ETV Bharat / business

ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಉಪಾಧ್ಯಕ್ಷ ಮತ್ತು ಎಸ್​ಸಿಎಂ ಮುಖ್ಯಸ್ಥ ಕರಣ್ ಅರೋರಾ ರಾಜೀನಾಮೆ - Swiggy Instamart

author img

By ETV Bharat Karnataka Team

Published : Apr 3, 2024, 6:56 PM IST

ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಉಪಾಧ್ಯಕ್ಷ ಕರಣ್ ಅರೋರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Karan Arora
Karan Arora

ನವದೆಹಲಿ: ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಉಪಾಧ್ಯಕ್ಷ ಮತ್ತು ಪೂರೈಕೆ ಸರಪಳಿ ನಿರ್ವಹಣೆ (ಎಸ್​ಸಿಎಂ) ಮುಖ್ಯಸ್ಥ ಕರಣ್ ಅರೋರಾ ಬುಧವಾರ ಕಂಪನಿಯಿಂದ ನಿರ್ಗಮಿಸುವುದಾಗಿ ಘೋಷಿಸಿದರು. ಕಂಪನಿಯಲ್ಲಿ ಅವರು ಮೂರೂವರೆ ವರ್ಷಗಳಿಂದ ಉನ್ನತ ಹುದ್ದೆಯಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಹಲವಾರು ವಿಭಾಗಗಳ ಉಪಾಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರು (ಎಸ್​ವಿಪಿ) ಸ್ವಿಗ್ಗಿಯನ್ನು ತೊರೆದಿದ್ದಾರೆ.

"ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಅನ್ನು ಆರಂಭಿಸಿದ 3.5 ವರ್ಷಗಳ ನಂತರ ನನ್ನ ಈ ಸಂತಸದ ಪಯಣ ಕೊನೆಗೊಳ್ಳುತ್ತಿದೆ" ಎಂದು ಅರೋರಾ ಲಿಂಕ್ಡ್ಇನ್ ಪೋಸ್ಟ್​ನಲ್ಲಿ ಬರೆದಿದ್ದಾರೆ. "ಇ-ಕಾಮರ್ಸ್ ನಮಗೆ ಅಪರಿಮಿತ ಬೆಳವಣಿಗೆಯ ಅವಕಾಶ ನೀಡುತ್ತದೆ ಎಂಬುದು ನನ್ನ ಭಾವನೆ. ಈ ವಲಯದಲ್ಲಿನ ಪರಿವರ್ತನೆಗಳು ಇನ್ನೂ ತ್ವರಿತವಾಗಿ ಆಗಬಹುದು. ಕಾರ್ತಿಕ್ ಗುರುಮೂರ್ತಿ ಅವರೊಂದಿಗೆ ಕೈಜೋಡಿಸಿ ಈ ಕಂಪನಿಯ ಸಹ-ಸಂಸ್ಥಾಪಕನಾಗಿದ್ದು ರೋಮಾಂಚಕವಾಗಿದೆ" ಎಂದು ಅವರು ಹೇಳಿದರು.

ಈ ಹಿಂದೆ ಸ್ವಿಗ್ಗಿಗೆ ರಾಜೀನಾಮೆ ನೀಡಿದ ಕೆಲ ಪ್ರಮುಖರನ್ನು ನೋಡುವುದಾದರೆ, ಏಪ್ರಿಲ್ 2023 ರಲ್ಲಿ ಇನ್​ಸ್ಟಾಮಾರ್ಟ್​ನ ಮಾಜಿ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಡೇಲ್ ವಾಜ್ ತಮ್ಮ ಸ್ವಂತ ಉದ್ಯಮ ಸ್ಥಾಪಿಸಲು ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೇ ತಿಂಗಳಲ್ಲಿ, ಕಂಪನಿಯ ಉಪಾಧ್ಯಕ್ಷ ಮತ್ತು ಬ್ರಾಂಡ್ ಮತ್ತು ಉತ್ಪನ್ನ ಮಾರ್ಕೆಟಿಂಗ್ ಮುಖ್ಯಸ್ಥ ಆಶಿಶ್ ಲಿಂಗಮ್ ನೇನಿ ಕೂಡ ಕಂಪನಿಯನ್ನು ತೊರೆದಿದ್ದರು. ಉಪಾಧ್ಯಕ್ಷ ಮತ್ತು ಆದಾಯ ಮತ್ತು ಬೆಳವಣಿಗೆಯ ಮುಖ್ಯಸ್ಥ ನಿಷಾದ್ ಕೆಂಕ್ರೆ ಕೂಡ ಇನ್​ಸ್ಟಾಮಾರ್ಟ್ ತೊರೆದಿದ್ದಾರೆ. ಅನುಜ್ ರಾಠಿ, ಸಿದ್ಧಾರ್ಥ್ ಸತ್ಪತಿ ಮತ್ತು ಕಾರ್ತಿಕ್ ಗುರುಮೂರ್ತಿ ಸ್ವಿಗ್ಗಿಯನ್ನು ತೊರೆದ ಇತರ ಉನ್ನತ ಕಾರ್ಯನಿರ್ವಾಹಕರಾಗಿದ್ದಾರೆ.

10 ನಿಮಿಷಗಳಲ್ಲಿ ಫಾಸ್ಟ್ಯಾಗ್​ ಡೆಲಿವರಿ: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇನ್ನು ಮುಂದೆ ಕೇವಲ 10 ನಿಮಿಷಗಳಲ್ಲಿ ಇಂಡಸ್ಇಂಡ್ ಬ್ಯಾಂಕ್ ಫಾಸ್ಟ್ಯಾಗ್​ ಅನ್ನು ತನ್ನ ಬಳಕೆದಾರರಿಗೆ ತಲುಪಿಸಲಿದೆ. ಇದಕ್ಕಾಗಿ ಅದು ಫಾಸ್ಟ್ಯಾಗ್ ವಿತರಣಾ ವೇದಿಕೆಯಾಗಿರುವ ಪಾರ್ಕ್+ ನೊಂದಿಗೆ ಕೈಜೋಡಿಸಿದೆ. 29 ನಗರಗಳಲ್ಲಿ ಸ್ವಿಗ್ಗಿ ಇನ್​ಸ್ಟಾಮಾರ್ಟ್ ನ ಈ ಸೇವೆ ಲಭ್ಯವಾಗಲಿದೆ.

ಫಾಸ್ಟ್ಯಾಗ್ ಎಂಬುದು ಟೋಲ್ ವಹಿವಾಟುಗಳನ್ನು ತ್ವರಿತಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ನಗದುರಹಿತ ಪಾವತಿ ವ್ಯವಸ್ಥೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಎನ್ಎಚ್ಎಐ ಸಹಯೋಗದೊಂದಿಗೆ 35 ಕ್ಕೂ ಹೆಚ್ಚು ಬ್ಯಾಂಕುಗಳು ನಿರ್ವಹಿಸುವ ಫಾಸ್ಟ್ಯಾಗ್ ವ್ಯವಸ್ಥೆಯಲ್ಲಿ ವಾಹನಗಳಿಗೆ ವಿಶೇಷ ಸ್ಟಿಕ್ಕರ್​ಗಳನ್ನು ಅಂಟಿಸಲಾಗಿರುತ್ತದೆ. ಇವು ಫಾಸ್ಟ್ಯಾಗ್​ ಆಗಿ ಕೆಲಸ ಮಾಡುತ್ತವೆ.

ಇದನ್ನೂ ಓದಿ : ಮುಂಬೈ ಷೇರು ಮಾರುಕಟ್ಟೆ ಇಂದು: ಇಳಿಕೆಯಲ್ಲಿ ದಿನದ ವಹಿವಾಟು ಮುಗಿಸಿದ ಸೆನ್ಸೆಕ್ಸ್,​ ನಿಫ್ಟಿ - Mumbai Share Market

ETV Bharat Logo

Copyright © 2024 Ushodaya Enterprises Pvt. Ltd., All Rights Reserved.