವರು ಈ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ'' ಎಂದರು.

ಅಂತಿಮ ನಮನ

ಇದೇ ವೇಳೆ, ಸಂಸದೆ ಸುಮಲತಾ ಅಂಬರೀಶ್, ನಟ ರವಿಚಂದ್ರನ್, ಚರಣ್ ರಾಜ್, ಧ್ರುವ ಸರ್ಜಾ, ಗಿರಿಜಾ ಲೋಕೇಶ್, ಅನಿರುದ್ದ್, ಸುನೀಲ್ ಪುರಾಣಿಕ್, ಶಾಸಕ ಮುನಿರತ್ನ, ಹಿರಿಯ ನಟ ಅಶೋಕ್, ಸಂಗೀತ ನಿರ್ದೇಶಕ ಹಂಸಲೇಖ, ಜಗ್ಗೇಶ್, ಸುಂದರ್ ರಾಜ್, ‌ಕುಮಾರ್ ಗೋವಿಂದ್, ನಟಿ ಶೃತಿ ಸೇರಿದಂತೆ ಹಲವರು ದ್ವಾರಕೀಶ್​​ ಅಂತಿಮ ದರ್ಶನ ಪಡೆದರು.

Dwarakish
ದ್ವಾರಕೀಶ್​ಗೆ ಅಂತಿಮ ನಮನ

ಇದನ್ನೂ ಓದಿ: ಡಾ.ರಾಜ್​ ಫೋಟೋವನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿ ನಾಯಕನಾಗಿ ಗೆದ್ದ ದ್ವಾರಕೀಶ್ - Dwarakish As Hero

Last Updated : Apr 17, 2024, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.