ETV Bharat / business

ಆರ್​ಬಿಐ ಎಂಪಿಸಿ ಸಭೆ ಫೆ.8ಕ್ಕೆ: ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ

author img

By ETV Bharat Karnataka Team

Published : Feb 5, 2024, 1:41 PM IST

ಆರ್​ಬಿಐ ಎಂಪಿಸಿ ಸಭೆ ಫೆ.8 ರಂದು ನಡೆಯಲಿದ್ದು, ಈ ಬಾರಿ ಕೂಡ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.

RBI Monetary Policy Committee (MPC) meeting: Check the date, time
RBI Monetary Policy Committee (MPC) meeting: Check the date, time

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿ ಸಭೆ ಫೆಬ್ರವರಿ 8 ರಂದು ನಡೆಯಲಿದೆ. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ರಿಸರ್ವ್ ಬ್ಯಾಂಕ್ ಕನಿಷ್ಠ ಜುಲೈವರೆಗೆ ಬಡ್ಡಿ ದರಗಳನ್ನು ಬದಲಾಯಿಸುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಕೆಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಡ್ಡಿದರ ಬದಲಾಗಬಹುದಾದರೂ ಆರ್​ಬಿಐ ಬಡ್ಡಿದರಗಳನ್ನು ಇನ್ನೂ ಕೆಲ ಕಾಲ ಯಥಾಸ್ಥಿತಿಯಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ.

ರಿಸರ್ವ್ ಬ್ಯಾಂಕ್ ಅಲ್ಪಾವಧಿ ಸಾಲದ ದರ ಅಥವಾ ರೆಪೊ ದರವು ಸುಮಾರು ಒಂದು ವರ್ಷದಿಂದ ಶೇಕಡಾ 6.5 ರಲ್ಲಿ ಸ್ಥಿರವಾಗಿ ಉಳಿದಿದೆ. ಮುಖ್ಯವಾಗಿ ಜಾಗತಿಕ ಬೆಳವಣಿಗೆಗಳಿಂದ ಪ್ರೇರಿತವಾದ ಹಣದುಬ್ಬರ ನಿಯಂತ್ರಿಸಲು ಬೆಂಚ್​ಮಾರ್ಕ್ ಬಡ್ಡಿದರವನ್ನು ಈ ಹಿಂದೆ ಫೆಬ್ರವರಿ 2023 ರಲ್ಲಿ ಶೇಕಡಾ 6.25 ರಿಂದ ಶೇಕಡಾ 6.5 ಕ್ಕೆ ಹೆಚ್ಚಿಸಲಾಗಿತ್ತು.

ಆರ್​ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಫೆಬ್ರವರಿ 6 ರಿಂದ ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಲಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರು ಫೆಬ್ರವರಿ 8 ರಂದು ಆರು ಸದಸ್ಯರ ಸಮಿತಿಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈ, 2023 ರಲ್ಲಿ ಶೇಕಡಾ 7.44 ರ ಗರಿಷ್ಠ ಮಟ್ಟವನ್ನು ತಲುಪಿ ನಂತರ ಇಳಿಕೆ ಕಂಡಿದೆ. ಆದಾಗ್ಯೂ ಇದು ಇನ್ನೂ ಮೇಲ್ಮಟ್ಟದಲ್ಲಿಯೇ ಇದ್ದು, ಡಿಸೆಂಬರ್ 2023 ರಲ್ಲಿ ಶೇಕಡಾ 5.69 ರಷ್ಟಿತ್ತು. ಬಡ್ಡಿದರಗಳ ಏರಿಳಿತಕ್ಕೆ ಹಣದುಬ್ಬರವೂ ಒಂದು ಮಾನದಂಡವಾಗಿರುತ್ತದೆ.

ಆರ್​ಬಿಐ ಎಂಪಿಸಿ ಯು ಬಾಹ್ಯ ಸದಸ್ಯರು ಮತ್ತು ಆರ್​ಬಿಐ ಅಧಿಕಾರಿಗಳು ಸೇರಿದಂತೆ ಆರು ಸದಸ್ಯರನ್ನು ಒಳಗೊಂಡಿದೆ. ಆರ್​ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ರಂಜನ್ ಮತ್ತು ಡೆಪ್ಯುಟಿ ಗವರ್ನರ್ ಮೈಕೆಲ್ ದೇಬಬ್ರತಾ ಪಾತ್ರಾ ಇವರು ಎಂಪಿಸಿಯಲ್ಲಿರುವ ಆರ್​ಬಿಐ ಅಧಿಕಾರಿಗಳಾಗಿದ್ದಾರೆ. ಶಶಾಂಕ ಭಿಡೆ, ಅಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಬಾಹ್ಯ ಸದಸ್ಯರಾಗಿದ್ದಾರೆ. ಈ ಸದಸ್ಯರೊಂದಿಗೆ ಗವರ್ನರ್ ದಾಸ್ ಕೂಡ ಎಂಪಿಸಿಯ ಭಾಗವಾಗಿದ್ದಾರೆ.

ಏತನ್ಮಧ್ಯೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 12 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಕೇಂದ್ರ ಬಜೆಟ್​ನ ಪ್ರಮುಖ ಅಂಶಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ಮಾತನಾಡಲಿದ್ದಾರೆ. ಬಜೆಟ್ ನಂತರ ಹಣಕಾಸು ಸಚಿವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವುದು ಸಂಪ್ರದಾಯವಾಗಿದೆ.

ಇದನ್ನೂ ಓದಿ : ಜನವರಿಯಲ್ಲಿ $732 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟಪ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.